Advertisement

ಸೋದರ ಮಾವನ ಕೃಪೆಯಿಂದ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ : ಲಲಿತಾಬಾಯಿ

08:34 AM Oct 31, 2022 | Team Udayavani |

ವಿಜಯಪುರ: ಅನಕ್ಷರಸ್ಥೆಯಾದ ನನ್ನನ್ನು ಸೋದರಮಾವ ದೇವಪ್ಪ ದಶವಂತ ರಂಗ ಕಲೆಯ ಗುರುವಾಗಿ ಮಾರ್ಗದರ್ಶನ ಮಾಡಿದ್ದೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ.

Advertisement

ಹೀಗಂತ ಸಂಭ್ರಮದಿಂದ ಪ್ರತಿಕ್ರಿಯಿಸಿದ್ದು 67 ನೇ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಬಸವನಾಡಿನ ರಂಗಕರ್ಮಿ ಲಲಿತಾಬಾಯಿ ಚನ್ನದಾಸರ ಉರ್ಫ ದಶವಂತ.

ಪ್ರಶಸ್ತಿ ಪ್ರಕಟವಾದ ಸುದ್ದಿ ತಿಳಿಯುತ್ತಲೇ ಲಲಿತಾಬಾಯಿ ಕುಟುಂಬದಲ್ಲಿ ಸಂತಸದ ಸಂಭ್ರಮದ ಬುಗ್ಗೆ ಹರಿಯುತ್ತಿದೆ.

ಊರೂರು ಅಲೆದು ರಂಗಪ್ರದರ್ಶನ ನೀಡಿದ ಅರ್ಧ ಶತಮಾನಕ್ಕೂ ಹೆಚ್ವು ಕಾಲದ ಕಲಾ ಸರಸ್ವತಿ ಸೇವೆಗೆ ಸಂದ ಪ್ರಶಸ್ತಿ ಸಹಜವಾಗಿ ಖುಷಿ ನೀಡಿದೆ ಎನ್ನುತ್ತಾರೆ ಲಲಿತಾಬಾಯಿ.

ಕರ್ನಾಟಕದ ಗಡಿಭಾಗವಾದ ಇಂಡಿ ತಾಲೂಕಿನ ಚೌಡಿಹಾಳ ಮೂಲದ ಲಲಿತಾಬಾಯಿ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಕನ್ನಡದ ಗ್ರಾಮಗಳಲ್ಲಿ ರಂಗಸಜ್ಜಿಕೆಗಳಲ್ಲಿ ತಮ್ಮ ಪ್ರತಿಭಾವಂತಿಕೆ ಮೆರೆದಿದ್ದಾರೆ.

Advertisement

ಬಾಲ್ಯದಲ್ಲಿ ನನ್ನಲ್ಲಿದ್ದ ರಂಗಾಸಕ್ತಿಯನ್ನು ಕಂಡ ನಮ್ಮ ತಂದೆ ಲಾಲಪ್ಪ ಅವರು, ರಂಗಭೂಮಿಯಲ್ಲಿ ಹೆಸರು ಮಾಡಿದ್ದ ಸೋದರಮಾವ ದೇವಪ್ಪ ಅವರ ಬಳಿ ನನ್ನನ್ನು ಕಳಿಸಿದರು. ಸೋದರಮಾವ ಕಲಿಸಿದ ರಂಗವಿದ್ಯೆ ರಂಗಭೂಮಿಯ ಮೂಲಕ ನನಗೆ ಎಲ್ಲವನ್ನೂ ಕೊಟ್ಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬಡತನ ಮರೆಸಿ, ಹಸಿವ ನೀಗಿಸಿ, ಗೌರವಯುತ ಜೀವನಕ್ಕೆ ದಾರಿ ಕಲ್ಪಿಸಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಲಲಿತಾಬಾಯಿ.

ಕಳೆದ ಎರಡು ವರ್ಷಗಳ ಹಿಂದೆ ನಾಟಕ ಅಕಾಡಮಿ ಪ್ರಶಸ್ತಿ ತಂದುಕೊಟ್ಟ ರಂಗ ಕಲೆ ಇದೀಗ, ರಾಜ್ಯೋತ್ಸವ ಪ್ರಶಸ್ತಿ ಕೊಡಿಸುವ ಹಂತಕ್ಕೆ ನನ್ನನ್ನು ಕರೆತಂದು ನಿಲ್ಲಿಸಿದೆ. ಇದು ನನ್ನ ವೃತ್ತಿ ಜೀವನದ ಸಾರ್ಥಕ‌ ಹಾಗೂ ಆಜೀವ ಸ್ಮರಣೀಯ ಕ್ಷಣ ಎನಿಸಿದೆ‌ ಎಂದು ಸಂತೃಪ್ತಿ ವ್ಯಕ್ತಪಡಿಸುತ್ತಾರೆ ಲಲಿತಾಬಾಯಿ.

ಇದನ್ನೂ ಓದಿ : ನವೀಕರಣಗೊಂಡ ನಾಲ್ಕೇ ದಿನಕ್ಕೆ ಕುಸಿದು ಬಿದ್ದ ಸೇತುವೆ :132 ಮಂದಿ ಸಾವು, 177 ಮಂದಿಯ ರಕ್ಷಣೆ

Advertisement

Udayavani is now on Telegram. Click here to join our channel and stay updated with the latest news.

Next