ಸುವರ್ಣ ಸೌಧ : ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿರುವ ಸಹೋದರ ಚನ್ನರಾಜ್ ಹಟ್ಟಿಹೊಳಿ ಜೊತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೈ ಹಿಡಿದುಕೊಂಡೇ ಸುವರ್ಣಸೌಧಕ್ಕೆ ಆಗಮಿಸಿ ಗಮನ ಸೆಳೆದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಲಕ್ಮೀ ಹೆಬ್ಬಾಳ್ಕರ್, ಗೆಲ್ಲುವುದೇ ನಮ್ಮ ಗುರಿಯಾಗಿತ್ತು. ಕೊನೆಗೂ ನಾವು ಗೆಲುವು ಸಾಧಿಸಿದ್ದೇವೆ. ಯಾರನ್ನೋ ಸೋಲಿಸಬೇಕೆಂದು ಸ್ಪರ್ಧೆ ಮಾಡಿರಲಿಲ್ಲ. ಮೊದಲ ದಿನದಿಂದ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ, ಹೀಗಾಗಿ ಗೆದ್ದಿದ್ದೇವೆ ಎಂದರು.
ಪರಿಷತ್ ಚುನಾವಣೆಯಲ್ಲಿ ಹಣ ಹಂಚಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ಚುನಾವಣೆ ವೇಳೆ ನಾವು ನಡೆದುಕೊಳ್ಳುವ ರೀತಿಯನ್ನು ಜನರು ನೋಡುತ್ತಾರೆ. ಮತದಾರರು ಪ್ರಬುದ್ಧರಾಗಿದ್ದಾರೆ, ಚುನಾವಣೆಯಲ್ಲಿ ಹಣವೇ ಮುಖ್ಯ ಅಲ್ಲ ಎಂದರು.
ನಮ್ಮ ಕಾರ್ಯಕರ್ತರು ಯಾರಿಗೆ ಉತ್ತರ ಕೊಡಬೇಕಾಗಿತ್ತೋ ಅವರಿಗೆ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಯನ್ನ ಕುಟುಕಿದರು.
ಚುನಾವಣೆ ಎಂದ ಮೇಲೆ ತಂತ್ರ, ಪ್ರತಿತಂತ್ರ ಸಹಜ. ನಾವು ಕೂಡ ಗೆಲುವಿಗಾಗಿ ರಣತಂತ್ರ ರೂಪಿಸಿದ್ದೆವು. ಮೊದಲಿನಿಂದಲೂ ಗೆಲುವಿಗಾಗಿ ಸಾಕಷ್ಟು ಕೆಲಸ ಮಾಡಿದ್ದೆವು. ನಮ್ಮ ನಾಯಕರೆಲ್ಲರೂ ಜೊತೆಯಾಗಿ ನಿಂತಿದ್ದರು.ಕೊನೆಗೆ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಯಾವುದೋ ಒಂದು ಕುಟುಂಬದ ಹೋರಾಟವಲ್ಲ. ಅವರದ್ದೇ ಕುಟುಂಬದ ಸಹೋದರ ನಮ್ಮ ಜೊತೆಗೆ ಇರಲಿಲ್ಲವೇ ಎಂದು ಪ್ರಶ್ನಿಸಿದರು.