Advertisement

ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌: ಲಕ್ಷ್ಯ ಸೇನ್‌, ಪ್ರಣಯ್‌ ಪ್ರಿ-ಕ್ವಾರ್ಟರ್‌ಗೆ

11:58 PM Aug 24, 2022 | Team Udayavani |

ಟೋಕಿಯೊ: ದ್ವಿತೀಯ ಶ್ರೇಯಾಂಕದ ಕೆಂಟೊ ಮೊಮೊಟ ಅವರನ್ನು ಅಮೋಘ ಆಟದ ಮೂಲಕ ಸೋಲಿಸಿ ಆಘಾತಗೊಳಿಸಿದ ಭಾರತದ ಎಚ್‌.ಎಸ್‌. ಪ್ರಣಯ್‌ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಪ್ರಿ-
ಕ್ವಾರ್ಟರ್‌ಫೈನಲಿಗೇರಿದ್ದಾರೆ.

Advertisement

ಈ ಮೊದಲು ಹಾಲಿ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಲಕ್ಷ್ಯ ಸೇನ್‌ ಸುಲಭ ಗೆಲುವಿನೊಂದಿಗೆ ಪ್ರಿ-ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದರೆ ಕಿದಂಬಿ ಶ್ರೀಕಾಂತ್‌ ಆಘಾತಕಾರಿ ಸೋಲನ್ನು ಕಂಡು ಹೊರಬಿದ್ದಿದ್ದಾರೆ. ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಣಯ್‌ಮತ್ತು ಸೇನ್‌ ಪರಸ್ಪರ ಮುಖಾಮುಖಿಯಾಗಲಿದ್ದಾರೆ.

ನಿರೀಕ್ಷೆಗೂ ಮೀರಿದ ಆಟದ ಪ್ರದರ್ಶನ ನೀಡಿದ ಶ್ರೇಯಾಂಕರಹಿತ ಆಟಗಾರ ಪ್ರಣಯ್‌ ಪ್ರೇಕ್ಷಕರ ಫೇವರಿಟ್‌ ಮತ್ತು ಎರಡು ಬಾರಿಯ ಮಾಜಿ ಚಾಂಪಿಯನ್‌ ಮೊಮೊಟ ಅವರನ್ನು 21-17, 21-16 ಗೇಮ್‌ಗಳಿಂದ ಸೋಲಿಸಿ ಅಚ್ಚರಿಗೊಳಿಸಿದರು. ಆಶ್ಚರ್ಯವೆಂಬಂತೆ ಇದು ಮೊಮೊಟ ವಿರುದ್ಧ ಆಡಲಾದ ಎಂಟು ಪಂದ್ಯಗಳಲ್ಲಿ ಪ್ರಣಯ್‌ ಅವರ ಮೊದಲ ಗೆಲುವು ಆಗಿದೆ. ಈ ಹಿಂದಿನ ಪಂದ್ಯಗಳಲ್ಲಿ ಪ್ರಣಯ್‌ ಅವರ ವಿರುದ್ಧ ಕೇವಲ ಒಂದು ಗೇಮ್‌ ಜಯಿಸಿದ್ದರು.

ಶ್ರೀಕಾಂತ್‌ಗೆ ಸೋಲು
ಇಲ್ಲಿ ಕಳೆದ ಬಾರಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದ ಶ್ರೀಕಾಂತ್‌ ಕೇವಲ 34 ನಿಮಿಷಗಳ ಕಾದಾಟದಲ್ಲಿ ಚೀನದ ಎದುರಾಳಿ ವಿಶ್ವದ 32ನೇ ರ್‍ಯಾಂಕಿನ ಝಾವೊ ಜುನ್‌ ಪೆಂಗ್‌ ಅವರಿಗೆ 18-21, 17-21 ಗೇಮ್‌ಗಳಿಂದ ಶರಣಾದರು. 29ರ ಹರೆಯ ಶ್ರೀಕಾಂತ್‌ ಆರಂಭದಿಂದಲೇ ಹಿನ್ನಡೆ ಅನುಭವಿಸಿದ್ದರು. ಎದುರಾಳಿಯ ಹೊಡೆತಕ್ಕೆ ಉತ್ತರಿಸಲು ಒದ್ದಾಡಿದರು. ಇದರಿಂದಾಗಿ ಮೊದಲ ಗೇಮ್‌ ಅನ್ನು ಅವರು 12 ನಿಮಿಷಗಳಲ್ಲಿ ಕಳೆದುಕೊಂಡರು. ದ್ವಿತೀಯ ಗೇಮ್‌ನಲ್ಲಿ ತೀವ್ರ ಹೋರಾಟ ನಡೆಸಿದ್ದ ಶ್ರೀಕಾಂತ್‌ ಒಂದು ಹಂತದಲ್ಲಿ 16-14ರಿಂದ ಮುನ್ನಡೆ ಸಾಧಿಸಿದ್ದರು.

