Advertisement
ಮನು ಪಣಿಕ್ಕರ್, ಕಾಸರಗೋಡಿನ ಹೆಸರಾಂತ ಭೂತ ಕಲಾವಿದ.ಭೂತಾರಾಧಕರಿಗೆ ಚಿರಪರಿಚಿತ ಹೆಸರು. ಇವರ ವಿಷ್ಣುಮೂರ್ತಿ, ಗುಳಿಗ, ಚಾಮುಂಡಿ, ರಕ್ತೇಶ್ವರಿ ಮುಂತಾದ ಭೂತದ ಕೋಲಗಳನ್ನು ನೋಡುವುದು ಒಂದು ಭಾಗ್ಯವೇ ಸರಿ. ನೋಡುಗರ ,ಮನದಲ್ಲಿ ಭಯ ಭಕ್ತಿಯ ಭಾವ ಮೂಡುವುದು ಮಾತ್ರವಲ್ಲದೆ ಎಂದೂ ಮರೆಯಲಾಗದ ಅನುಭವವನ್ನೂ ನೀಡುವುದರಲ್ಲಿ ಎರಡುಮಾತಿಲ್ಲ. ಶ್ರದ್ಧೆ, ಹಾಗೂ ಸತತ ಪ್ರಯತ್ನದ ಮೂಲಕ ಜನಪದ ಲೋಕದಲ್ಲಿ ಇವರು ಮಾಡಿದ ಸಾಧನೆ ಅಪಾರ. ತನ್ನ ಕುಲ ಕಸುಬನ್ನು ಗೌರವಾಧಾರಗಳಿಂದ ಮುಂದುವರಿಸುತ್ತಿರುವ ಮನು ಪಣಿಕ್ಕರ್ ಸರಸ್ವತಿಯ ಕೃಪೆಗೆ ಭಾಜನರಾದ ಶ್ರೇಷ್ಟ ಕಲಾವಿದ.
ಮನುಪಣಿಕ್ಕರ್ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿಯೇ ಭೂತ ಕಟ್ಟಲು ಪ್ರಾರಂಭಿಸಿದರು. ಅಂತೆಯೇ ತನ್ನ ತೀರ್ಥರೂಪರಾದ ಬಿ.ಯಂ.ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಚೆಂಡೆ ನಿರ್ಮಾಣವನ್ನೂ ಕಲಿತರು. ಪ್ರಸ್ತುತ ಬದಿಯಡ್ಕ ಪೊಲೀಸ್ ಠಾಣೆಯ ಬಳಿ ಶ್ರೀ ಶೆ„ಲಂ ಕಲಾ ಆರ್ಟ್ಸ್ ಎಂಬ ಚೆಂಡೆ ನಿರ್ಮಾಣ ಕೇಂದ್ರವನ್ನು ನಡೆಸುತ್ತಿದ್ದಾರೆ. ಈ ಚೆಂಡೆಗಳಿಗೆ ಕೇರಳ ದಾದ್ಯಂತ ಮಾತ್ರ ವಲ್ಲದೆ ನೆರೆ ರಾಜ್ಯಗಳಲ್ಲೂ ಭಾರೀ ಬೇಡಿಕೆಯಿದೆ. ಉತ್ತಮ ಚೆಂಡೆ ವಾದಕರಾದ ಪಣಿಕ್ಕರಿಗೆ ತಂದೆಯೇ ಮೊದಲ ಗುರು. ಮೊದಲು ಕೈಯಿಂದಲೇ ಚೆಂಡೆ ನಿರ್ಮಾಣ ಮಾಡುತ್ತಿದ್ದು ಈಗ ಆಧುನಿಕ ಯಂತ್ರಗಳು ಚೆಂಡೆ ತಯಾರಿಗೆ ಬಳಸಲಾಗುತ್ತಿದೆ. ಚೆಂಡೆ ತಯಾರಿಯೊಂದಿಗೆ ಚೆಂಡೆ ವಾದಕರೂ ಆಗಿರುವ ಮನು ಪಣಿಕ್ಕರ್ ತಾನು ಕಲಿತ ವಿದ್ಯೆಯನ್ನು ಆಸಕ್ತರಿಗೂ ಕಲಿಸುತ್ತಿದ್ದಾರೆ. ಈಗಾಗಲೇ ಸುಮಾರು 300 ರಷ್ಟು ಮಂದಿ ಇವರ ಬಳಿ ಚೆಂಡೆಯನ್ನು ಅಭ್ಯಸಿಸಿ ಸಮಾಜದಲ್ಲಿ ಗುರುತಿಸಲ್ಪಟ್ಟಿರುವುದು ಅಭಿಮಾನದ ವಿಷಯ. ಇವರ ಬಳಿ ಹಲವು ಚೆಂಡೆಗಳ ಸಂಗ್ರಹವಿದ್ದು ಬಾಡಿಗೆಗೂ ನೀಡುತ್ತಾರೆ. ಇಷ್ಟು ಮಾತ್ರವಲ್ಲದೆ ತಾಯಂಬಕ, ಸಿಂಗಾರಿ ಮೇಳ, ಚೆಂಬುಡ, ಹಾಗೂ ತ್ರಿಬುಡ ಮೇಳಗಳೂ ಲಭ್ಯ. ತಾಯಂಬಕವನ್ನು ಪಣಿಯಾಲ ಪ್ರಭಾಕರನ್ ಮಾರಾರ್ ಅವರಿಂದಲೂ, ಸಿಂಗಾರಿ ಮೇಳದ ಕೆಲವು ಅಡವುಗಳನ್ನು ಕಲಾಮಂಡಲ ಮಧು ಪಣಿಕ್ಕರ್ ಅವರಿಂದಲೂ ಅಭ್ಯಸಿಸಿರುವ ಮನು ಪಣಿಕ್ಕರ್ ಮುನ್ನಡೆಸುವ ಸಿಂಗಾರಿ ಮೇಳವು ಈಗಾಗಲೇ ತನ್ನ ಅದ್ಭುತ ಪ್ರದರ್ಶನದ ಮೂಲಕ ಜನಮನ ಗೆದ್ದು ಬಹುಬೇಡಿಕೆಯ ತಂಡವಾಗಿ ಬೆಳೆಯುತ್ತಿದೆ.
Related Articles
ಇಂಪಾಗಿ ಗ್ರಾಮ್ಯ ಸೊಗಡು ಒಂದಿಷ್ಟೂ ಮರೆಯಾಗದಂತೆ ಪಾಡªನಗಳನ್ನು ಹಾಡುವ ಈ ಗಾಯಕನ ಪಾಡªನಗಳು ಮಡಿಕೇರಿ ಆಕಾಶವಾಣಿಯಲ್ಲಿ ಪ್ರಸಾರವಾಗಿದೆ. ಗಂಡುಮೆಟ್ಟಿನ ಕಲೆ ಯಕ್ಷಗಾನದಲ್ಲಿ ಕನ್ನಡ ಹಾಗೂ ಮಲಯಾಳಂ ಯಕ್ಷಗಾನ ಕಲಾವಿದರಾಗಿಯೂ ಗುರುತಿಸಿಕೊಂಡಿರುವ ಪಣಿಕ್ಕರರ ಸಾಧನೆ ಶ್ಲಾಘನೀಯ. ಯಕ್ಷಗಾನ ಪ್ರದರ್ಶನಕ್ಕೆ ಅಗತ್ಯವಿರುವ ಹಿಮ್ಮೇಳ ಹಾಗೂ ಮುಮ್ಮೇಳದ ಪರಿಕರಗಳೂ ಇವರ ಬಳಿ ಇದ್ದು ಮುಖ ವರ್ಣಿಕೆಯಲ್ಲೂ ಪಳಗಿದ್ದಾರೆ. ಕನ್ನಡ, ಮಲಯಾಳ, ತುಳು ಹಾಗೂ ಮರಾಠಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಪಣಿಕ್ಕರ್ ಉತ್ತಮ ವಾಗ್ಮಿ.
