ದೇವದುರ್ಗ: ತಾಲೂಕಿನ ಐತಿಹಾಸಿಕ ಮಾನಸಗಲ್ ಲಕ್ಷ್ಮೀ ರಂಗನಾಥ ದೇವಸ್ಥಾನ ಜಾತ್ರಾ ಮಹೋತ್ಸವ ಹಿನ್ನೆಲೆ ಮೇ 16ರಂದು ರಥೋತ್ಸವ ಜರುಗಲಿದೆ.
ಈಗಾಗಲೇ ಪೂರ್ವ ಸಿದ್ಧತೆ ಜೋರಾಗಿ ನಡೆದಿದೆ. ಇಲ್ಲಿನ ಮಾನಸಗಲ್ ಲಕ್ಷ್ಮೀ ರಂಗನಾಥ ದೇವಸ್ಥಾನ ಸುಮಾರ 400 ವರ್ಷ ಇತಿಹಾಸ ಹೊಂದಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಟ್ಟಿರುವ ಈ ದೇವಸ್ಥಾನಕ್ಕೆ ಹೊರ ಜಿಲ್ಲೆಯ ಭಕ್ತರೂ ಭೇಟಿ ನೀಡುತ್ತಾರೆ. ಜಾತ್ರೆ ಪ್ರಯುಕ್ತ ಈಗಿನಿಂದಲೇ ವಿವಿಧ ಪೂಜಾ ಕೈಂಕರ್ಯ ನಡೆಯುತ್ತಿವೆ.
ಕಳೆದ ಎರಡ್ಮೂರು ವರ್ಷಗಳಿಂದ ಕೋವಿಡ್ ಹಿನ್ನೆಲೆ ಯಾವುದೇ ಜಾತ್ರೆ, ರಥೋತ್ಸವ ಕಾರ್ಯಕ್ರಮ ಜರುಗದಿರುವುದರಿಂದ ಈ ಬಾರಿ ಜಾತ್ರಾ ಮಹೋತ್ಸವ ಬಹಳ ವಿಶೇಷವಾಗಿದೆ. ಜಾತ್ರೆ ನಿಮಿತ್ತ ದೇವಸ್ಥಾನಕ್ಕೆ ಸುಣ್ಣಬಣ್ಣ ವಿಶೇಷ ಅಲಂಕಾರ ಮಾಡಲಾಗಿದೆ. ಮೇ 17ರಂದು ಉಚ್ಚಯ ಜರುಗಲಿದ್ದು, 18ರಂದು ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಆಂಧ್ರ, ಮಹಾರಾಷ್ಟ್ರ ಸೇರಿದಂತೆ ವಿವಿಧ ಜಿಲ್ಲೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಭಕ್ತಿ ಅಚ್ಚುಕಟ್ಟು: ಮಾನಸಗಲ್ ಲಕ್ಷ್ಮೀ ರಂಗನಾಥ ದೇವಸ್ಥಾನ ರಥೋತ್ಸವ ಜರುಗುವ ಮೊದಲೇ ಕೆ.ಇರಬಗೇರಾ ಗ್ರಾಮಸ್ಥರು ಕಂಕಣ ಕಟ್ಟುತ್ತಾರೆ. ಕಂಕಣ ಕಟ್ಟಿದ 9 ದಿನಕ್ಕೆ ರಥೋತ್ಸವ ಜರುಗುತ್ತದೆ. ರಥೋತ್ಸವ ಮುಗಿದು ನಾಲ್ಕೈದು ದಿನಗಳವೆರೆಗೆ ಒಬ್ಬರು ಮಂಸ ತಿನ್ನಲ್ಲ. ಕೆಲ ನಿಮಯಗಳು ಅಚ್ಚುಕಟ್ಟಾಗಿ ಪಾಲನೆ ಮಾಡುವ ಪದ್ಧತಿ ಸುಮಾರು ವರ್ಷಗಳಿಂದ ನಡೆದು ಬಂದಿವೆ.
ಜಾನುವಾರುಗಳ ಜಾತ್ರೆ ವಿಶೇಷ: ಇಲ್ಲಿನ ಮಾನಸಗಲ್ ಲಕ್ಷ್ಮೀ ರಂಗನಾಥ ದೇವಸ್ಥಾನ ಜಾತ್ರಾ ಮಹೋತ್ಸವ ಹಿನ್ನೆಲೆ ಜಾನುವಾರುಗಳ ಜಾತ್ರೆ ಬಹಳ ವಿಶೇಷವಾಗಿದೆ. ಜಿಲ್ಲೆಯಲ್ಲಿ ಗುರುಗುಂಟ ಮೊದಲಾದರೇ ಎರಡನೇ ಸ್ಥಾನ ಮಾನಸಗಲ್ ಎಂಬ ಹೆಗ್ಗಳಿಕೆ ಹೊಂದಿದೆ. ತಿಂಗಳ ಕಾಲ ಜಾತ್ರೆ ನಡೆಯುತ್ತಿರುವುದು ತಾಲೂಕಿನಲ್ಲಿ ವಿಶೇಷ ಹೊಂದಿದೆ.
ವಧು ವರರ ವಿಶೇಷ: ಮದುವೆ ಸಮಾರಂಭಗಳು ಜೋರಾಗಿ ನಡೆಯುತ್ತಿವೆ. ಬಹುತೇಕ ನವ ಜೋಡಿಗಳು ಇಲ್ಲಿನ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಬಹಳ ವಿಶೇಷ. ರಥೋತ್ಸವದಲ್ಲಿ ಎಲ್ಲಿ ನೋಡಿದರೂ ನವ ಜೋಡಿಗಳು ಕಾಣುತ್ತಾರೆ. ರಥೋತ್ಸವ ಜರುಗಿದ ನಂತರವೇ ವಧು- ವರರು ಆಗಮಿಸಿ ಇಲ್ಲಿನ ಐತಿಹಾಸಿಕ ತಿಳಿದುಕೊಳ್ಳುವ ಪದ್ಧತಿ ಮೊದಲನಿಂದ ಇದೆ.
ಮೇ 16ರಂದು ಮಾನಸಗಲ್ ಲಕ್ಷ್ಮೀ ರಂಗನಾಥ ದೇವಸ್ಥಾನ ರಥೋತ್ಸವ ಪ್ರಯುಕ್ತ ತಾಲೂಕಾಡಳಿತ ವತಿಯಿಂದ ಸಕಲ ಸಿದ್ಧತೆ ಮಾಡಲಾಗಿದೆ. ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿದೆ.
-ಶ್ರೀನಿವಾಸ ಚಾಪಲ್, ತಹಶೀಲ್ದಾರ್