Advertisement
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಸಿಗದೆ ಪೈಪ್‌ಲೈನ್ ಅಳವಡಿಕೆ ತಡವಾಗುತ್ತಿದೆ ಎಂಬ ವಿಚಾರದಲ್ಲಿ ಅಧಿಕಾರಿಗಳನ್ನು ಸದಸ್ಯರು ಪ್ರಶ್ನಿಸಿದರು. ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆಯಲ್ಲಿ ಪಾಲಿಕೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಜಲಸಿರಿ ಹಾಗೂ ಗೈಲ್ ಗ್ಯಾಸ್ ಯೋಜನೆಯ ಬಗ್ಗೆ ಸದಸ್ಯರು ಅಧಿಕಾರಿಗಳ ಬೆವರಿಳಿಸಿದರು.
Related Articles
Advertisement
34 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅನುಮತಿ ಸಿಕ್ಕಿಲ್ಲ!ಕುಡ್ಸೆಂಪ್ ಅಧಿಕಾರಿ ಸುರೇಶ್ ಅವರು ಮಾತನಾಡಿ, ‘ಜಲಸಿರಿ ಪೈಪ್‌ಲೈನ್ ಅಳವಡಿ ಕೆಗೆ ಸುಮಾರು 34 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ದಾಟಲು ಇನ್ನೂ ಅನುಮತಿ ಸಿಕ್ಕಿಲ್ಲ’ ಎಂದರು. ಪ್ರೇಮಾನಂದ ಶೆಟ್ಟಿ ಮಾತನಾಡಿ, ‘ನೆಪಗಳನ್ನು ಒಡ್ಡಿ ಕಾಮಗಾರಿ ತಡ ಮಾಡುವುದೇ ಅಧಿಕಾರಿಗಳ ಕೆಲಸ ಆಗಿದೆ. ಕಾಲ ಕಾಲಕ್ಕೆ ಈ ಯೋಜನೆ ಬಗ್ಗೆ ಜನಪ್ರತಿನಿಧಿಗಳ ಗಮನಸೆಳೆಯುವ ಕೆಲಸವನ್ನು ಅಧಿಕಾರಿಗಳು ಯಾಕೆ ಮಾಡಿಲ್ಲ? ಕೇವಲ ಗೂಬೆ ಕೂರಿಸುವುದರಿಂದ ಏನೂ ಆಗುವುದಿಲ್ಲ. ಅಧಿಕಾರಿಗಳು ತಪ್ಪು ಮಾಹಿತಿ ನೀಡಬಾರದು’ ಎಂದರು. ಎಂ.ಶಶಿಧರ ಹೆಗ್ಡೆ ಮಾತನಾಡಿ, ‘ಜಲಸಿರಿ ಯೋಜನೆಗೆ ಇನ್ನಾದರೂ ವೇಗ ಪಡೆಯಬೇಕಾದರೆ ಮೇಯರ್ ಅವರು ತತ್‌ಕ್ಷಣದಿಂದಲೇ ವಲಯವಾರು ಸ್ಥಳ ಪರಿಶೀಲನೆ ನಡೆಯಬೇಕು. ರಾ.