Advertisement
ನಾಟಿ ವೈದ್ಯ: ನಾಟಿವೈದ್ಯರಾಗಿ ಹಲವಾರು ಮಂದಿಯ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿರುವ ಇವರು ದೃಷ್ಟಿ ತೆಗೆಯುವುದರಲ್ಲೂ ಪಳಗಿರುವರು. ಸೊಪ್ಪು ಹಾಕುವುದು ಮುಂತಾದ ಪಾರಂಪರಿಕವಾಗಿ ಬಂದ ಕಲೆಯನ್ನು ಉಳಿಸಿಕೊಂಡು ಮುಂದುವರಿಸುತ್ತಿದ್ದು ಪತ್ನಿ ಶೀಜ, ಮಕ್ಕಳಾದ ಅನುಮೋದ್ ಹಾಗೂ ಅನುನಂದ ರೊಂದಿಗೆ ಸಂತಪ್ತ ಬದುಕು ಸಾಗಿಸುತ್ತಿದ್ದಾರೆ.
ಗೌರವ ಪ್ರಶಸ್ತಿಗಳು: ಮಾಯಿಪ್ಪಾಡಿ ಅರಮನೆಯ ಡಾ| ಎಂ.ರಾಮವರ್ಮ ರಾಜರು ರಕ್ತೇಶ್ವರಿ ದೈವದ ಆಚಾರ ಪಡೆದಿರುವ ಮನು ಅವರಿಗೆ ಪಣಿಕ್ಕರ್ ಎಂಬ ನಾಮಧೇಯದಿಂದ ಕರೆಯಲ್ಪಡುವ ನಾಮಾಂಕಿತ ಹಾಗೂ ಫ್ರಾಕು ಪದ್ಧತಿಯಂತೆ ಚಿನ್ನದ ಬಳೆಯನ್ನು ತೊಡಿಸಿದ್ದಾರೆ. ಮಲಯಾಳಂ ಯಕ್ಷಗಾನ, ಉತ್ತಮ ಸಮುದಾಯ ಸೇವೆ ಹಾಗೂ ಕರ್ಮಾನುಷ್ಠಾನಕ್ಕಾಗಿ ಕೇರಳ ಮಲಯ ಸೇವಾ ಸಂಘದಿಂದ ಪುರಸ್ಕಾರವನ್ನು ಪಡೆದಿದ್ದಾರೆ.
ಅಂತೆಯೇ ಕಾಸರಗೋಡಿನ ಸಂಘ ಸಂಸ್ಥೆಯಾದ ಮೀಡಿಯಾ ಕ್ಲಾಸಿಕಲ್ 2015ರಲ್ಲಿ ಚೆಂಡೆ ನಿರ್ಮಾಣ ಹಾಗೂ ಉತ್ತಮ ಭೂತ ಕೋಲಕ್ಕಿರುವ ಪುರಸ್ಕಾರವನ್ನು ನೀಡಿ ಮನು ಪಣಿಕ್ಕರ್ ಅವರನ್ನು ಗೌರವಿಸಿದೆ. ಕರ್ನಾಟಕ ರಾಜ್ಯ ಮಟ್ಟದ ‘ಜನಪದ ಲೋಕ’ ಪ್ರಶಸ್ತಿಯನ್ನು ಗಳಿಸಿರುವ ಪಣಿಕ್ಕರ್ ಮಂಗಳೂರು ಕಲ್ಕೂರ ಪ್ರತಿಷ್ಠಾನದ ‘ಜನಪದ ಸಿರಿ’ಪುರಸ್ಕಾರವನ್ನೂ ತನ್ನದಾಗಿಸಿಕೊಂಡಿದ್ದಾರೆ.