ಸೇನ್‌ ಮುನ್ನಡೆ
ಹಾಲಿ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಲಕ್ಷ್ಯ ಸೇನ್‌ ಸ್ಪೇನ್‌ನ ಲೂಯಿಸ್‌ ಪೆನಲ್ವೆರ್‌ ಅವರನ್ನು ನೇರ ಗೇಮ್‌ಗಳಿಂದ ಉರುಳಿಸಿ ಪ್ರಿ-ಕ್ವಾರ್ಟರ್‌ಫೈನಲಿಗೇರಿದರು. ದ್ವಿತೀಯ ಸುತ್ತಿನ ಈ ಹೋರಾಟದಲ್ಲಿ ಅವರು 21-17, 21-10 ಗೇಮ್‌ಗಳಿಂದ 72 ನಿಮಿಷದಲ್ಲಿ ಜಯ ಸಾಧಿಸಿದರು. ಒಂದು ಹಂತದಲ್ಲಿ 3-4 ಹಿನ್ನಡೆ ಅನುಭವಿಸಿದ್ದ 9ನೇ ಶ್ರೇಯಾಂಕದ ಸೇನ್‌ ಆಬಳಿಕ ನಿರಂತರ ಆರಂಕ ಪಡೆದು ಮುನ್ನಡೆಯನ್ನು 13-7ಕ್ಕೇರಿಸಿದರು. ಆಬಳಿಕ ಹಿಂದೆ ನೋಡದ ಸೇನ್‌ ಸುಲಭವಾಗಿ ಮೊದಲ ಗೇಮ್‌ ಗೆದ್ದರು.

Advertisement

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದ ಸೇನ್‌ ದ್ವಿತೀಯ ಗೇಮ್‌ನಲ್ಲೂ ತನ್ನ ಹಿಡಿತವನ್ನು ಬಿಗಿಗೊಳಿಸಿ ಇನ್ನಷ್ಟು ದೊಡ್ಡ ಅಂತರದಿಂದ ಗೆದ್ದು ಬಂದರು. ಒಂದು ಹಂತದಲ್ಲಿ ಅವರು 9 ಅಂಕಗಳ ಮುನ್ನಡೆ ಸಾಧಿಸಿದ್ದರು.

ಅರ್ಜುನ್‌-ಕಪಿಲ ಪ್ರಿ-ಕ್ವಾರ್ಟರ್‌ಗೆ
ಭಾರತದ ಡಬಲ್ಸ್‌ ಆಟಗಾರರಾದ ಎಂ.ಆರ್‌. ಅರ್ಜುನ್‌ ಮತ್ತು ದ್ರುವ್‌ ಕಪಿಲ ಅವರು ಪ್ರಿ-ಕ್ವಾರ್ಟರ್‌ ಫೈನಲಿಗೇರಿದರೆ ಅಶ್ವಿ‌ನಿ ಪೊನ್ನಪ್ಪ ಮತ್ತು ಎನ್‌. ಸಿಕ್ಕಿ ರೆಡ್ಡಿ ದ್ವಿತೀಯ ಸುತ್ತಿನಲ್ಲಿ ಸೋತು ಹೊರಬಿದ್ದರು. ಅರ್ಜುನ್‌ ಮತ್ತು ಕಪಿಲ ಅವರು ಕಳೆದ ವರ್ಷ ಇಲ್ಲಿ ಕಂಚು ಜಯಿಸಿದ್ದ ಡೆನ್ಮಾರ್ಕ್‌ನ ಕಿಮ್‌ ಆಸ್ಟ್ರೆಪ್‌ ಮತ್ತು ಆ್ಯಂಡರ್ ಸ್ಕಾರುಪ್‌ ರಸು¾ಸ್ಸೆನ್‌ ಅವರನ್ನು 21-17, 21-16 ಗೇಮ್‌ಗಳಿಂದ ಉರುಳಿಸಿದ್ದರು. ಮುಂದಿನ ಸುತ್ತಿನಲ್ಲಿ ಅವರು ಸಿಂಗಾಪುರದ ಹೀ ಯಾಂಗ್‌ ಕಯಿ ಟೆರ್ರಿ ಮತ್ತು ಲೋಹ್‌ ಕೀನ್‌ ಹೀನ್‌ ಅವರನ್ನು ಎದುರಿಸಲಿದ್ದಾರೆ.

ಎಂಟನೇ ಶ್ರೇಯಾಂಕದ ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಅವರು ಗಾಟೆಮಾಲದ ಸೊಲಿಸ್‌ ಜೊನಾಥನ್‌ ಮತ್ತು ಅನಿಬಲ್‌ ಮಾರೊಕ್ವಿನ್‌ ಅವರನ್ನು 21-8, 21-10 ಗೇಮ್‌ಗಳಿಂದ ಸೋಲಿಸಿ ಅಂತಿಮ 16ರ ಸುತ್ತಿಗೇರಿದ್ದಾರೆ.

ಇನ್ನೊಂದೆಡೆ ಪೊನ್ನಪ್ಪ ಮತ್ತು ಸಿಕ್ಕಿ ಅವರು ಅಗ್ರ ಶ್ರೇಯಾಂಕದ ಚೀನದ ಚೆನ್‌ ಕಿನ್‌ ಚೆನ್‌ ಮತ್ತು ಜಿಯಾ ಯಿ ಫ‌ನ್‌ ಕೈಯಲ್ಲಿ ಕೇವಲ 42 ನಿಮಿಷಗಳಲ್ಲಿ 15-21, 10-21 ಗೇಮ್‌ಗಳಿಂದ ಸೋತರು.

ವನಿತಾ ಡಬಲ್ಸ್‌ನ ಇನ್ನೊಂದು ಜೋಡಿ ಪೂಜಾ ದಂಡು ಮತ್ತು ಸಂಜನಾ ಸಂತೋಷ್‌ ಅವರು ಮೂರನೇ ಶ್ರೇಯಾಂಕದ ಕೊರಿಯದ ಲೀ ಸೊ ಹೀ ಮತ್ತು ಶಿನ್‌ ಸಿಯುಂಗ್‌ ಚಾನ್‌ ಕೈಯಲ್ಲಿ 15-21, 7-21 ಗೇಮ್‌ಗಳಿಂದ ಸೋತು ಹೊರ ಬಿದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next