ಹೆದ್ದಾರಿ ಅಧಿಕಾರಿಗಳನ್ನು ಈ ವೇಳೆ ಕರೆಯಬೇಕು’ ಎಂದರು. ನವೀನ್ ಡಿಸೋಜ ಮಾತನಾಡಿ, ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳ ಸಂವಹ ಕೊರತೆಯಿಂದ ಜನರ ತೆರಿಗೆ ಹಣ ನಷ್ಟವಾಗುತ್ತಿದೆ. ಸಮರ್ಪಕ ನೀರು ಲಭ್ಯವಾಗುತ್ತಿಲ್ಲ’ ಎಂದರು. ಕೆಲವು ಹೊತ್ತಿನ ಬಳಿಕ ಮತ್ತೆ ಇದೇ ವಿಚಾರ ಸಭೆಯಲ್ಲಿ ಚರ್ಚೆಗೆ ಬಂತು. ಸಂಗೀತಾ ಆರ್. ನಾಯಕ್ ಮಾತನಾಡಿ ‘ಕುಲಶೇಖರ ಬೈತುರ್ಲಿ ಹೆದ್ದಾರಿ ಅಗಲೀಕರಣ ಆಗದೆ ಪೈಪ್‌ಲೈನ್ ಕಾಮಗಾರಿಗೆ ಅನುಮತಿ ನೀಡಲು ಆಗುವುದಿಲ್ಲ ಅಂದಿದ್ದಾರೆ. ಪಾಲಿಕೆ, ಕುಡ್ಸೆಂಪ್, ಹೆದ್ದಾರಿ ಇಲಾಖೆಯ ಅಧಿಕಾರಿಗಳ ಮಧ್ಯೆ ಸಂವಹನ ಕೊರತೆ ಯಿಂದ ಈ ಸಮಸ್ಯೆ ಆಗಿದೆ ಎಂದರು. ನವೀನ್ ಡಿಸೋಜ ಮಾತನಾಡಿ, ‘ಕಾಮಗಾರಿ ಆಗುವವರೆಗೆ ಪೈಪ್‌ಲೈನ್ ಹಾಕಲು ಅನುಮತಿ ಇಲ್ಲ ಎಂಬುವುದಾದರೆ ಜನರಿಗೆ ನೀರು ಕೊಡುವುದು ಹೇಗೆ?’ ಎಂದು ಪ್ರಶ್ನಿಸಿದರು. ಪಾಲಿಕೆ ಅಧಿಕಾರಿ ಮಾತನಾಡಿ, ‘ಅಲ್ಲಿ ಹೆದ್ದಾರಿ ಅಗಲೀಕರಣ ವಿಷಯ ಇತ್ಯರ್ಥವಾಗದ ಕಾರಣದಿಂದ ಈ ಸಮಸ್ಯೆ ಆಗಿದೆ. ಆದರೆ, ‘ನಂತೂರಿನಲ್ಲಿ ಪೈಪ್‌ಲೈನ್ ಹಾಕಲು ಹೆದ್ದಾರಿ ಇಲಾಖೆ ಅನುಮತಿ ನೀಡಿದೆ’ ಎಂದರು. ಪ್ರತಿಪಕ್ಷ ನಾಯಕ ಅನಿಲ್ ಕುಮಾರ್ ಮಾತನಾಡಿ, ‘ಹೆದ್ದಾರಿ ಇಲಾಖೆ ಪಾಲಿಕೆಗೆ ಸಹಕಾರ ನೀಡದಿದ್ದರೆ ನಾವೂ ಹೆದ್ದಾರಿ ಇಲಾಖೆಗೆ ಸಹಕಾರ ನೀಡಬಾರದು’ ಎಂದರು. ಜಲಸಿರಿ; ಅಸಮರ್ಪಕ ನಿರ್ವಹಣೆ, ಸ್ಥಳೀಯರಿಗೆ ಸಮಸ್ಯೆ
ಶ್ವೇತಾ ಪೂಜಾರಿ ಮಾತನಾಡಿ, ‘ಜಲಸಿರಿ ಯೋಜನೆ ಜಾರಿ ಆದಂದಿನಿಂದ ವಾರ್ಡ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಟ್ಯಾಂಕರ್ ವ್ಯವಸ್ಥೆ ಇಲ್ಲದೆ ಜನರಿಗೆ ಸಮಸ್ಯೆ ಆಗುತ್ತಿದ್ದು, ಸಮಸ್ಯೆ ಬಗೆಹರಿಯುವವರೆಗೆ ಜಲಸಿರಿಯಿಂದಲೇ ಟ್ಯಾಂಕರ್ ವ್ಯವಸ್ಥೆ ಮಾಡಿಸಬೇಕು. ಅಧಿಕಾರಿಗಳ ಮಧ್ಯೆ ಸಂವಹನ ಕೊರತೆ ಯಿಂದ ವಾರ್ಡ್‌ನ ಜನರಿಗೆ ನೀರಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ. 