Advertisement

ಸೋದರರ ವಿರುದ್ಧ ಗೆದ್ದು ಬೀಗಿದ ಲಕ್ಷ್ಮೀ

06:00 AM Sep 08, 2018 | Team Udayavani |

ಬೆಳಗಾವಿ: ಜಾರಕಿಹೊಳಿ ಕುಟುಂಬದ ಶಾಸಕರು ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ನಡುವಿನ ತೀವ್ರ ಭಿನ್ನಮತದಿಂದ ಇಡೀ ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಶುಕ್ರವಾರ ಸುಖಾಂತ್ಯ ಕಂಡಿದೆ. 

Advertisement

ಎರಡೂ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಶಾಸಕಿ  ಲಕ್ಷ್ಮೀ ಹೆಬ್ಟಾಳಕರ ಗುಂಪಿನ ಉಚಗಾವ್‌ ಕ್ಷೇತ್ರದ 83 ವರ್ಷದ ಮಹದೇವ ಯಲ್ಲಪ್ಪ ಪಾಟೀಲ ಅಧ್ಯಕ್ಷರಾಗಿ ಹಾಗೂ ಸುಳೇಭಾವಿ ಕ್ಷೇತ್ರದ ಬಾಪುಸಾಹೇಬ ಮಹ್ಮದಅಲಿ ಜಮಾದಾರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಬೆಳಗಾವಿ ತಹಶೀಲ್ದಾರ್‌ ಮಂಜುಳಾ ನಾಯಕ, ಮಧ್ಯಾಹ್ನ 2.10ಕ್ಕೆ ಅವಿರೋಧ ಆಯ್ಕೆಯ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆ.28ರಂದು ಈ ಚುನಾವಣೆ ನಡೆಯಬೇಕಿತ್ತು. ಆದರೆ, ಒಬ್ಬ ನಿರ್ದೇಶಕರ ಅಪಹರಣ ಆಗಿದೆ ಎಂದು ದೂರು ಬಂದಿತ್ತು. ಪೊಲೀಸ್‌ ಅಧಿಕಾರಿಗಳು ಸಹ ಈ ಬಗ್ಗೆ ಮಾಹಿತಿ ನೀಡಿದ್ದರು. ಇದೆಲ್ಲವನ್ನು ಪರಿಶೀಲಿಸಿ ಚುನಾವಣೆ ಮುಂದೂಡಲಾಗಿತ್ತು. ಇದರ ಹಿಂದೆ ಯಾರ ಒತ್ತಡವೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಯಿತು.  ಲಕ್ಷ್ಮೀ ಹೆಬ್ಟಾಳಕರ ಗುಂಪಿನ 9 ನಿರ್ದೇಶಕರು ಹೆಬ್ಟಾಳಕರ ನೇತೃತ್ವದಲ್ಲಿ ಕಪಿಲೇಶ್ವರ ಮಂದಿರದಲ್ಲಿ ಪೂಜೆ ಸಲ್ಲಿಸಿ ನಂತರ ಬ್ಯಾಂಕ್‌ಗೆ ಬಂದು ನಾಮಪತ್ರ ಸಲ್ಲಿಸಿದರು. ಆದರೆ, ಸತೀಶ ಜಾರಕಿಹೊಳಿ ಗುಂಪಿನ ಯಾವ ನಿರ್ದೇಶಕರೂ ಬಾರದೆ ಗೈರು ಹಾಜರಾಗಿ ಅಚ್ಚರಿಯ ಬೆಳವಣಿಗೆಗೆ ಕಾರಣರಾದರು.

ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯದ ನಂತರ ಸ್ಥಳಕ್ಕೆ ಬಂದ ಜಾರಕಿಹೊಳಿ ಗುಂಪಿನ ಪರಶುರಾಮ ಪಾಟೀಲ ಹಾಗೂ ನಾಲ್ವರು ನಿರ್ದೇಶಕರು “ನಮ್ಮ ನಾಯಕರ ಮಾತಿನಂತೆ ನಾವು ನಾಮಪತ್ರ ಸಲ್ಲಿಸಿಲ್ಲ. ನಮ್ಮಲ್ಲಿ ಯಾವುದೇ ಬಣ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಅವಿರೋಧ ಆಯ್ಕೆ ಮಾಡುತ್ತಿದ್ದೇವೆ. ಇದನ್ನು ಇಲ್ಲಿಗೇ ಮುಕ್ತಾಯಗೊಳಿಸಬೇಕು’ ಎಂದರು.

Advertisement

ಖಂಡ್ರೆ ಸಂಧಾನ ಯಶಸ್ವಿ: ಕಾಂಗ್ರೆಸ್‌ ವರಿಷ್ಠರ ಸೂಚನೆಯಂತೆ ರಾಜಿ ಸಂಧಾನ ಸೂತ್ರದೊಂದಿಗೆ ಬೆಳಗ್ಗೆ ನಗರಕ್ಕೆ ಆಗಮಿಸಿದ ಈಶ್ವರ ಖಂಡ್ರೆ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಟಾಳಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದರು.

ಇನ್ನು ಕಳೆದ ಮೂರ್‍ನಾಲ್ಕು ದಿನಗಳಿಂದ ವಿವಾದಾಸ್ಪದ ಹೇಳಿಕೆ ನೀಡುತ್ತಲೇ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚುನಾವಣೆಯಿಂದ ದೂರ ಉಳಿದು ದೇವರ ದರ್ಶನಕ್ಕೆ ತೆರಳಿದ್ದರು. ಶ್ರಾವಣ ಶುಕ್ರವಾರದ ಹಿನ್ನೆಲೆಯಲ್ಲಿ ಕೊಲ್ಲಾಪುರಕ್ಕೆ ತೆರಳಿದ ಸಚಿವರು, ಮಹಾಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಂಕ್‌ ಆವರಣದಲ್ಲಿ ಬೆಳಗ್ಗೆಯಿಂದಲೇ ಭಾರೀ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ನಗರ ಪೊಲೀಸ್‌ ಆಯುಕ್ತ ಡಿ.ಸಿ.ರಾಜಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next