ಮೈಸೂರು: ಪಟ, ಪಟ ಗಾಳಿಪಟ ನಗರದ ಲಲಿತ್ ಮಹಲ್ ಹೆಲಿಪ್ಯಾಡ್‌ನಲ್ಲಿ ಭಾನುವಾರ ಗಾಳಿಪಟಗಳದ್ದೇ ಕಾರುಬಾರು. ಮೈಸೂರು ವೀರಶೈವ ಸಜ್ಜನ ಸಂಘ ಆಯೋಜಿಸಿದ್ದ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ, ಮಕ್ಕಳು-ಮಹಿಳೆಯರು-ಹಿರಿಯರು ಸೇರಿ ನಾನಾ ವಿವಿಧ ಗಾಳಿಪಟಗಳನ್ನು ಆಗಸದಲ್ಲಿ ಹಾರಾಡಿಸಿ ಹಿರಿಹಿರಿ ಹಿಗ್ಗಿದರು.
ವೀರಶೈವ ಸಜ್ಜನ ಸಂಘ ತನ್ನ ಸದಸ್ಯರಿಗಾಗಿ ಸತತವಾಗಿ 21 ವರ್ಷದಿಂದ ಗಾಳಿಪಟ ಸ್ಪರ್ಧೆ ಆಯೋಜಿಸಿಕೊಂಡು ಬರುತ್ತಿದ್ದು, 120ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಬಾಲಂಗೋಚಿ ಇರುವ ಪಟ, ಬಾಲಂಗೋಚಿ ಇಲ್ಲದ ಪಟ ಎರಡು ವಿಭಾಗದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಸ್ವದೇಶಿ, ವಿದೇಶಿ ಗಾಳಿಪಟ ಹಾರಿ ಬಿಡಲಾಯಿತು.
ಐದು ವಿಭಾಗಗಳಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ, ಗಮನ ಸೆಳೆದ ಉತ್ತರ ಪಟಕ್ಕೆ ಆಕರ್ಷಕ ಪರ್ಯಾಯ ಪಾರಿತೋಷಕ ನೀಡಲಾಯಿತು. ಸ್ಪರ್ಧೆಯಲ್ಲಿ ಸ್ವದೇಶಿ, ವಿದೇಶಿಯರ ವಿಭಾಗದಲ್ಲಿ ವಿಮಾನ, ಗರುಡ, ಸ್ವಸ್ತಿಕ್, ಶಿವಲಿಂಗ, ಹನುಮಂತನ ಆಕೃತಿ ಸೇರಿದಂತೆ ನಾನಾ ನಮೂನೆಯ ಗಾಳಿಪಟಗಳನ್ನು ಹಾರಿ ಬಿಡಲಾಯಿತು.
ಸ್ಕಂದನ್ ಅವರು 7/7 ಅಡಿ ಅಳತೆ, ನಿಖೀಲ್ ಅವರ 6/6 ಅಡಿ, ಕಿರಣ್ ಅವರು 6/6.50 ಅಡಿ ಬೃಹತ್ ಗಾಳಿ ಪಟ ಹಾರಿ ಬಿಡುವ ಮೂಲಕ ಗಮನ ಸೆಳೆದರು. ಶಿವಶಂಕರ್ ಹಾಗೂ ಗೆಳೆಯರು 125 ಗಾಳಿಪಟಗಳನ್ನು ಪೋಣಿಸಿ ತಂದಿದ್ದ ಅತಿ ಉದ್ದದ ಗಾಳಿಪಟವನ್ನು ಹಾರಿಸುವ ಪ್ರಯತ್ನ ಕೈಗೂಡಲೇ ಇಲ್ಲ.
ಸ್ನೇಹಿತರೆಲ್ಲಾ ಜತೆಗೂಡಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟರೂ ಪಟವನ್ನು ಆಗಸಕ್ಕೇರಿಸುವ ಪ್ರಯತ್ನ ಕೈಗೂಡದೆ ನಿರಾಸೆಯಿಂದ ಹೊರನಡೆದರು. ಸಂಘದ ಅಧ್ಯಕ್ಷ ಎಂ.ಎನ್.ಜೈಪ್ರಕಾಶ್, ಗೌರವ ಕಾರ್ಯದರ್ಶಿ ಎಂ.ಟಿ.ಮಲ್ಲಿಕಾರ್ಜುನ, ಉಪಾಧ್ಯಕ್ಷ ಎಸ್.ಆರ್.ಜಗದೀಶ್ ಇತರರು ಹಾಜರಿದ್ದರು.