24 ಗಂಟೆ ಬೇಡ. 3 ಗಂಟೆ ಆದರೂ ಸರಿಯಲ್ಲಿ ನೀರು ಸರಬರಾಜು ಮಾಡಿ’ ಎಂದರು. ಪ್ರತಿಪಕ್ಷ ನಾಯಕ ಅನಿಲ್ ಕುಮಾರ್ ಮಾತನಾಡಿ, ‘ಜಲಸಿರಿಯ ಅಸಮರ್ಪಕ ನಿರ್ವಹಣೆಯಿಂದ ನಾವು ಜನರಿಗೆ ಉತ್ತರ ನೀಡಬೇಕಾಗಿದೆ’ ಎಂದು ಹೇಳಿದ ಅವರು ಗುತ್ತಿಗೆದಾರ ಕಂಪೆನಿಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಬ್ದುಲ್ ರವೂಫ್ ಮಾತನಾಡಿ, ‘ಜಲಸಿರಿ ಸುಮ್ಮನೆ ಒಂದು ಯೋಜನೆ ಎಂಬಂತಾಗಿದೆ. ಎಲ್ಲಾ ಆಗಿ ಕೊನೆಗೆ ತರಾತುರಿಯಲ್ಲಿ ಯೋಜನೆಯನ್ನು ಪಾಲಿಕೆಯ ಹೆಗಲಿಗೆ ನೀಡಿ ಸಂಬಂಧ ಪಟ್ಟವರು ಜಾರಿಕೊಳ್ಳಲಿದ್ದಾರೆ’ ಎಂದರು. ಶೋಭಾ ಪೂಜಾರಿ ಮಾತನಾಡಿ, ‘ಜಲಸಿರಿ ಯಲ್ಲಿ ಎಲ್ಲಿಯೂ ಲಿಂಕ್ ಮಾಡಿಲ್ಲ’ ಎಂದರು. ವೇದಾವತಿ ಮಾತನಾಡಿ, ‘ಪೈಪ್‌ಲೈನ್ ಕೂಡ ಆಗಿಲ್ಲ. ರಸ್ತೆ ಅಗೆದು ರಿಪೇರಿ ಮಾಡಿಲ್ಲ’ ಎಂದರು. ಕೇಶವ ಮರೋಳಿ ಮಾತನಾಡಿ, ‘ಮರೋಳಿ ಭಾಗದಲ್ಲಿ ಶುದ್ದ ನೀರು ಯಾವಾಗ ಸಿಗುತ್ತದೆ?’ ಎಂದರು. ನವೀನ್ ಡಿಸೋಜ ಮಾತನಾಡಿ, ‘ರಸ್ತೆ ಅಗೆದು ಹಾಗೆಯೇ ಬಿಟ್ಟ ಕಾರಣದಿಂದ ಸ್ಥಳೀಯರಿಗೆ ಸಮಸ್ಯೆ’ ಎಂದರು. ಸಂಗೀತಾ ಆರ್.ನಾಯಕ್ ಮಾತನಾಡಿ ‘ಹಾಕಿ ರುವ ಮೀಟರ್ ಹಾಳಾದರೆ ಯಾರು ಜವಾ ಬ್ದಾರಿ?’ ಎಂದರು. ಶೋಭಾ ರಾಜೇಶ್ ಮಾತನಾಡಿ ‘ಎನ್‌ಐಟಿಕೆ ಹೊಸ ಟ್ಯಾಂಕ್ ಮಾಡಿದ್ದಾರೆ. ಆದರೆ ಹಳೆ ಟ್ಯಾಂಕ್‌ನಿಂದ ನೀಡುತ್ತಿದ್ದಾರೆ. ನೀರು ಸಾಕಾಗುತ್ತಿಲ್ಲ. ಇದಕ್ಕಿಂತ ಹಾಕಿದ ಲೈನ್ ಕಟ್ ಮಾಡುವುದು ಉತ್ತಮ’ ಎಂದರು. ಗೈಲ್ ಗ್ಯಾಸ್ ಪೈಪ್‌ಲೈನ್; ಹಲವು ವಾರ್ಡ್‌ಗಳಲ್ಲಿ ಸಮಸ್ಯೆ ಉಲ್ಬಣ
ಗೈಲ್ ಗ್ಯಾಸ್ ಪೈಪ್‌ಲೈನ್ ಯೋಜನೆ ಯಿಂದ ಹಲವು ವಾರ್ಡ್‌ಗಳಲ್ಲಿ ಸಮಸ್ಯೆ ಗಳಾಗಿ ಜನರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯರು ಸೋಮವಾರ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನವೀನ್ ಡಿಸೋಜ ಮಾತನಾಡಿ, ‘ಗೈಲ್ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಆರಂಭವಾಗಿ 5 ವರ್ಷ ಆಯಿತು. 