ವಿಧಾನ ಪರಿಷತ್ತು: ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಅಂಗ ಸಂಸ್ಥೆಯಾದ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಐಟಿಡಿಸಿ) ವಶದಲ್ಲಿರುವ ಮೈಸೂರಿನ ಲಲಿತ ಮಹಲ್ ಅರಮನೆಯನ್ನು ರಾಜ್ಯ ಸರ್ಕಾರದ ವಶಕ್ಕೆ ಪಡೆಯಲು ಗಂಭೀರ ಪ್ರಯತ್ನ ಮುಂದುವರಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಜೆಡಿಎಸ್‌ನ ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಲಿಖೀತ ಉತ್ತರ ನೀಡಿರುವ ಅವರು, ಲಲಿತ ಮಹಲ್ ಅರಮನೆಯು ರಾಜ್ಯ ಸರ್ಕಾರದ ಆಸ್ತಿ. ಇದರ ನಿರ್ವಹಣೆ ಹಾಗೂ ಮೇಲ್ವಿಚಾರಣೆಯನ್ನು ಕೇಂದ್ರದ ಐಟಿಡಿಸಿಗೆ ವಹಿಸಲಾಗಿದ್ದು ನಿಗಮದ ವಶದಲ್ಲಿದೆ. ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯವು ನಿರ್ವಹಣೆ ಹಾಗೂ ಮೇಲ್ವಿಚಾರಣೆ ಆಧಾರದ ಮೇಲೆ ಅರಮನೆಯನ್ನು ಖಾಸಗಿ ನಿರ್ವಹಣೆಗೆ ವಹಿಸುವ ಸಲುವಾಗಿ ರಾಜ್ಯ ಸರ್ಕಾರದ ಅಭಿಪ್ರಾಯ ಕೇಳಿತ್ತು. ಅದರಂತೆ ಅರಮನೆ ಹಿಂತಿರುಗಿಸುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.
ಹಾಲಿ ಸೌಲಭ್ಯ ಹಿಂದಿರುಗಿಸಲು ವ್ಯಾವಹಾರಿಕ ಸಲಹೆಗಾರರನ್ನು ನೇಮಿಸಲು ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯವು ಕ್ರಮ ವಹಿಸಿದೆ. ಲಲಿತ ಮಹಲ್ ಅರಮನೆಯನ್ನು ಹಿಂದಕ್ಕೆ ಪಡೆಯಲು ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದೊಂದಿಗೆ ಗಂಭೀರ ಪ್ರಯತ್ನ ಮುಂದುವರಿಸಲಾಗಿದೆ. ಅರಮನೆ ಹಿಂಪಡೆದ ಬಳಿಕ ನಿರ್ವಹಣೆಗೆ
ನಿಯಮಾವಳಿ ರೂಪಿಸಲಾಗುವುದು ಎಂದು ವಿವರಿಸಿದ್ದಾರೆ. ಪಾರಂಪರಿಕ ಲಲಿತ ಮಹಲ್ ಅರಮನೆಯನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಬಗ್ಗೆ ಇತ್ತೀಚೆಗೆ “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.