Advertisement

ನೈಜ ಕಲಿಕಾ ಮಾದರಿಯಿಂದ ಮಾತ್ರ ಕಲೆಯ ಸಿದ್ಧಿ ಸಾಧ್ಯ

11:40 PM Jan 22, 2020 | Sriram |

ಉಡುಪಿಯ ಕೃಷ್ಣ ಮೂರ್ತಿ ರಾವ್‌ ಮತ್ತು ಪ್ರೇಮಾ ಪುತ್ರಿಯಾದ ಲಕ್ಷ್ಮೀ ಗುರುರಾಜ್‌ ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಭರತನಾಟ್ಯ ಕಲಿಕೆಗೆ ಮುಂದಾದವರು. ಸುಮಾರು 40 ವರ್ಷಗಳಿಂದ ಕ್ಷೇತ್ರದಲ್ಲಿದ್ದು ದುಡಿಯತ್ತಿರುವವರು. ತಮ್ಮದೇ ಆದ ವಿಶಿಷ್ಟ ಪರಿಕಲ್ಪನೆಯಿಂದ ಭರತನಾಟ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿರುವವರು ಲಕ್ಷ್ಮೀ ಗುರುರಾಜ್‌ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

Advertisement

ಭಾರತೀಯ ಸಂಸ್ಕೃತಿಯ ಪ್ರತೀಕವಾದ ಭರತನಾಟ್ಯ ಕಲೆಯನ್ನು ಮೂರು ದಶಕಗಳಿಂದ ಪೋಷಿಸುವುದರ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ಅದರ ಸಾರವನ್ನು ಉಣಬಡಿಸುತ್ತಿರುವ ಉಡುಪಿ ನೃತ್ಯನಿಕೇತನದ ಸ್ಥಾಪಕ ನಿರ್ದೇಶಕಿ ವಿದುಷಿ ಲಕ್ಷ್ಮೀ ಗುರುರಾಜ್‌ ಭರತನಾಟ್ಯ ಕ್ಷೇತ್ರದ ಹಿರಿಯ ಪ್ರತಿಭೆ. ಮೈಸೂರು ಮುಕುಂದ ಕೃಪಾ ಕಲಾ ಶಾಲೆಯ ಮೋಹನ್‌ ರಾವ್‌ರ ಬಳಿ ಮೈಸೂರು ಶೈಲಿಯ ಭರತನಾಟ್ಯವನ್ನು ಕಲಿತಿರುವ ಇವರು ಸಂಗೀತ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವವರು. ಸದ್ಯ ಮಧುರ್‌ ಪಿ. ಬಾಲಸುಬ್ರಹ್ಮಣ್ಯ ಅವರ ಬಳಿ ಸಂಗೀತಾ ಭ್ಯಾಸ ಮುಂದುವರೆ
ಸುತ್ತಿರುವ ಲಕ್ಷ್ಮೀ ಅವರ ಪ್ರಕಾರ ಕಲಿಕೆ ಅನ್ನುವುದು ಮುಗಿಯದ ಪಯಣ. ಇವರನ್ನು ಸುದಿನ ಪ್ರತಿಭಾ ಸಿರಿಗೆ ಮಾತನಾಡಿಸಿರುವವರು ಸುಶ್ಮಿತಾ ಜೈನ್‌.

