ನವದೆಹಲಿ: ಭಾರತದ ಕೋಟ್ಯಧಿಪತಿಗಳ ಸಾಲಿಗೆ ಹೊಸ ವ್ಯಕ್ತಿ ಸೇರ್ಪಡೆಯಾಗಿದ್ದು, ಖ್ಯಾತ ಮದ್ಯ ಕಂಪನಿ ರ್ಯಾಡಿಕೊ ಖೈತಾನ್‌ನ ಅಧ್ಯಕ್ಷ ಲಲಿತ್ ಖೈತಾನ್ ಈ ಪಟ್ಟ ಅಲಂಕರಿಸಿದ್ದಾರೆ. ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಲಲಿತ್ ಇದೀಗ ದೇಶದ ಅತ್ಯಂತ ಪ್ರಭಾವಿ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ.
ಮದ್ಯ ಮಾರುಕಟ್ಟೆಯಲ್ಲಿರುವ ಕ್ಷಿಪ್ರ ಬೆಳವಣಿಗೆಯನ್ನೇ ಬಂಡವಾಳ ಮಾಡಿಕೊಂಡು ಸಂಸ್ಥೆ ಕಟ್ಟಿದ ಲಲಿತ್ ಯಶಸ್ವಿ ಉದ್ಯಮಿಯಾಗಿದ್ದಲ್ಲದೆ, ಕಂಪನಿಯ ಆದಾಯವನ್ನು 380 ದಶಲಕ್ಷ ಡಾಲರ್‌ಗೆ ತಲುಪಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಅವರು ಮದ್ಯವನ್ನೇ ಸೇವಿಸುತ್ತಿಲ್ಲವಂತೆ.
ಅವರ ಸಂಸ್ಥೆಯ ಷೇರುಗಳ ಮಾರಾಟದಲ್ಲಿ ಈ ವರ್ಷ ಶೇ.50ರಷ್ಟು ಹೆಚ್ಚಳ ದಾಖಲಾಗಿದ್ದು, ಅವರ ನಿವ್ವಳ ಆಸ್ತಿಯ ಮೌಲ್ಯ 1 ಶತಕೋಟಿ ಡಾಲರ್‌ನಷ್ಟು ಹೆಚ್ಚಳವಾಗಿದೆ ಎಂದು “ಫೋರ್ಬ್ಸ್ ಇಂಡಿಯಾ” ವರದಿ ಮಾಡಿದೆ.
ರಾಮ್‌ಪುರ ಡಿಸ್ಟಲಿರಿ ಎಂದು ಖೈತಾನ್ ಅವರ ತಂದೆ ಜಿಎನ್ ಖೈತಾನ್ ಅವರು ನಡೆಸುತ್ತಿದ್ದ ಸಂಸ್ಥೆಯನ್ನೇ ಲಲಿತ್ ರ್ಯಾಡಿಕೊ ಖೈತಾನ್ ಆಗಿ ಬದಲಿಸಿದರು. ಅಲ್ಲದೆ, ಮ್ಯಾಜಿಕ್ ಮೊಮೆಂಟ್ಸ್ ವೋಡ್ಕಾ, 8ಪಿಎಂ ವಿಸ್ಕಿ, ಓಲ್ಡ್ ಅಡ್ಮಿರಲ್ ಬ್ರಾಂಡಿ, ರಾಮ್‌ಪುರ ಸಿಂಗಲ್ ಮಾಲ್ಟ್ ವಿಸ್ಕಿ ಅಂಥ ಖ್ಯಾತ ಬ್ರ್ಯಾಂಡ್‌ಗಳನ್ನು ಹುಟ್ಟುಹಾಕಿ ಮದ್ಯಲೋಕದಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದಾರೆ.
ಅಮೆರಿಕದ ಹಾರ್ವರ್ಡ್ ವಿವಿಯಿಂದ ಮ್ಯಾನೇಜೀರಿಯಲ್ ಫೈನಾನ್ಸ್ ಆ್ಯಂಡ್ ಅಕೌಂಟಿಂಗ್ ಕೋರ್ಸ್ ಅನ್ನು ಪೂರ್ತಿಗೊಳಿಸಿದ್ದಾರೆ.