ಬೆಂಗಳೂರು: ಲಾಲ್‌ಬಾಗ್ ಪಶ್ಚಿಮ ದ್ವಾರ ಸಮೀಪದ ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಬಾಂಬ್ ಮಾದರಿಯಲ್ಲಿ ವಸ್ತು ಪತ್ತೆಯಾಗಿ, ಸ್ಥಳದಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿತು. ರಾತ್ರಿ 8.30ರ ಸುಮಾರಿಗೆ ಮೆಟ್ರೋ ನಿಲ್ದಾಣದ 2ನೇ ಮಹಡಿಯಲ್ಲಿ ಪ್ಲಾಸ್ಟಿಕ್ ಚೆಂಡೊಂದನ್ನು ಕಂಡ ಭದ್ರತಾ ಸಿಬ್ಬಂದಿ, ಅನುಮಾನದಿಂದ ಹತ್ತಿರ ಹೋಗಿದ್ದಾರೆ. ಅದರಲ್ಲಿ ಸ್ಫೋಟದ ಮದ್ದು ಮಾದರಿ ಕಾಣಿಸುತ್ತಿದ್ದರಿಂದ ಆತಂಕಗೊಂಡು ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ.
ಕೂಡಲೇ ಸಿದ್ದಾಪುರ ಠಾಣೆ ಪೊಲೀಸರು ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಜತೆಗೆ ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಿದ್ದಾರೆ. ತಪಾಸಣೆ ನಡೆಸಿದಾಗ ಆ ಚೆಂಡಿನಲ್ಲಿ ಪಟಾಕಿ ಮದ್ದುಗಳು ಹಾಗೂ ಬಟ್ಟೆಯ ಚೂರುಗಳಿರುವುದು ಕಂಡುಬಂತು. ಭಯ ಹುಟ್ಟಿಸಲು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೆಟ್ರೋ ನಿಲ್ದಾಣ ನಿರ್ಮಾಣ ಕಾರ್ಯ ಕಾಮಗಾರಿ ಇನ್ನು ನಡೆಯುತ್ತಿರುವುದರಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ.
ಅಲ್ಲದೆ ಅಲ್ಲಿನ ಭದ್ರತಾ ಸಿಬ್ಬಂದಿಗೆ ಅಪರಿಚಿತ ವ್ಯಕ್ತಿಗಳ ಬಗ್ಗೆ ನಿಗಾವಹಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ನಿಲ್ದಾಣ ಸಮೀಪದ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ ಎಂದರು. ವಿಷಯ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್, ಹೆಚ್ಚುವರಿ ಪೊಲೀಸ್ ಕಮಿಷನರ್ ಮಾಲಿನಿ ಕೃಷ್ಣಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿನ ಭದ್ರತಾ ಸಿಬ್ಬಂದಿಯನ್ನು ವಿಚಾರಣೆ ನಡೆಸಿದರು.
ಸೂಕ್ಷ್ಮಪ್ರದೇಶಗಳಲ್ಲಿ ಬಿಗಿ ಭದ್ರತೆ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ನಗರದ ಮೆಟ್ರೋ ನಿಲ್ದಾಣಗಳು, ಬಸ್ ನಿಲ್ದಾಣ, ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗೆ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ, ಲಾಲ್‌ಬಾಗ್ ಪಶ್ಚಿಮ ದ್ವಾರ ಸಮೀಪದ ಮೆಟ್ರೋ ನಿಲ್ದಾಣ ಇನ್ನು ಸೇವೆಗೆ ಮುಕ್ತವಾಗಿಲ್ಲ. ಆದರಿಂದ ಇಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೆಟ್ರೋ ನಿಲ್ದಾಣದಲ್ಲಿ ಸಿಕ್ಕ ಅನುಮಾನಾಸ್ಪದ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್‌ಎಲ್) ಕಳುಹಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ಬಗ್ಗೆ ತನಿಖೆ ನಡೆಯುತ್ತಿದೆ.
-ಮಾಲಿನಿ ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್ ಆಯುಕ್ತರು