ಭರತನಾಟ್ಯದಲ್ಲಿ ಪ್ರಯೋಗಶೀಲ ಎಂದರೇನು ?
ಭರತನಾಟ್ಯದ ಶಾಸ್ತ್ರೀಯ ನೃತ್ಯದ ನೆಲೆಗಟ್ಟಿನಲ್ಲಿಯೇ ವಿಭಿನ್ನ ಶೈಲಿಯ ಪ್ರಯೋಗ ಮಾಡಬಹುದು. ಇದಕ್ಕೆ ಪೌರಾ ಣಿಕ, ಐತಿಹಾಸಿಕ ವಿಷಯವಸ್ತುಗಳ ಬಳಕೆಯೇ ಬೇಕಿಲ್ಲ. ಉದಾಹರಣೆಗೆ, ಇತ್ತೀಚೆಗೆ ಭರತನಾಟ್ಯ ಕಲಾವಿದೆ ಪದ್ಮಾ ಸುಬ್ರಹ್ಯಣ್ಯಂ ಶಸ್ತ್ರಚಿಕಿತ್ಸೆಯ ದೃಶ್ಯದ ಗಂಭೀರತೆಯನ್ನು ತಮ್ಮ ನೃತ್ಯದ ಮೂಲಕ ಪ್ರಸ್ತುತಪಡಿಸಿದ್ದರು. ಹಾಗಾಗಿ ನಮ್ಮ ನೃತ್ಯ ಶೈಲಿಯ ಮೂಲಕವೇ ಸಾಮಾಜಿಕ ಕಳಕಳಿಯ ಸಂದೇಶವನ್ನು ಪ್ರಸ್ತುತಪಡಿಸಲು ಸಾಧ್ಯವಿದೆ. ಆದರೆ, ಒಂದು ನೃತ್ಯ ಪ್ರಸಂಗ ದಲ್ಲಿ ಮಧ್ಯೆ ನಾಟಕದಂತೆ ಸ್ವಲ್ಪ ಬಳಸುವುದು (ಸಂಭಾಷಣೆ ಇತ್ಯಾದಿ) ಅಥವಾ ಪೂರ್ತಿ ಸಮಕಾಲೀನ ನೃತ್ಯವೂ ಅಲ್ಲದಂಥ ಪ್ರಯೋಗವನ್ನು ಮಾಡುವುದು ತಪ್ಪು. ಅದು ಒಂದು ರೀತಿ ಯಲ್ಲಿ ಸಾಂಪ್ರದಾಯಿಕ ನೆಲೆಯಲ್ಲೂ ಇರದು, ಸಮಕಾಲೀನ ನೃತ್ಯ ಪರಂಪರೆಗೂ ಒಗ್ಗದು. ಇಂಥ ಪ್ರಯೋಗಗಳು ಸಲ್ಲದು.

ರಿಯಾಲಿಟಿ ಶೋಗಳ ಗೋಜಲಿಗೆ ಬಿದ್ದು, ಇಂದಿನ ಮಕ್ಕಳು ತ್ವರಿತ ಕಲಿಕೆಗೆ ಬಲಿಯಾಗುತ್ತಿದ್ದಾರೆ. ಏನು ಮಾಡುವುದು?
ಓರ್ವ ಕಲಾವಿದ ಸಾಮಾನ್ಯವಾಗಿ ಆ ಕಲೆಯನ್ನು ಪಾರಂಗತ ಮಾಡಿಕೊಳ್ಳಲು ಹತ್ತಾರು ವರ್ಷಗಳು ಬೇಕು. ಎತೆಗೆ ಕಲಿಕೆಯ ಅಡಿಪಾಯವೂ ಗಟ್ಟಿಯಾಗಿರಬೇಕು. ಆದರೆ ಇಂದಿನ ಮಕ್ಕಳು ಅಲ್ಪಾವಧಿಯಲ್ಲಿ ಯಶಸ್ಸು ಕಾಣುವ ಹಂಬಲದೊಂದಿಗೆ ಕಲೆಯ ಮೂಲ ಸ್ವರೂಪವನ್ನು ಬಿಟ್ಟು ನಡೆಯುತ್ತಿದ್ದಾರೆ. ನಿಗದಿತ ಕಲಿಕಾ ಮಾದರಿಯನ್ನು ಮರೆತು ಸಾಧನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ತತ್‌ಕ್ಷಣಕ್ಕೆ ಖುಷಿ ನೀಡಿದರೂ ಸಂಪೂರ್ಣವಾಗಿ ಕಲೆಯನ್ನು ಸಿದ್ಧಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ನೈಜ ಕಲಿಕಾ ಮಾದರಿಯನ್ನು ಅನುಸರಿಸುವುದೇ ಪರಿಹಾರ.

