ಬರ್ಮಿಂಗ್‌ಹ್ಯಾಮ್: ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಫೈನಲಿಸ್ಟ್ ಆಗಿದ್ದ ಭಾರತದ ಯುವ ಶಟ್ಲರ್ ಲಕ್ಷ್ಯ ಸೇನ್ ಸ್ವಿಸ್ ಓಪನ್ ಸೂಪರ್ 300 ಸರಣಿಯಿಂದ ಹಿಂದೆ ಸರಿದಿದ್ದಾರೆ.
20 ರ ಹರೆಯದ ಉತ್ತರಾಖಂಡ ಮೂಲದ ಆಟಗಾರ ನಿರಂತರ ಆಟದಿಂದ ದಣಿದಿದ್ದು, ವಿಶ್ರಾಂತಿಗಾಗಿ ಸ್ವಿಸ್ ಓಪನ್ ನಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ.
ಅವರು ದಣಿದಿದ್ದು, ಸ್ವಿಸ್ ಓಪನ್ ನಲ್ಲಿ ಆಡುತ್ತಿಲ್ಲ. ಅವರು ಬೆಂಗಳೂರಿಗೆ ಹಿಂತಿರುಗುತ್ತಿದ್ದಾರೆ. ಬೆಂಗಳೂರಿಗೆ ಬಂದು 7-10 ದಿನಗಳ ಕಾಲ ವಿಶ್ರಾಂತಿ ಪಡೆದು ಕೋರಿಯನ್ ಓಪನ್ ಗೆ ಆಡಲು ತೆರಳಲಿದ್ದಾರೆ ಎಂದು ಅವರ ತರಬೇತುದಾರ ವಿಮಲ್ ಕುಮಾರ್ ಪಿಟಿಐ ಗೆ ತಿಳಿಸಿದ್ದಾರೆ.
ಜರ್ಮನ್ ಓಪನ್ ನಲ್ಲೂ ಫೈನಲ್ ನಲ್ಲಿ ಸೆಣಸಿ ಪರಾಭವ ಗೊಂಡಿದ್ದ ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪ್ರಶಸ್ತಿ ಕಾಳಗದಲ್ಲಿ ಅವರು ವಿಶ್ವದ ನಂ.1 ಆಟಗಾರ, ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಪರಾಭವಗೊಂಡಿದ್ದರು. ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಆಗಿದ್ದ ಅಕ್ಸೆಲ್ಸೆನ್ 21-10, 21-15 ಅಂತರದಿಂದ ಸೋಲುಣಿಸಿದ್ದರು.
ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ತರಬೇತು ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಸೇನ್ ಕಳೆದ ಆರು ತಿಂಗಳಲ್ಲಿ ಅದ್ಭುತ ಆಟವಾಡುತ್ತಿದ್ದು, ಹೊಸ ಭರವಸೆ ಮೂಡಿಸಿದ್ದಾರೆ.