ನವದೆಹಲಿ: ದೀಪಾವಳಿ ಹಿಂದಿನ ದಿನವೇ ಕೇಂದ್ರ ಸರ್ಕಾರ ದೇಶದ ಜನರಿಗೆ ಪೆಟ್ರೋಲ್, ಡೀಸೆಲ್ ವಿಚಾರದಲ್ಲಿ ಮಹತ್ವದ ನಿರ್ಧಾರವೊಂದನ್ನು ಮಾಡಿದೆ. ಪ್ರತಿ ಲೀ. ಪೆಟ್ರೋಲ್ ಮೇಲೆ 5 ರೂ. ಮತ್ತು ಡೀಸೆಲ್ ಮೇಲೆ 10 ರೂ. ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ. ಈ ನಿರ್ಧಾರ ಗುರುವಾರದಿಂದಲೇ ಜಾರಿಗೆ ಬಂದಿದೆ.
ಕೇಂದ್ರವು ಘೋಷಿಸಿದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದಿಂದ ಜನರಿಗೆ “ಯಾವುದೇ ನಿಜವಾದ ಪರಿಹಾರ ಸಿಗುವುದಿಲ್ಲ” ಮತ್ತು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ನಂತರ ಪೆಟ್ರೋಲಿಯಂ ಬೆಲೆಯನ್ನು ಮತ್ತೆ ಹೆಚ್ಚಿಸಲಾಗುವುದು ಎಂದು ರಾಷ್ಟ್ರೀಯ ಜನತಾ ದಳ ನಾಯಕ ಲಾಲು ಪ್ರಸಾದ್ ಯಾದವ್ ಬುಧವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರ ಘೋಷಿಸಿದ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಅಸಮರ್ಪಕವಾಗಿದೆ ಎಂದು ಆರ್ ಜೆಡಿ ಹಿರಿಯ ನಾಯಕ ಹೇಳಿದರು.
ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ಅಗ್ಗ; ರಾಜ್ಯಗಳೂ ವ್ಯಾಟ್ ಇಳಿಕೆ ಮಾಡಲು ಕೇಂದ್ರ ಸಲಹೆ
“ಪ್ರತಿ ಲೀಟರ್‌ಗೆ 50 ರೂ ದರವನ್ನು ಕಡಿಮೆ ಮಾಡಿದರೆ, ಅದು ಪರಿಹಾರವನ್ನು ತರುತ್ತದೆ. ಯುಪಿ ಚುನಾವಣೆಯ ನಂತರ ಪೆಟ್ರೋಲಿಯಂ ಬೆಲೆಯನ್ನು ಮತ್ತೆ ಹೆಚ್ಚಿಸಲಾಗುವುದು” ಎಂದು ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಎಎನ್‌ಐಗೆ ತಿಳಿಸಿದರು.
ರಾಜ್ಯಗಳೂ ಇಳಿಕೆ ಮಾಡಲಿ:
ರಾಜ್ಯ ಸರ್ಕಾರಗಳೂ ಕೂಡ ಪೆಟ್ರೋಲ್, ಡೀಸೆಲ್‌ಗೆ ಸ್ಥಳೀಯ ಮಟ್ಟದಲ್ಲಿ ಇರುವ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಇಳಿಕೆ ಮಾಡಬೇಕು. ಈ ಮೂಲಕ ಸಾರ್ವಜನಿಕರಿಗೆ ಉಂಟಾಗುವ ಹೊರೆ ತಗ್ಗಿಸಲು ಕ್ರಮ ಕೈಗೊಳ್ಳಬೇಕು ಎಂದು ವಿತ್ತ ಸಚಿವಾಲಯ ಸಲಹೆ ಮಾಡಿದೆ.