2 ವರ್ಷ ಮಾತ್ರ ರಸ್ತೆ ಅಗೆದು ಕಾಮಗಾರಿ ನಡೆಸಲು ಅನುಮತಿ ಇದ್ದದ್ದು. ಆದರೆ, ಇನ್ನೂ ರಸ್ತೆ ಅಗೆಯುವುದು ನಿಂತಿಲ್ಲ ಹಾಗೂ ಅಗೆದ ಹೊಂಡವನ್ನು ಸರಿಯಾಗಿ ಮುಚ್ಚುವ ಕೆಲಸವೂ ಆಗಿಲ್ಲ. ಹೀಗಾಗಿ ಅವರ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ಪಾಲಿಕೆ ದಾಖಲಿಸಬೇಕು’ ಎಂದು ಒತ್ತಾಯಿಸಿದರು. ಗೈಲ್ ಅಧಿಕಾರಿಗಳು ಮಾತನಾಡಿ ‘ಸುರತ್ಕಲ್ ಭಾಗದಲ್ಲಿ ಕಾಮಗಾರಿ ನಡೆಯುತ್ತಿದೆ’ ಎಂದರು. ಶ್ವೇತಾ ಪೂಜಾರಿ ಮಾತನಾಡಿ, ‘ಪಾಲಿಕೆ ಸದಸ್ಯರ ಗಮನಕ್ಕೆ ತಾರದೆ ಕೆಲವು ಕಡೆ ರಸ್ತೆ ಅಗೆದು ಸಮಸ್ಯೆ ಮಾಡಲಾಗಿದೆ’ ಎಂದರು. ಶಂಶದ್ ಅಬೂಬಕ್ಕರ್ ಮಾತನಾಡಿ, ‘ರಸ್ತೆ ಬದಿಯಲ್ಲಿ ಪೈಪ್ ಇಟ್ಟು ಹೋಗಿದ್ದಾರೆ. ಅಲ್ಲಲ್ಲಿ ಅಗೆದು ಸಮಸ್ಯೆ ಮಾಡಲಾಗುತ್ತಿದೆ’ ಎಂದರು. ಲೀಲಾವತಿ ಪ್ರಕಾಶ್ ಮಾತನಾಡಿ, ‘ಗೈಲ್ ಗ್ಯಾಸ್ ಪೈಪ್‌ಲೈನ್‌ನಿಂದಾಗಿ ಕುಡಿಯುವ ನೀರಿನ ಪೈಪ್‌ಲೈನ್ ಕಟ್ ಮಾಡಿದ್ದಾರೆ’ ಎಂದರು. ಸಂಗೀತಾ ಆರ್.ನಾಯಕ್ ಮಾತ ನಾಡಿ, ‘ಗೈಲ್ ಗ್ಯಾಸ್ ಜನರಿಗೆ ಹೆಚ್ಚು ಉಪಯೋಗಕ್ಕೆ ಸಿಗಬೇಕಾದ ಯೋಜನೆ. ಸದ್ಯ ಬೋಂದೆಲ್ ಜಂಕ್ಷನ್‌ನಿಂದ ಕೆಲವು ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಮನೆ ಮನೆಗೆ ಗ್ಯಾಸ್ ನೀಡಲಾಗುತ್ತಿದೆ. ಆದರೆ, ಇದರ ನಿರ್ವಹಣೆ ಹಾಗೂ ಕಾಮಗಾರಿ ನಡೆಸಿದ ಬಳಿಕ ಮರುಸ್ಥಾಪನೆ ಕಾರ್ಯದಲ್ಲಿ ಸಮಸ್ಯೆಗಳಿವೆ’ ಎಂದರು. ವರುಣ್ ಚೌಟ ಮಾತನಾಡಿ, ‘ಗೈಲ್, ಜಲಸಿರಿ, ಪಾಲಿಕೆ ಮಧ್ಯೆ ಸಂವಹನ ಕೊರತೆಯಿಂದ ಜನರಿಗೆ ಸಮಸ್ಯೆ ಆಗುತ್ತಿದೆ. ಅಗೆದ ರಸ್ತೆಯನ್ನು ಹಾಗೆಯೇ ಬಿಟ್ಟು ಸಮಸ್ಯೆ ಸೃಷ್ಟಿಸಲಾಗಿದೆ’ ಎಂದರು. ಕೇಶವ ಮರೋಳಿ ಮಾತನಾಡಿ, “ಕಾಮಗಾರಿ ಅರ್ಧರ್ಧ ಆಗಿ ಸ್ಥಳೀಯರಿಗೆ ಸಮಸ್ಯೆ ಆಗಿದೆ’ ಎಂದರು.