ಹೊಳಲ್ಕೆರೆ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊರಕೆರಿ ದೇವರಪುರದಲ್ಲಿ ನೆಲೆಸಿರುವ ತಿರುಪತಿ ವೆಂಕಟೇಶ್ವರಸ್ವಾಮಿಯ ಇನ್ನೊಂದು ಅವತಾರ ಎನ್ನಲಾಗುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಜಾತ್ರೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಗುರುವಾರ ಮಧ್ಯಾಹ್ನ 3.30ಕ್ಕೆ ನೆರವೇರಿತು. ಮಾ.10ರಂದು ಆರಂಭಗೊಂಡಿದ್ದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಜಾತೋತ್ಸವದಲ್ಲಿ ಗುರುವಾರ ನಡೆಯಲಿರುವ ಬ್ರಹ್ಮರಥೋತ್ಸದ ಅಂಗವಾಗಿ ಹಲವಾರು ಸಂಪ್ರಾದಾಯಗಳ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಗುರುವಾರ ಬೆಳಗ್ಗೆ ಆನೆ ಉತ್ಸವದಿಂದ ಆರಂಭಗೊಂಡು, ರಥಾರೋಹಣ ಮಂಟಪಕ್ಕೆ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಆಗಮನದ ಬಳಿಕ ಮಧ್ಯಾಹ್ನ 3.30ಕ್ಕೆ ಶ್ರೀಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಜನಸಾಗರ ನಡುವೆ ತೇರೋತ್ಸವ
ಶ್ರೀಲಕ್ಷ್ಮಿ ನರಸಿಂಹಸ್ವಾಮಿ ಬ್ರಹ್ಮರಥೋತ್ಸವಕ್ಕೆ ರಾಜ್ಯ ಮೂಲೆಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಇದಕ್ಕೂ ಮೊದಲು ಶ್ರೀ ಲಕ್ಷ್ಮೀನರಸಿಂಹಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ವಿವಿಧ ಪೂಜಾ ಗಳನ್ನು ಭಕ್ತರ ಸಮ್ಮುಖದಲ್ಲಿ ಸಲ್ಲಿಸಲಾಗಿತ್ತು. ಸಂಪ್ರದಾಯದಂತೆ ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ಗೋವಿಂದ ಗೋವಿಂದ ಎನ್ನುವ ವೇದಘೋಕ್ಷಗಳೊಂದಿಗೆ ರಥ ಹಗ್ಗ ಹಿಡಿದು ಎಳೆಯುವ ತವಕದಿಂದ ದೇವರನ್ನು ಪ್ರಾರ್ಥನೆ ಮಾಡುತ್ತಿರುವಾಗ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಎನ್ನಲಾಗಿರುವ ಗರುಡ ಎಲ್ಲೋ ಭಕ್ತರ ಕಣ್ಣಿಗೆ ಕಾಣದಂತೆ ಅಡಗಿದ್ದು, ನಿಗದಿತ ಸಮಯಕ್ಕೆ ಹಾರಿ ಬಂದು ಗುರುಡ 3 ಬಾರಿ ರಥವನ್ನು ಪ್ರದಕ್ಷಿಣೆ ಹಾಕಿದ ಬಳಿಕ ಇಲ್ಲಿ ಸೇರಿದ್ದ ಭಕ್ತರು ಭಕ್ತಿಯ ಪರಾಕಾಷ್ಠೆ ಇಮ್ಮಡಿಗೊಂಡು ರಥವನ್ನು ಎಳೆಯಲಾರಂಭಿಸಿದರು. ರಥ ಸಂಚರಿಸುತ್ತಿದ್ದಾಗ ದೇವಸ್ಥಾನದ ಅಂಗಳದಲ್ಲಿ ಸೇರಿದ್ದ ಭಕ್ತರು ಗೋವಿಂದ ಗೋವಿಂದ ಗೋವಿಂದ ಎಂಬ ಜಯ ಘೋಷಣೆಯೊಂದಿಗೆ ಭಕ್ತಿಯ ಪರಾಕಾಷ್ಠೆ ಮೆರೆದರು. ರಥಕ್ಕೆ ಬಾಳೆಹಣ್ಣು ಎಸೆದು, ಗಾಲಿಗೆ ತೆಂಗಿನ ಕಾಯಿ ಒಡೆದು ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಗಾಗಿ ಭಕ್ತಿ ಭಾವದಿಂದ ಭಕ್ತರು ಭಕ್ತಿ ಸಮರ್ಪಿಸಿದರು.
1.80 ಲಕ್ಷಕ್ಕೆ ಹೂವಿನ ಹಾರ ಹರಾಜು
ರಥೋತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರ ಆಶಯದಂತೆ ರಥೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಹೂವಿನ ಹಾರ ಹಾರಾಜು ಪ್ರಕ್ರಿಯೆ ದೇವಸ್ಥಾನದ ಸಮಿತಿಯಿಂದ ಹಮ್ಮಿಕೊಂಡಿದ್ದು, ಈ ಭಾರಿ ಪ್ರಮುಖ ಹೂವಿನ ಹಾರ 1.80 ಲಕ್ಷ ರೂ.ಗಳಿಗೆ ಭಕ್ತರು ಪಡೆದುಕೊಂಡರು.
20ರಂದು ಜಾತ್ರೋತ್ಸವಕ್ಕೆ ಮಂಗಳ
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ತದನಂತರ ಪಾನಕ ಪೂಜಾ ವಸಂತೋತ್ಸವ, ಅನ್ನಸಂತರ್ಪಣೆ ಇತ್ತು. ಮಾ18 ರಂದು ಬೆಳಿಗ್ಗೆ ಭೂತಬಲಿ ಸೇವಾ, ಧೂಳ್ಳೋತ್ಸವ, ಪೀಠೊತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಚೌಕಿ ಉತ್ಸವ, ಅನ್ನಸಂತರ್ಪಣೆ, ಉಯ್ನಾಲೋತ್ಸವ, ಚೌಕಿ ಉತ್ಸವ, ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ ಅಶ್ವವಾಹನೋತ್ಸವ ಪಾರ್ವಟೋತ್ಸವ ನಡೆಯಲಿವೆ. ಮಾ.19ರಂದು ಪಲ್ಲಕ್ಕಿ ಉತ್ಸವ, ಸಂತರ್ಪಣೆ, ಪೀಠೊತ್ಸವ, ನವಿಲೋತ್ಸವ, ಹೂವಿನ ಪಲ್ಲಕ್ಕಿ ಮಹೋತ್ಸವ, ಕೊನೆಯ ದಿನ ರಥಕ್ಕೆ ಅರಿಶಿನ, ಕುಂಕುಮ ಸೇವೆಯಿಂದ ಜಾತೋತ್ಸವ ಸಂಪನ್ನಗೊಳ್ಳಲಿದೆ.