ರಂಗಪ್ರವೇಶ ಆದಷ್ಟು
ಸರಳಗೊಳಿಸುವುದು ಹೇಗೆ?
ಭರತನಾಟ್ಯ ಕಲೆಯ ಎಲ್ಲ ಮಜಲುಗಳಲ್ಲಿ ಸೈ ಎನಿಸಿಕೊಂಡು ವಿದ್ವತ್‌ಗೆ ಅರ್ಹರು ಎಂಬ ಹಂತಕ್ಕೆ ಬಂದಾಗ ಮಾಡುವಂಥದ್ದೇ ರಂಗಪ್ರವೇಶ. ಆದರೆ ಇದು ಕಡ್ಡಾಯವಾಗಿ ಆಗಬೇಕೆಂದೇ ಇಲ್ಲ. ಒಂದು ದೇವಸ್ಥಾನದಲ್ಲಿಯೂ ಈ ಒಂದು ಕ್ರಮವನ್ನು ಕೈಗೊಳ್ಳಬಹುದು. ಆಡಂಬರವಾಗಿಯೇ ಮಾಡಬೇಕು ಎಂಬ ಯಾವುದೇ ನಿಯಮಗಳು ಇಲ್ಲ. ಇದರ ಹೊರತಾಗಿ ಕೆಲವರು ತಮ್ಮ ಅಂತಸ್ತಿನ ಪ್ರದರ್ಶನಕ್ಕೆ ಇಂತಹ ಅದ್ದೂರಿ ಕಾರ್ಯಕ್ರಮ ಮಾಡುತ್ತಾರೆ, ಅಷ್ಟೇ. ಅದು ಎಲ್ಲರಿಗೂ ಅನಿವಾರ್ಯವಲ್ಲ, ಆಯ್ಕೆಯಷ್ಟೇ.

Advertisement

ಅರ್ಧದಲ್ಲಿಯೇ ಅಭ್ಯಾಸ ನಿಲ್ಲಿಸುವುದಕ್ಕೆ ವೈವಾಹಿಕ ಬದುಕು ಕಾರಣವಾಗುತ್ತಿದೆಯೇ?
ಖಂಡಿತ ಇಲ್ಲ. ಈ ಹಿಂದೆ ಮದುವೆಯಾದ ಮೇಲೆ ಈ ನೃತ್ಯ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ ಎಂಬ ಮಾತಿತ್ತು. ಮದುವೆ ಆದರೂ ಕುಣಿಯುವುದು ಬಿಟ್ಟಿಲ್ಲ ಎಂದು ವ್ಯಂಗ್ಯ ಮಾಡುತ್ತಿದ್ದರು. ಆದರೆ ಇಂದು ಆ ಮನಃಸ್ಥಿತಿ ಇಲ್ಲ. ಮದುವೆಯ ಬಳಿಕವೂ ಹೆಣ್ಣು ಮಕ್ಕಳು ಈ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಅಂಥವರಿಗೆ ಕುಟುಂಬ ಸಹಕಾರವೂ ಸಿಗುತ್ತಿದೆ. ಇಂದು ಶಿಕ್ಷಣದ ಸಲುವಾಗಿ ಅರ್ಧದಲ್ಲಿಯೇ ನಿಲ್ಲಿಸುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು, ಅತೀ ಹೆಚ್ಚು ಅಂಕ ಗಳಿಸುವುದೊಂದೇ ಮುಖ್ಯ ಎಂಬ ಧೋರಣೆ ಮಕ್ಕಳ ಕ್ರಿಯಾಶೀಲವನ್ನು ಕೊಲ್ಲುತ್ತಿದೆ.

