ಲಕ್ಷ್ಮೇಶ್ವರ: ಬೆಂಗಳೂರಿನ ಇನ್ಫೋಸಿಸ್ ಪ್ರತಿಷ್ಠಾನದಿಂದ ನಡೆಸುತ್ತಿರುವ ಪುಲಿಗೆರೆ ಉತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಕರ್ನಾಟಕ ಚಿತ್ರಕಲಾ ಶಿಬಿರದಲ್ಲಿ ಬಿಡಿಸಲಾದ ವಿವಿಧ ಕಲಾಚಿತ್ರಗಳನ್ನು ಪ್ರದರ್ಶಿಸಲಾಯಿತು.
ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಭಾರತೀಯ ವಿದ್ಯಾಭವನದ ಸಹಯೋದಲ್ಲಿ ಆಯೋಜಿಸಲಾಗಿದ್ದ ಲಕ್ಷ್ಮೇಶ್ವರ ದೃಶ್ಯ ವಲ್ಲರಿ ಚಿತ್ರಕಲಾ ಶಿಬಿರವನ್ನು ಸಮಿತಿ ಅಧ್ಯಕ್ಷ ಶಿವಾನಂದ ನೆಲವಿಗಿ ಚಾಲನೆ ನೀಡಿದ್ದರು. ಚಿತ್ರಕಲಾ ಶಿಬಿರದಲ್ಲಿ ಪಾಲ್ಗೊಂಡ ವಿವಿಧ ಜಿಲ್ಲೆಗಳ ಹತ್ತಾರು ಕಲಾವಿದರು ನಾಲ್ಕು ದಿನಗಳ ಕಾಲ ಲಕ್ಷ್ಮೇಶ್ವರದಲ್ಲಿರುವ ಪ್ರಾಚೀನ ದೇವಸ್ಥಾನ, ಸ್ಮಾರಕಗಳ ಚಿತ್ರ ಬಿಡಿಸಿದ ಚಿತ್ರಗಳನ್ನು ಸೋಮೇಶ್ವರ ದೇವಸ್ಥಾನದಲ್ಲಿ ಪ್ರದರ್ಶಿಸಲಾಯಿತು.
ಕಲಾವಿದರು ಲಕ್ಷ್ಮೇಶ್ವರದ ಸೋಮೇಶ್ವರ, ಗೊಲ್ಲಾಳೇಶ್ವರ, ಲಕ್ಷ್ಮೀಲಿಂಗನ ದೇವಸ್ಥಾನ, ಬಸದಿ, ಮಸೀದಿಗಳ ಚಿತ್ರಗಳನ್ನು ಕಲಾವಿದರು ಅತ್ಯಾಕರ್ಷಕವಾಗಿ ಬಿಡಿಸಿದ್ದಾರೆ. ಕಲಾ ಶಿಬಿರದಲ್ಲಿ ಭಾಗವಹಿಸಿದ್ದ ಧಾರವಾಡದ ಎಫ್.ವಿ. ಚಿಕ್ಕಮಠ, ಹಾಸನದ ಎಚ್‌ಎಸ್. ಮಂಜುನಾಥ, ಬೆಂಗಳೂರಿನ ವಿಕಲಾಂಗ ಕಲಾವಿದೆ ಅನುಜೈನ್, ಇನ್ನೊರ್ವ ವಿಕಲಾಂಗ ಕಲಾವಿದ ಕಿರಣ ಶೇರ್ ಖಾನೆ, ತುಮಕೂರಿನ ಭಾನು ಮುನಾಫ್, ಗದುಗಿನ ಅಮೃತಪ್ಪ ಮೊರಬಾದ್ ಹಾಗೂ ಮಹಾಂತೇಶ ಬೆಳ್ಳಿ, ಹೊಸಪೇಟೆಯ ಕೆಂಚಪ್ಪ ಬಡಿಗೇರ, ಶಿಗ್ಗಾವಿಯ ಸುರೇಶ ಅರ್ಕಸಾಲಿ ಹಾಗೂ ಪಟ್ಟಣದ ಯುವ ಕಲಾವಿದ ಪ್ರವೀಣ ಗಾಯಕರ ಸೇರಿದಂತೆ ಒಟ್ಟು 10ಕಲಾವಿದರಿಗೆ ಅಕಾಡೆಮಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ವಿದ್ಯಾಭವನದ ವಿಶೇಷಾಧಿಕಾರಿ ಸಿ.ಎನ್.ಅಶೋಕಕುಮಾರ, ನಮ್ಮ ಸಾಂಸ್ಕೃತಿಕ ಲೋಕದ ಗತ ವೈಭವವನ್ನು ಭವಿಷ್ಯದ ದಿನಗಳಿಗೆ ಪರಿಚಯಿಸುವ ಮಹತ್ತರ ಕಾರ್ಯ ಕಲಾವಿದರದ್ದಾಗಿದೆ. ಅವರ ಕಲಾ ಪ್ರತಿಭೆ ಪ್ರೋತ್ಸಾಹಿಸುವ ಲಲಿತ ಕಲಾ ಅಕಾಡೆಮಿ ಕಾರ್ಯಕ್ಕೆ ಭಾರತೀಯ ವಿದ್ಯಾಭವನ ಕೈ ಜೋಡಿಸುತ್ತಿದೆ. ನಾಡಿನ ಅನೇಕ ಕಲಾವಿದರಿಂದ ಇಲ್ಲಿನ ಶಿಲ್ಪಕಲೆಗಳ ಕುರಿತ ಚಿತ್ರ ಬರೆಸುವ ಮೂಲಕ ಎಲ್ಲ ಚಿತ್ರಗಳನ್ನು ಭಾರತೀಯ ವಿದ್ಯಾಭವನ ಅತ್ಯಂತ ವ್ಯವಸ್ಥಿತವಾಗಿ ಸಂರಕ್ಷಿಸಿ ಪ್ರದರ್ಶಿಸಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು. ಸೋಮೇಶ್ವರ ಭಕ್ತರ ಸೇವಾ ಕಮಿಟಿಯ ಶಿವಣ್ಣ ನೆಲವಗಿ ಹಾಗೂ ಸದಸ್ಯರು, ಪ್ರವೀಣ ಗಾಯಕರ, ಭಾನು ಮುನಾಫ್, ಅಮೃತಪ್ಪ ಮೊರಬಾದ್, ಮಹಾಂತೇಶ ಬೆಳ್ಳಿ, ಕೆಂಚಪ್ಪ ಬಡಿಗೇರ, ಸುರೇಶ ಅರ್ಕಸಾಲಿ ಇದ್ದರು.