ನೆಲಮಂಗಲ: ಪಟ್ಟಣದ ಬಳಿಯ ಕಮ್ಮಸಂದ್ರ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ರಾಜ್ಯದ ಸಾವಿರಾರು ಭಕ್ತರು ಭಾಗವಹಿಸಿದ್ದರು. ಅಗಸ್ತ್ಯ ಮುನಿಗಳ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿರುವ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಕಮ್ಮಸಂದ್ರ ಗ್ರಾಮದಲ್ಲಿದ್ದು, 18ನೇ ವರ್ಷದ ಬ್ರಹ್ಮರಥೋತ್ಸವವನ್ನು ಅದ್ದೂರಿಯಾಗಿ ನಡೆಸಲಾಯಿತು.
ವಿಶೇಷ ಪೂಜೆ: ಬ್ರಹ್ಮರಥೋತ್ಸವದ ಅಂಗವಾಗಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ಗರುಡೋತ್ಸವ, ನಿತ್ಯ ಹೋಮ, ಶ್ರೀ ಸ್ವಾಮಿಗೆ ಕಲ್ಯಾಣೋತ್ಸವ, ಅಶ್ವಾರೋಹಣೋತ್ಸವ, ಶುಕ್ರವಾರ ಬೆಳಗ್ಗೆ 6ಕ್ಕೆ ಸುಪ್ರಭಾತ ಸೇವೆ, ರಥಸ್ನಪನ, ರಥಬಲಿ, ಮಹಾ ಸುರ್ದಶನ ಹೋಮ, ವಹಿತ ಹೋಮ, ಮಂಟಪೋತ್ಸವ ಸೇವೆ ನಡೆಸಿ, ನಂತರ ಶ್ರೀ ಸ್ವಾಮಿಗೆ ವಿಶೇಷ ಪುಷ್ಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.
ಬ್ರಹ್ಮ ರಥೋತ್ಸವ: ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ಪುರಾತನ ಕಾಲದಿಂದ ಅದ್ದೂರಿ ಜಾತ್ರೆ ಮಾಡಲಾಗುತ್ತಿದೆ. 18 ವರ್ಷಗಳಿಂದ ಬ್ರಹ್ಮರಥೋತ್ಸವ ನಡೆಯುತ್ತಿದ್ದು, ಶುಕ್ರವಾರ ಮಧ್ಯಾಹ್ನ 12.30ಕ್ಕೆ ಅಭಿಜಿತ್ ಲಗ್ನದಲ್ಲಿ ರಥೋತ್ಸವ ಹಾಗೂ ರಾತ್ರಿ 7 ಗಂಟೆಗೆ ನಡೆದ ಮುತ್ತಿನ ಪಲ್ಲಕ್ಕಿ ಉತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.
ಅಧಿಕಾರಿಗಳ ಪರಿಶೀಲನೆ: ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಭಕ್ತರಿಗಾಗಿ ತಯಾರಿಸಿದ್ದ ಪ್ರಸಾದವನ್ನು ತಾಲೂಕು ಅಧಿಕಾರಿಗಳು ಪರಿಶೀಲಿಸಿದರು. ಆ ನಂತರ ಭಕ್ತರಿಗೆ ಪ್ರಸಾದ ನಿಯೋಗ ಮಾಡಲಾಯಿತು.
ಭಕ್ತರ ಸೇವೆ: ಬ್ರಹ್ಮರಥೋತ್ಸವದ ಅಂಗವಾಗಿ ಕಮಾನು ಸೇವೆ, ಹೂವಿನ ಸೇವೆ, ಹಾಲಿನ ಸೇವೆ, ಲಡ್ಡು ಸೇವೆ, ತುಪ್ಪದ ಸೇವೆ, ಹಣ್ಣಿನ ಸೇವೆ ಸೇರಿದಂತೆ ಶ್ರೀ ಸ್ವಾಮಿಗೆ ಭಕ್ತರು ವಿವಿಧ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಪಂಡಿತ ವಿಜಯ್‌ಕುಮಾರ್, ಮುಖಂಡರಾದ ಕೇಶವಮೂರ್ತಿ, ಗಂಗಾಧರ್, ಶಿವಣ್ಣ, ಗೋಪಾಲ್, ಕೆಂಚಪ್ಪ, ತಿಮ್ಮೇಗೌಡ, ಬೈರಪ್ಪ, ತಮ್ಮಯ್ಯ ಮತ್ತಿತರರು ಹಾಜರಿದ್ದರು.