ರಾಂಚಿ: ಮೇವು ಹಗರಣದ ಮತ್ತೂಂದು ಪ್ರಕರಣದಲ್ಲಿ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅಪರಾಧ ಸಾಬೀತಾಗಿದ್ದು, ಐದು ವರ್ಷಗಳ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಲಾಗಿದೆ. ಈಗಾಗಲೇ ಎರಡು ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಸದ್ಯ ಲಾಲು ಬಿರ್ಸಾ ಮುಂಡಾ ಜೈಲಿನಲ್ಲಿದ್ದಾರೆ.
ಲಾಲು ಜತೆಗೆ ಕಾಂಗ್ರೆಸ್ ನಾಯಕ ಜಗನ್ನಾಥ್ ಮಿಶ್ರಾ, ಬಿಹಾರದ ಮಾಜಿ ಸಚಿವ ಎಸ್.ಎಸ್. ಪ್ರಸಾದ್, ಮಾಜಿ ಶಾಸಕ ಧ್ರುವ್ ಭಗತ್ ಹಾಗೂ ಆರ್ ಕೆ ರಾಣಾ ಮತ್ತು ಮೂವರು ನಿವೃತ್ತ ಐಎಎಸ್ ಅಧಿಕಾರಿ ಸೇರಿದಂತೆ ಒಟ್ಟು 50 ಜನರ ಮೇಲಿನ ಅಪರಾಧ ಸಾಬೀತಾಗಿದೆ. 1992-93ರ ಅವಧಿಯಲ್ಲಿ ಚಾಯ್‌ಬಸಾ ಖಜಾನೆಯಿಂದ 33.67 ಲಕ್ಷ ರೂ. ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣ ಇದಾಗಿದೆ. ಶಿಕ್ಷೆ ಪ್ರಮಾಣ ಘೋಷಣೆ ಸಮಯದಲ್ಲಿ ಲಾಲು ಕೋರ್ಟ್‌ನಲ್ಲಿ ಹಾಜರಿದ್ದರು.
ಕಳೆದ ತಿಂಗಳು ದೇವಗಢ ಖಜಾನೆ ಹಣ ಹಿಂಪಡೆತ ಪ್ರಕರಣದಲ್ಲಿ ಲಾಲು ಅಪರಾಧ ಸಾಬೀತಾಗಿದ್ದು, ಮೂರೂವರೆ ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. 2013ರಲ್ಲಿ ಮೊದಲ ಪ್ರಕರಣದಲ್ಲಿ ಐದು ವರ್ಷ ಶಿಕ್ಷೆ ವಿಧಿಸಲಾಗಿತ್ತಾದರೂ, ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಸದ್ಯ ಇನ್ನೂ ಎರಡು ಪ್ರಕರಣಗಳು ಬಾಕಿ ಇದ್ದು, ಈ ಪೈಕಿ ಒಂದು ಪ್ರಕರಣದ ವಿಚಾರಣೆ ಬಹುತೇಕ ಮುಕ್ತಾಯಗೊಂಡಿದ್ದು ಶೀಘ್ರದಲ್ಲೇ ತೀರ್ಪು ಹೊರಬೀಳುವ ಸಾಧ್ಯತೆಯಿದೆ. ಇನ್ನೊಂದು ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ.
ಸುಪ್ರೀಂಕೋರ್ಟ್‌ಗೆ ಮೇಲ್ಮನವಿ
ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಲಾಲು ಪುತ್ರ ತೇಜಸ್ವಿ ಯಾದವ್ ಹೇಳಿದ್ದಾರೆ. ಅಲ್ಲದೆ ಸಿಬಿಐ ಕೋರ್ಟ್ ತೀರ್ಪು ಅಂತಿಮವಲ್ಲ. ಅಗತ್ಯವಿದ್ದರೆ ನಾವು ಸುಪ್ರೀಂಕೋರ್ಟ್ ಮೊರೆಯನ್ನೂ ಹೋಗಲಿದ್ದೇವೆ ಎಂದರು.