Advertisement
ಸಾಂಸ್ಕೃತಿಕ ನಗರಿ ಮೈಸೂರಿನ ಹೆಗ್ಗುರುತಾದ ಈ ಅರಮನೆ ರಾಜಾತಿಥ್ಯಕ್ಕೆ ಹೆಸರುವಾಸಿ. ಲಲಿತ್ ಮಹಲ್ ಹೋಟೆಲ್ ದೇಶ-ವಿದೇಶದ ಪ್ರವಾಸಿಗ ರಲ್ಲದೇ ರಾಜಕಾರಣಿಗಳು, ಸಿನಿಮಾ ಕಲಾವಿದರು ಸೇರಿ ರಾಜ್ಯದ ವಿವಿಧ ಭಾಗಗಳ ಗಣ್ಯರು ವಾಸ್ತವ್ಯಕ್ಕಾಗಿ ಇಲ್ಲಿಗೆ ಆಗಮಿಸುವುದು ವಾಡಿಕೆ. ಸದ್ಯಕ್ಕೆ ಅರಮನೆಯನ್ನು ಅರಣ್ಯ ವಸತಿ ಮತ್ತು ವಿಹಾರ ಧಾಮದಿಂದ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ.
Related Articles
Advertisement
ಖಾಸಗೀಕರಣಕ್ಕೆ ವಿರೋಧ: ನೂರು ವರ್ಷ ಪೂರೈಸಿರುವ ಈ ಅರಮನೆಯ ಶತಮಾನೋತ್ಸವ ಆಚರಣೆಯನ್ನು ಅಕ್ಟೋಬರ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಶತಮಾನೋತ್ಸವ ಆಚರಣೆಗೂ ಮುನ್ನವೇ ಸರ್ಕಾರ ಖಾಸಗೀಕರಣ ಮಾಡಲು ಮುಂದಾಗಿರುವುದಕ್ಕೆ ಮೈಸೂರಿ ಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಉದ್ಯೋಗಿಗಳಿಗೆ ಅಭದ್ರತೆ ಭೀತಿ: ಪ್ರಸ್ತುತ ಲಲಿತ್‌ಮಹಲ್ ಅರಮನೆಯಲ್ಲಿ 500ಕ್ಕೂ ಹೆಚ್ಚು ಮಂದಿ ವಿವಿಧ ಸ್ತರದಲ್ಲಿ ಕಾರ್ಯನಿರ್ವಹಿಸು ತ್ತಿದ್ದಾರೆ. ಒಂದು ವೇಳೆ ಈ ಹೋಟೆಲ್‌ಅನ್ನು ಖಾಸಗೀಕರಣಗೊಳಿಸಿದರೆ, ಅಲ್ಲಿರುವ ಸಿಬ್ಬಂದಿ ಯನ್ನು ಮುಂದುವರಿಸುವುದು ಅನುಮಾನ. ಜತೆಗೆ ಅರಮನೆ ಸುತ್ತಲಿರುವ 53 ಎಕರೆ ಪ್ರದೇಶವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಅಪಾಯವೂ ಇದೆ ಎಂದು ಜನಪ್ರತಿನಿಧಿ ಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.
ಒಂದು ವೇಳೆ ಲಲಿತ್ ಮಹಲ್ ಪ್ಯಾಲೇಸ್ ತಾಜ್ ಹೋಟೆಲ್ಸ್ ಗ್ರೂಪ್ ತೆಕ್ಕೆಗೆ ಸಿಕ್ಕರೆ 7 ಸ್ಟಾರ್ ಹೋಟೆಲ್ ಆಗಿ ಮಾರ್ಪಡು ಮಾಡಿದರೆ ಜನ ಸಾಮಾನ್ಯರು ಲಲಿತ್ ಮಹಲ್ ನೋಡುವುದು ಕಷ್ಟ ಸಾಧ್ಯ. ಹಾಗಾಗಿ ಹೋಟೆಲನ್ನು ಅರಣ್ಯ ವಸತಿ ಮತ್ತು ವಿಹಾರ ಧಾಮ ಸಂಸ್ಥೆಯೇ ಮುಂದುವರಿಸಿಕೊಂಡು ಹೋಗುವುದೇ ಸೂಕ್ತ ಎಂದು ಕೈಗಾರಿಕೋದ್ಯಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಲಿತ್ ಮಹಲ್ ವಿಶೇಷತೆ ಏನು?: ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ರಾಜ ಅತಿಥಿಗಳಿಗಾಗಿ ಆತಿಥ್ಯ ನೀಡಲು ಲಲಿತ್ ಮಹಲ್ ಅರಮನೆಯನ್ನು 1921ರಲ್ಲಿ 13 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ್ದರು.
ಕಟ್ಟಡವು ಲಂಡನ್‌ನ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ ವಾಸ್ತುಶಿಲ್ಪದ ಮಾದರಿಯಲ್ಲಿ ನಿರ್ಮಾಣವಾಗಿದ್ದು, ಇದನ್ನು ಡಬ್ಲ್ಯೂಫ್ರಿಚ್ಲೆ ಎಂಬುವವರು ವಿನ್ಯಾಸಗೊಳಿಸಿದ್ದರು. ಹೊರ ಭಾಗದಿಂದ ನೋಡಲು ಬಿಳಿ ಬಣ್ಣದಿಂದ ವೈಭವೋಪೇತವಾಗಿ ಕಾಣುವ ಈ ಅರಮನೆ, ಒಳಾಂಗಣದಲ್ಲಿಯೂ ವೈಭವಯುತವಾಗಿದೆ. ಗೋಲಾಕಾರದ ಗುಮ್ಮಟಗಳು, ಪ್ರವೇಶ ಮಂಟಪಕ್ಕಿಂತ ಮೇಲಿರುವ ಕೇಂದ್ರ ಗುಮ್ಮಟ ಪ್ರಧಾನವಾಗಿದ್ದು, ಹಲವು ಚಿತ್ರಗಳ ಚಿತ್ರೀಕರಣ ಈ ಅರಮನೆಯಲ್ಲಿ ನಡೆದಿರುವುದು ವಿಶೇಷ.
ಅರಮನೆಯ ಪ್ರಮುಖ ಭಾಗದಲ್ಲಿ ವೈಸ್ರಾಯ್ ಸೂಟ್, ವೈಸರೀನ್ ಸೂಟ್, ಡ್ಯುಪ್ಲೆಕ್ಸ್ ಸೂಟ್, ಹೆರಿಟೇಜ್ ಸೂಟ್ ಮತ್ತು ಟಾರೆಟ್ ರೂಮ್ ಸೇರಿ 22 ಕೊಠಡಿಗಳಿದ್ದರೆ, ಅನೆಕ್ಸ್‌ನಲ್ಲಿ 32 ಸುಂದರ ಕೊಠಡಿಗಳಿವೆ.
-ಸತೀಶ್ ದೇಪುರ