ಉತ್ತರ ಕೇರಳ ಮಲಯನ್ ಸಮುದಾಯ ಉದ್ಧರಣ ಸಂಘದ ರಾಜ್ಯ ಸಮ್ಮೇಳನದಲ್ಲಿ ಕೇರಳ ಸರಕಾರದ ಗುರುಪೂಜಾ ಪುರಸ್ಕಾರ ವಿಶಿಷ್ಟ ಸೇವೆ ಸಲ್ಲಿಸಿದ ಮನು ಪಣಿಕ್ಕರ್ ಅವರಿಗೆ ಲಭಿಸಿದೆ. ಇದು ಮಾತ್ರವಲ್ಲದೆ ಜಾನಪದ ಪರಿಷತ್ ಮಹಾರಾಷ್ಟ್ರ ಕಲಾಶ್ರೀ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಶ್ರೇಷ್ಟ ಕಲಾವಿದನ ಕಲಾಸೇವೆಗೆ ಇನ್ನಷ್ಟು ಗೌರವ ಪುರಸ್ಕಾರಗಳು ಲಭಿಸುವಂತಾಗಲಿ. ಕಾಸರಗೋಡಿನ ಮಣ್ಣಿನ ಕಲೆಯ ಕಂಪು ಜಗದಾದ್ಯಂತ ಪಸರಿಸಲಿ.
ಕಾಸರಗೋಡಿನ ಹೆಮ್ಮೆಕಾಸರಗೋಡಿನಲ್ಲಿ ಇಂತಹ ಒಬ್ಬರು ಶ್ರೇಷ್ಟ ಭೂತಕಲಾವಿದನಿರುವುದು ಹೆಮ್ಮೆ. ಸರಳ ವ್ಯಕ್ತಿತ್ವದ ಮನು ಪಣಿಕ್ಕರ್ ಸಾಧನೆ ಅಪಾರ. ವಿಷ್ಣುಮೂರ್ತಿ, ಚಾಮುಂಡಿ, ರಕ್ತೇಶ್ವರಿ ಮುಂತಾದ ದೈವಗಳನ್ನು ಪ್ರೌಢ ಗಾಂಭಿರ್ಯದಿಂದ ನಿರ್ವಹಿಸುವ ಅವರು ಜಾನಪದ ಕಲಾವಿದರೂ ಹೌದು. ಚೆಂಡೆವಾದನ, ಚೆಂಡೆ ತರಬೇತಿ, ಯಕ್ಷಗಾನ ವೇಷಧಾರಿ ಹಾಗೂ ಪರಿಕರಗಳ ಸಂಗ್ರಹ, ಇನ್ನಿತರ ಜಾನಪದ ಚಟುವಟಿಕೆಗಳಲ್ಲೂ ಎತ್ತಿದ ಕೈ. ಆದುದರಿಂದ ಈ ಕಲಾವಿದನ ಸಾಧನೆಗೆ ನೀಡಿದ ಸೂಕ್ತ ಗೌರವ. ಕೇಳು ಮಾಸ್ತರ್ ಅಗಲ್ಪಾಡಿ ನೇಮನಿಷ್ಠೆಗೆ ಗೌರವ
ಪಣಿಕ್ಕರ್ ತೋರಿದ ನೇಮನಿಷ್ಟೆ ಹಾಗೂ ಮಾಡಿದ ಸಾಧನೆಯನ್ನು ಗುರುತಿಸಿ ಲಕ್ಷ್ಮೀ ಬಳೆಯನ್ನು ಪ್ರಧಾನ ಮಾಡಲಾಗಿದೆ. ಹಲವಾರು ವರ್ಷಗಳಿಂದ ಕಾಕಂಜೆ ಕ್ಷೇತ್ರದಲ್ಲಿ ರಕ್ತೇಶ್ವರಿ ಭೂತವನ್ನು ಕಟ್ಟಿ ಭಕ್ತರ ಮನಸಿನಲ್ಲಿ ಉತ್ತಮವಾದ ಅಭಿಪ್ರಾಯ ಹಾಗೂ ಗೌರವವನ್ನು ಗಳಿಸಿರುತ್ತಾರೆ. ಇಂತಹ ಕಲಾವಿದರಿಂದಲೇ ನಂಬಿಕೆ ವಿಶ್ವಾಸಗಳಿಗೆ, ಆರಾಧನೆಗಳಿಗೆ ತೊಂದರೆ ಇಲ್ಲದೆ ಮುಂದುವರಿಯುತ್ತಿರುವುದು.
ರಾಧಾಕೃಷ್ಣ ಭಟ್ ಖಂಡಿಗೆ