ಲಕ್ಷ್ಮೇಶ್ವರ: ಕೋವಿಡ್ 19 ವೈರಸ್ ಹರಡದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತಾಲೂಕಾಡಳಿತ ಕಟ್ಟಿನಿಟ್ಟಿನ ಕ್ರಮಕೈಗೊಳ್ಳುತ್ತಿದ್ದರೂ ಜನರ ಅಸಹಕಾರ ಮುಂದುವರಿದಿದ್ದು, ಜನಸಂದಣಿ ತಡೆಯಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಶುಕ್ರವಾರ ಮತ್ತೆ ವ್ಯಾಪಾಸ್ಥರ ಸಭೆಕರೆದ ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ಶನಿವಾರದಿಂದ ತಳ್ಳುವ ಗಾಡಿ ಮೂಲಕ ಬೆಳಗ್ಗೆ 6ರಿಂದ 11 ಗಂಟೆವರೆಗೆ ತರಕಾರಿ ವ್ಯಾಪಾರ ಮಾಡಲು ವ್ಯಾಪಾರಸ್ಥರಿಗೆ ಸೂಚಿಸಿದ್ದಾರೆ.
ದಿನಸಿ ಅಂಗಡಿಗಳ ಮುಂದೆ ಹಾಕಿರುವ ಗುರುತಿನಲ್ಲಿ ನಿಂತು ಖರೀದಿಸಬೇಕು. ಈ ವೇಳೆ ಪೊಲೀಸ್ ಮತ್ತು ಪುರಸಭೆ ಸಿಬ್ಬಂದಿ ಹಾಜರಿರಬೇಕು ಎಂದು ಸೂಚಿಸಿದ್ದಾರೆ. ಶನಿವಾರ ಶಿಗ್ಲಿ ಸಂತೆ ಇದ್ದು ಬೆಳಗ್ಗೆ 6ರಿಂದ 8 ಗಂಟೆವರೆಗೆ ಮಾತ್ರ ಸಂತೆ ನಡೆಯಲಿದೆ. ಗ್ರಾಮೀಣ ಪ್ರದೇಶಗಳ ಜನರು ಏ. 14ರವರೆಗೆ ಪಟ್ಟಣಕ್ಕೆ ಆಗಮಿಸಬಾರದು ಎಂದರು.
ಗುಳೆ ಹೋದವರ ಪರೀಕ್ಷೆ: ಬೆಂಗಳೂರು, ಹಾಸನ, ಚಿತ್ರದುರ್ಗ, ತುಮಕೂರ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಶುಕ್ರವಾರ ಆಗಮಿಸಿದ 120 ಜನರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಲಾಯಿತು ಎಂದು ವೈದ್ಯಾಧಿ ಕಾರಿ ಡಾ| ಗಿರೀಶ ಮರಡ್ಡಿ ತಿಳಿಸಿದರು.
ಪಟ್ಟಣದಲ್ಲಿ ಅಲೆಯುತ್ತಿರುವ ಭಿಕ್ಷುಕರಿಗೆ, ನಿರ್ಗತಿಕರಿಗೆ ಪೊಲೀಸ್ ಠಾಣೆ ವತಿಯಿಂದ ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ. ಪುರಸಭೆ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಶುಕ್ರವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೈಪೋಕ್ಲೊರೈಡ್ ದ್ರಾವಣ ಸಿಂಪರಣೆ ಮಾಡಿದರು.