ಬೆಳಗಾವಿ: ಕಾಂಗ್ರೆಸ್ ನಾಯಕಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವೀರಶೈವ ಲಿಂಗಾಯತ ಪಂಚಮಸಾಲಿ ಅಲ್ಲ. ಬದಲಿಗೆ ಬಣಜಿಗ ಸಮಾಜದವರು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾನಾಪುರ ತಾಲೂಕಿನ ಹಟ್ಟಿಹೋಳಿ ಗ್ರಾಮದ ಲಕ್ಷ್ಮೀ ಹೆಬ್ಬಾಳಕರ ವಿವಾಹಕ್ಕೆ ಮೊದಲು ಲಕ್ಷ್ಮಿ ಹಟ್ಟಿಹೋಳಿ ಹಾಗೂ ವೀರಶೈವ ಲಿಂಗಾಯತ ಎಂದು ದಾಖಲೆಯಲ್ಲಿದೆ. ಅದರಲ್ಲಿ ಪಂಚಮಸಾಲಿ ಎಂದಿಲ್ಲ. ಮೇಲಾಗಿ ಅವರು ರವೀಂದ್ರ ಹೆಬ್ಬಾಳಕರ ಅವರನ್ನು ವಿವಾಹವಾದ ನಂತರ ಲಿಂಗಾಯತ ಬಣಜಿಗ ಎಂದು ಬದಲಾಗಿದೆ. ಕಾರಣ ಹೆಬ್ಬಾಳಕರ ಕುಟುಂಬ ಬಣಜಿಗ ಸಮಾಜದವರು. ಅದರಂತೆ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಸಹ ಬಣಜಿಗ ಸಮಾಜಕ್ಕೆ ಸೇರಿದವರು ಎಂದು ನಿರಾಣಿ ಹೇಳಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ ಪದೇ ಪದೇ ನನ್ನ ಮೈಯಲ್ಲಿ ಪಂಚಮಸಾಲಿ ರಕ್ತ ಹರಿಯುತ್ತಿದೆ ಎಂದು ಹೇಳುವದು ಸೂಕ್ತವಲ್ಲ. ಬೆಳಗಾವಿ ಕ್ಷೇತ್ರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಅವರನ್ನು ತಮ್ಮ ಕಡೆಗೆ ಸೆಳೆದುಕೊಳ್ಳಲು ಹೆಬ್ಬಾಳಕರ ಅಪ್ಪಟ ಸುಳ್ಳು ಹೇಳುತ್ತಿದ್ದಾರೆ ಎಂದು ಮುರುಗೇಶ ನಿರಾಣಿ ಟೀಕಾಪ್ರಹಾರ ಮಾಡಿದರು
ತಮ್ಮ ಸರಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡುವುದಾಗಿ ಹೆಬ್ಬಾಳಕರ ಮಾತು ಕೊಟ್ಟಿದ್ದರು. ಆದರೆ ಸರಕಾರ ಬಂದು ವರ್ಷವಾಗುತ್ತ ಬಂದರೂ ಇನ್ನೂ 2 ಎ ಮೀಸಲಾತಿ ಸಿಕ್ಕಿಲ್ಲ. ಇದರ ನೈತಿಕ ಹೊಣೆ ಹೊತ್ತು ಹೆಬ್ಬಾಳಕರ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡಿದರು.
ಒಂದು ವೇಳೆ ಈಗ 2 ಎ ಮೀಸಲಾತಿ ದೊರಕಿಸಿಕೊಟ್ಟರೆ ನಾವು ಸಮಾಜದ ಎಲ್ಲ ಮುಖಂಡರು ಹಾಗೂ ಸದಸ್ಯರೊಂದಿಗೆ ಹೆಬ್ಬಾಳಕರ ಅವರಿಗೆ ಒಂದು ಕೆಜಿ ಬಂಗಾರದ ಆಭರಣ ತಂದುಕೊಟ್ಟು ಅದ್ದೂರಿ ಸನ್ಮಾನ ಮಾಡುತ್ತೇವೆ ಎಂದು ಸವಾಲು ಹಾಕಿದರು.