ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಮಹಾತ್ಮ ಗಾಂಧೀಜಿ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್‌ಕುಮಾರ್‌ಕಟೀಲ್ ಹೇಳಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್‌ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಚ್ಛ ಭಾರತ, ಗ್ರಾಮ ಸಡಕ್ ನಂತಹ ಉತ್ತಮ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಮಹಾತ್ಮ ಗಾಂಧೀಜಿ ಅವರ ಚಿಂತನೆಗಳನ್ನು ಅಳವಡಿಸಿಕೊಂಡಿದೆ. ಜತೆಗೆ ಸ್ವಾಮಿ ವಿವೇಕಾನಂದರ “ಭಾರತ ವಿಶ್ವಗುರು’ ಎಂಬ ಮಹಾನ್ ಪರಿಕಲ್ಪನೆಯನ್ನು ಜಾರಿಗೊಳಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರೀಯ ಅವರು ದೇಶಕ್ಕಾಗಿ ವಾರದ ಎಲ್ಲ ದಿನಗಳಲ್ಲಿ ಒಂದು ಹೊತ್ತಿನ ಊಟ ಬಿಡಿ ಎಂದು ಕರೆ ನೀಡಿದ್ದರು. ಅವರಿಗೆ ದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವಿತ್ತು. 70 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷ ಗಾಂಧೀಜಿಯವರ ಚಿಂತನೆ ಮತ್ತು ಆದರ್ಶಗಳನ್ನು ಅಳವಡಿಸಿಕೊಂಡಿರಲಿಲ್ಲ. ಹಾಗಾಗಿ ಕಾಂಗ್ರೆಸ್‌ಗೆ ಗಾಂಧೀಜಿ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಹೇಳಿದರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಇಂದು ಅತ್ಯಂತ ಶ್ರದ್ಧಾ ದಿನ ಎಂದು ಗಾಂಧಿ ಸ್ಮರಿಸಿದರು. ಸಂಸದ ಪ್ರತಾಪ್‌ಸಿಂಹ ಇತರರಿದ್ದರು.
“ಶಾಂತಿಗಾಗಿ ಸವಾರಿ’ ಸೈಕಲ್ ಜಾಥಾ :
ಬೆಂಗಳೂರು: ಗಾಂಧಿ ಜಯಂತಿ ಅಂಗವಾಗಿ ಶುಕ್ರವಾರ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಮಹಾತ್ಮ ಗಾಂಧಿ ರಸ್ತೆಯಿಂದ ಕಬ್ಬನ್ ಉದ್ಯಾನದವರೆಗೆ “ಶಾಂತಿಗಾಗಿ ಸವಾರಿ’ ಸೈಕಲ್ ಜಾಥಾ ನಡೆಯಿತು. ಬೆಳಗ್ಗೆ 7.30ಕ್ಕೆ ವಿಧಾನಸೌಧದ ಪೂರ್ವದ್ವಾರದಿಂದ ಪ್ರಾರಂಭವಾದ ಜಾಥಾ ಕಬ್ಬನ್ ಉದ್ಯಾನ ಮೂಲಕ ಮಹಾತ್ಮಗಾಂಧಿ ರಸ್ತೆ ಕಡೆಗೆ ಸಾಗಿತು. ಪರಿಸರ ಸ್ನೇಹಿ ಸಂಚಾರ ಮತ್ತು ಸುರಕ್ಷತೆಗಾಗಿ ಸೈಕಲ್ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಾಲಿಕೆ, ಬೆಂಗಳೂರು ಸ್ಮಾರ್ಟ್ ಸಿಟಿ ಮತ್ತು ಡಲ್ಟ್ ಸಹಯೋಗದಲ್ಲಿ ಮುಂದಿನ ನವೆಂಬರ್ ವೇಳೆಗೆ 5 ಕಿ.ಮೀ ಸೈಕಲ್‌ಪಥ ನಿರ್ಮಾಣವಾಗಲಿದೆ. ಈ ವರ್ಷಾಂತ್ಯಕ್ಕೆ ಸೈಕಲ್ ಪಥವನ್ನು25ಕಿ.ಮೀ.ವರೆಗೆವಿಸ್ತರಿಸುವಯೋಜನೆಯಿದೆ ಎಂದು ಅಧಿಕಾರಿಗಳು ಹೇಳಿದರು.
ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ, ಆಯುಕ್ತ ಮಂಜುನಾಥ್ ಪ್ರಸಾದ್, ವಿಶೇಷ ಆಯುಕ್ತರಾದ ಜೆ.ಮಂಜುನಾಥ್, ರಂದೀಪ್ ಡಿ, ರಾಜೇಂದ್ರಕುಮಾರ್‌ಕಠಾರಿಯಾ ಇತರರಿದ್ದರು.