ಬೆಂಗಳೂರು: ಸಮ್ಮಿಶ್ರ ಸರ್ಕಾರದ ಭವಿಷ್ಯ ಅತಂತ್ರವಾಗಿರುವ ಬೆನ್ನಲ್ಲೇ ತೆರೆ ಮರೆಯಲ್ಲಿ ಸಂಪುಟ ವಿಸ್ತರಣೆಯ ಕಸರತ್ತು ನಡೆದಿದೆ. ಸಂಪುಟ ಸೇರುವ ಪ್ರಮುಖ ಆಕಾಂಕ್ಷಿಗಳಾಗಿರುವ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರನ್ನು ಸಂಪುಟದಿಂದ ದೂರ ಇಡುವ ಪ್ರಯತ್ನವೂ ನಡೆದಿದೆ.
ಪಕ್ಷದಲ್ಲಿ ಬಂಡಾಯ ಸಾರಿರುವ ಬೆಳಗಾವಿಯ ಜಾರಕಿಹೊಳಿ ಸಹೋದರರನ್ನು ಪಕ್ಷದಲ್ಲಿ ಹತ್ತಿಕ್ಕಲು ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್ ಅವರನ್ನು ಸಚಿವರನ್ನಾಗಿ ಮಾಡುವ ಕಸರತ್ತು ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ರಯತ್ನವನ್ನು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಾಡುತ್ತಿದ್ದು, ಡಿಸಿಎಂ ಪರಮೇಶ್ವರ್ ಕೂಡ ಸಾಥ್ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈಚೆಗೆ ನಡೆದ ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಂ.ಬಿ. ಪಾಟೀಲ್ ಸಹೋದರ ಸುನೀಲ್ ಪಾಟೀಲ್ ಗೆದ್ದಿ ದ್ದಾರೆ. ಹೀಗಾಗಿ, ಒಂದೇ ಕುಟುಂಬದವರಿಗೆ ಎರಡು ಹುದ್ದೆ ನೀಡಿರುವುದರಿಂದ ಲಿಂಗಾಯತ ಸಮುದಾಯದ ಬೇರೆ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸಿಕೊಡಬೇಕು ಎಂಬ ಲೆಕ್ಕಾಚಾರ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪಂಚಮಾಸ್ತ್ರ: ಈ ನಡುವೆ, ವೀರಶೈವ ಲಿಂಗಾಯತ ಸಮುದಾಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಲಕ್ಷ್ಮೀ ಹೆಬ್ಟಾಳ್ಕರ್‌ಗೆ ಮಂತ್ರಿ ಸ್ಥಾನ ನೀಡಿದರೆ, ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರನ್ನು ಕಟ್ಟಿಹಾಕಿದಂತಾಗುತ್ತದೆ. ಅಲ್ಲದೇ, ಪ್ರಮುಖವಾಗಿ ನಾಯಕ ಸಮುದಾಯದಿಂದ ಆಗುವ ನಷ್ಟವನ್ನು ಪಂಚಮಸಾಲಿ ಸಮುದಾಯಕ್ಕೆ ಆದ್ಯತೆ ನೀಡುವ ಮೂಲಕ ಪಡೆಯಬಹುದು ಎಂಬ ಲೆಕ್ಕಾಚಾರ ನಡೆದಿದೆ ಎನ್ನಲಾಗುತ್ತಿದೆ.
ಲಿಂಗಾಯತರಲ್ಲಿಯೇ ಸುಮಾರು 60 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮುದಾಯ ಸುಮಾರು 35 ರಿಂದ 40 ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವಷ್ಟು ಪ್ರಬಲವಾಗಿದೆ. ಇದರಿಂದ ರಾಜಕೀಯವಾಗಿಯೂ ಕಾಂಗ್ರೆಸ್‌ಗೆ ಲಾಭವಿದೆ ಎಂಬ ಲೆಕ್ಕಾಚಾರ ನಡೆದಿದೆ. ತಮ್ಮ ವಿರುದ್ಧ ನಡೆಯುತ್ತಿರುವ ಬೆಳವಣಿಗೆಗಳನ್ನು ಅರಿತಿರುವ ಜಾರಕಿಹೊಳಿ ಸಹೋದರರು ಎಂ.ಬಿ. ಪಾಟೀಲರನ್ನು ಸಚಿವರನ್ನಾಗಿ ಮಾಡಬೇಕೆಂದು ಒತ್ತಡ ಹೇರಲು ಆರಂಭಿಸಿದ್ದಾರೆ ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಅನ್ನು ತಮ್ಮ ಜಿಲ್ಲೆಯ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡದಂತೆ ಪಟ್ಟು ಹಿಡಿದಿದ್ದ ಜಾರಕಿಹೊಳಿ ಸಹೋದರರು ಎಂ.ಬಿ. ಪಾಟೀಲರಿಗೆ ಮಂತ್ರಿ ಸ್ಥಾನ ಕೊಡಬೇಕೆಂಬ ಬೇಡಿಕೆ ಇಡುವ ಮೂಲಕ ಪಕ್ಷದ ನಾಯಕರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸಿದ್ದಾರೆ.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯಾವ ಸಮುದಾಯವನ್ನು ಮತ್ತು ಯಾರನ್ನು ಮಂತ್ರಿ ಮಾಡಬೇಕು ಎನ್ನವ ಬಗ್ಗೆ ಚಿಂತನೆ ನಡೆಸಿದ್ದೇವೆ. ಆ ಬಗ್ಗೆ ಚರ್ಚೆ ನಡೆಸಿದ್ದೇವೆ. ಸಿದ್ದರಾಮಯ್ಯ ಅವರು ವಿದೇಶದಿಂದ ವಾಪಸ್ ಆದ ಬಳಿಕ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತೇವೆ.
– ಜಿ. ಪರಮೇಶ್ವರ್, ಉಪಮುಖ್ಯಮಂತ್ರಿ