ಹೊಸದಿಲ್ಲಿ : ಬಹುಕೋಟಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಸಾಮಾಜಿಕ ಮಾದ್ಯಮ ಚಟುವಟಿಕೆಗಳ ಬಗ್ಗೆ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ.
ಜಾರ್ಖಂಡ್‌ನ ರಾಂಚಿ ಕೇಂದ್ರ ಬಂಧೀಖಾನೆಯಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿರುವ ಹೊರತಾಗಿಯೂ ಲಾಲು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ.
ಲಾಲು ಅವರ ಟ್ವಿಟರ್ ಮತ್ತು ಫೇಸ್ ಬುಕ್ ಖಾತೆಯನ್ನು ಜೈಲಿನಲ್ಲಿರುವ ಅವರೇ ಸ್ವತಃ ನಿರ್ವಹಿಸುತ್ತಿದ್ದಾರೆಯೇ ಅಥವಾ ಹೊರಗೆ ಯಾರೋ ನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಚುನಾವಣಾ ಆಯೋಗ ತನಿಖೆಯಿಂದ ತಿಳಿದುಕೊಳ್ಳಲಿದೆ ಎಂದು ಬಿಹಾರದ ಮುಖ್ಯ ಚುನಾವಣಾಧಿಕಾರಿ ಎಚ್ ಆರ್ ಶ್ರೀನಿವಾಸ ಹೇಳಿದ್ದಾರೆ.
ಲಾಲು ಅವರ ಟ್ವಿಟರ್ ಖಾತೆಯ ಮೇಲೆ ಆಯೋಗವು ಕಣ್ಣಿಟ್ಟಿದೆ ಎಂದು ಪಟ್ನಾದ ನಿರ್ವಚನಾಧಿಕಾರಿ ಸಂಜಯ್ ಸಿಂಗ್ ಅವರೂ ಹೇಳಿದ್ದಾರೆ.
ಲಾಲು ಅವರು ಬಹುಕೋಟಿ ಮೇವು ಹಗರಣದ ಮೂರು ಕೇಸುಗಳಲ್ಲಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿರುವ ಸಂದರ್ಭದಲ್ಲೇ ಈ ವಿದ್ಯಮಾನ ಬೆಳಕಿಗೆ ಬಂದಿದೆ.