ಶಿರ್ವ: ಕರ್ನಾಟಕ ಲಲಿತಕಲಾ ಅಕಾಡೆಮಿಯ 2021ನೇ ಸಾಲಿನ ಪ್ರಶಸ್ತಿಗೆ ಶಿರ್ವ ಮೂಲದ ಯುವ ಚಿತ್ರ ಕಲಾವಿದ ಸುನೀಲ್ ಮಿಶ್ರಾ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 25 ಸಾವಿರ ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಒಟ್ಟು 85 ಕಲಾಕೃತಿಗಳ ಪೈಕಿ ಮಿಶ್ರಾ ಅವರ ಕಲಾಕೃತಿ ಸೇರಿದಂತೆ 10 ಕಲಾಕೃತಿಗಳನ್ನು ಆಯ್ಕೆ ಮಾಡ ಲಾಗಿದೆ. ಅಕಾಡೆಮಿಯ 50ನೇ ಕಲಾ ಪ್ರದರ್ಶನದ ಅಂಗವಾಗಿ ಬೆಂಗಳೂರು ಮತ್ತು ದಿಲ್ಲಿಯ ಮೋಡರ್ನ್ ಆರ್ಟ್ ಗ್ಯಾಲರಿಯಲ್ಲಿ ಕಲಾಕೃತಿಗಳ ವಿಶೇಷ ಪ್ರದರ್ಶನ ನಡೆಯಲಿದೆ.
ಮಿಶ್ರಾ ಅವರ ಕಂಚಿನ ಕಲಾಕೃತಿ (ಹ್ಯೂಮನ್ ಮಾನ್ಯುಮೆಂಟ್ಸ್ ಫಾರ್ ಸೇಲ್) ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2019ನೇ ಸಾಲಿನ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಬಹುಮಾನಕ್ಕೆ ಆಯ್ಕೆಯಾಗಿತ್ತು. 2016ರಲ್ಲಿ ಯುನೆಸ್ಕೋ ವತಿಯಿಂದ ನಡೆದ ಇಂಟರ್‌ನ್ಯಾಶನಲ್ ಆರ್ಟ್‌ವೀಕ್ ಪ್ರದರ್ಶನದಲ್ಲಿ ಭಾಗವಹಿಸಿರುವುದಲ್ಲದೆ ಅವರ ಕಲಾಕೃತಿ ಯುನೆಸ್ಕೋ ಮೂಲಸಂಸ್ಥೆಗೆ ಆಯ್ಕೆಯಾಗಿತ್ತು.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ 13 ಅಕ್ರಮ ರೋಹಿಂಗ್ಯಾ ವಲಸಿಗರ ಬಂಧನ
ಬೆಂಗಳೂರು ವಿವಿಪುರಂ ಕೆಪಿಎಸ್ ನೂತನ ವಾಣಿವಿಲಾಸ ಸಂಸ್ಥೆಯಲ್ಲಿ ಕಲಾ ಶಿಕ್ಷಕರಾಗಿರುವ ಸುನೀಲ್ ಮಿಶ್ರಾ ವಿದ್ಯಾರ್ಥಿ ದೆಸೆಯಿಂದಲೇ ಏಕವ್ಯಕ್ತಿ ಕಲಾ ಪ್ರದರ್ಶನ, ಗುಂಪು ಪ್ರದರ್ಶನ ನಡೆಸಿ ಯಶಸ್ವಿಯಾಗಿದ್ದು, ರೇಖಾ ಚಿತ್ರ, ಶಿಲ್ಪಕಲೆ, ತೈಲವರ್ಣ, ಕಾಷ್ಠಶಿಲ್ಪ, ಟೆರ್ರಾ ಕೋಟಾ, ಮುಖವಾಡ ತಯಾರಿ, ಅಕ್ರಿಲಿಕ್ ಮಾಧ್ಯಮ, ಲೋಹ ಶಿಲ್ಪ (ಮಿಶ್ರಲೋಹ) ರಚಿಸುವುದರಲ್ಲಿ ಸಿದ್ಧಹಸ್ತರೆನಿಸಿಕೊಂಡಿದ್ದಾರೆ.
ಶಿರ್ವದ ಹಿಂದೂ ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಹಾಗೂ ಶಿರ್ವ ಸಂತ ಮೇರಿ ಶಿಕ್ಷಣಸಂಸ್ಥೆಯಲ್ಲಿ ಪ.ಪೂ. ಶಿಕ್ಷಣ ಪಡೆದು, ಉಡುಪಿಯ ಸಿಕೆಎಂ ಕಲಾಶಾಲೆಯಲ್ಲಿ ಕಲಾ ವ್ಯಾಸಂಗ ಮಾಡಿದ್ದರು. ಸ್ವಲ್ಪ ಸಮಯ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು.