ಬೆಂಗಳೂರು: ಉಪನಿಷತ್ತಿ ನಲ್ಲಿ ಉಲ್ಲೇಖಿಸಿರುವಂತೆ ಲಕ್ಷ್ಮೀಶ ತೋಳ್ಪಾಡಿ ಅವರು ಕಲಿತ ವಿದ್ಯೆಯನ್ನು ತಪಸ್ಸಿಗೆ ಸೀಮಿತಗೊಳಿಸದೆ, ಎಲ್ಲೆಡೆ ಹರಡುವ ನಿಟ್ಟಿನಲ್ಲಿ ಕೆಲಸ ಮಾಡು ತ್ತಿದ್ದಾರೆ ಎಂದು ಸಂಗೀತ ವಿದ್ವಾಂಸ ವಿದ್ಯಾಭೂಷಣ ತಿಳಿಸಿದರು.
ಅವರು ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಬಯಲು ರಂಗಮಂದಿರದಲ್ಲಿ “ರಂಗಚಂದಿರ’ ಶನಿವಾರ ಹಮ್ಮಿಕೊಂಡಿದ್ದ ಕಾರ್ಯ ಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಅವರನ್ನು ಅಭಿನಂದಿಸಿ ಮಾತನಾಡಿದರು.
ಕಲಿತ ವಿದ್ಯೆಯನ್ನು ಅನುಷ್ಠಾನ ಮತ್ತು ತಪಸ್ಸಿಗೆ ಮಾತ್ರ ಕೆಲವರು ಬಳಸುತ್ತಾರೆ. ಶಾಸ್ತ್ರಾಧ್ಯಯನದ ಬಳಿಕ ತಪಸ್ಸಿಗಾಗಿ ಹಿಮಾಲಯಕ್ಕೆ ತೆರಳುವುದು ಕಲಿಕೆಯಲ್ಲ. ಸ್ವಾಧ್ಯಾಯ ಮತ್ತು ಪ್ರವಚನ ಮಾಡುವುದನ್ನು ಕಲಿಕೆ ಎಂದು ಉಪನಿಷತ್ತಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಂತಹ ಮಹತ್ ಕೈಂಕರ್ಯವನ್ನು ಲಕ್ಷ್ಮೀಶ ತೋಳ್ಪಾಡಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಇತ್ತೀಚೆಗೆ ಪ್ರಶಸ್ತಿಗಳನ್ನು ಲಾಬಿ ಮಾಡಿ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಲಕ್ಷ್ಮೀಶ ತೋಳ್ಪಾಡಿ ಅವರು ಪ್ರಶಸ್ತಿಗಾಗಿ ಯಾವುದೇ ಇಲಾಖೆಯನ್ನು ಸುತ್ತಿದವರಲ್ಲ ಎಂದು ಪ್ರಶಂಸಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಮಾತನಾಡಿ, ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ನಮ್ಮ ಹೆಮ್ಮೆಯಾಗಿವೆ. ಈ ಕಾವ್ಯಗಳು ವಿವಿಧ ಸಂದರ್ಭದಲ್ಲಿ ಬೇರೆ ಬೇರೆ ರೀತಿಯಲ್ಲಿ ಬರುತ್ತಿವೆ. ಲಾಬಿ ಇಲ್ಲದೆ ಪ್ರಶಸ್ತಿ ನೀಡಿದರೆ ಅದರ ಮೌಲ್ಯವೂ ಹೆಚ್ಚುತ್ತದೆ ಎಂದು ತಿಳಿಸಿದರು.
“ಮಹಾಭಾರತದಲ್ಲಿ ಮಾತು ಮತ್ತು ಮೌನ’ ಎಂಬ ವಿಷಯದ ಬಗ್ಗೆ ಲಕ್ಷ್ಮೀಶ ತೋಳ್ಪಾಡಿ ಉಪನ್ಯಾಸ ನೀಡಿರು. ಕೇಂದ್ರ ಸಾಹಿತ್ಯ ಅಕಾಡೆಮಿ “ಮಹಾಭಾರತದ ಅನುಸಂಧಾನದ ಭಾರತಯಾತ್ರೆ’ ಕೃತಿಗೆ ನೀಡಿದ ಪ್ರಶಸ್ತಿ ವ್ಯಾಸ, ಪಂಪ ಮತ್ತು ಕುಮಾರವ್ಯಾಸನಿಗೆ ಸಲ್ಲಬೇಕು’ ಎಂದು ಹೇಳಿದರು.