ಭರತನಾಟ್ಯವನ್ನು ಅನುಭವಿಸುವ ಕ್ರಮ ಯಾವುದು ?
ಇತ್ತೀಚೆಗೆ ಭರತನಾಟ್ಯದ ಅಭಿರುಚಿ ಕಡಿಮೆಯಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣ ಕೇವಲ ಎರಡು ಮೂರು ವರ್ಷಗಳ ಕಾಲ ಅಭ್ಯಾಸ ಮಾಡಿ ನೃತ್ಯ ಪ್ರದರ್ಶನಕ್ಕೆ ಮುಂದಾಗುವ ನಿಲುವು. ಅವರಲ್ಲಿ ಸಾತ್ವಿಕ ಅಭಿನಯ ಇರುವುದಿಲ್ಲ . ಸಹರಾ ಮತ್ತು ರಸದೃಷ್ಟಿಯ ಕುರಿತಾದ ಜ್ಞಾನವಿರುವುದಿಲ್ಲ. ಹಾಗಾಗಿ ಮೊದಲು ನಾವು ಕಲೆಯಲ್ಲಿ ತಲ್ಲೀನವಾಗಿ ಆದನ್ನು ಆಳವಾಗಿ ಅಭ್ಯಸಿಸಿ, ಸರ್ವಾಂಗೀಣ ನೆಲೆಯನ್ನೂ ಅರಿತು ಪ್ರಯೋಗದಲ್ಲಿ ತೊಡಗಬೇಕು. ಆಗ ಮಾತ್ರ ನೃತ್ಯ ಪ್ರದರ್ಶನದ ಮೂಲಕ (ಕಲೆ) ನಾವು ಪ್ರೇಕ್ಷಕರಿಗೆ ನಿಜವಾದ ಆನಂದ ನೀಡಲು ಸಾಧ್ಯ. ಉಡುಪಿಯ ಕೃಷ್ಣ ಮೂರ್ತಿ ರಾವ್‌ ಮತ್ತು ಪ್ರೇಮಾ ಪುತ್ರಿಯಾದ ಲಕ್ಷ್ಮೀ ಗುರುರಾಜ್‌ ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಭರತನಾಟ್ಯ ಕಲಿಕೆಗೆ ಮುಂದಾದವರು. ಸುಮಾರು 40 ವರ್ಷಗಳಿಂದ ಕ್ಷೇತ್ರದಲ್ಲಿದ್ದು ದುಡಿಯತ್ತಿರುವವರು. ತಮ್ಮದೇ ಆದ ವಿಶಿಷ್ಟ ಪರಿಕಲ್ಪನೆಯಿಂದ ಭರತನಾಟ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿರುವರು ಲಕ್ಷ್ಮೀ ಗುರುರಾಜ್‌ ಆವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

 ಭರತನಾಟ್ಯದಲ್ಲಿ ಯಕ್ಷಗಾನದ ಅನುಕರಣೆ ಕುರಿತು ನಿಮ್ಮ ಅಭಿಪ್ರಾಯ ?
ಯಕ್ಷಗಾನ ತುಳುನಾಡಿನ ಹಿರಿಮೆ. ಈ ಕಲೆಗೆ ಅದರದೇ ಆದ ಘನತೆ, ಛಾಪು, ಗೌರವ ಎಲ್ಲಾ ಇದೆ. ಆದರೆ ಕಾಲಘಟ್ಟ ಬದಲಾದಂತೆ ಜನರ ಮನಃ‌ಸ್ಥಿತಿ ಬದಲಾಗುತ್ತಿದ್ದು, ಕಲಾವಿದರೂ ಕಲಾಭಿಮಾನಿಗಳನ್ನು ಆಕರ್ಷಿಸಬೇಕೆಂಬ ಭರದಲ್ಲಿ ಯಕ್ಷಗಾನದ ಮೂಲವನ್ನು ಮರೆಯುತ್ತಿದ್ದಾರೆ. ಸಲ್ಲದಕ್ಕೆ ಇತರ ನೃತ್ಯ ಪ್ರಕಾರಗಳನ್ನು ಎರವಲು ಮಾಡುವುದರಿಂದ ಅದರ ನೈಜತೆ ಅಪಾಯಕ್ಕೆ ಸಿಲುಕುತ್ತದೆ. ಶ್ರೀಮಂತ ಕಲೆಯಾದ ಯಕ್ಷಗಾನಕ್ಕೆ ಇತರ ನೃತ್ಯಗಳನ್ನು ಅನುಕರಣೆ ಮಾಡುವ ಅಗತ್ಯವೂ ಇಲ್ಲ. ಹಾಗೆ ಮಾಡುವುದೂ ಸೂಕ್ತವಲ್ಲ.

Advertisement

Udayavani is now on Telegram. Click here to join our channel and stay updated with the latest news.

Next