Advertisement

ಆದರ್ಶ ಜೀವನ ನಡೆಸಲು ಸಲಹೆ

10:31 AM Jan 16, 2019 | |

ಲಕ್ಷ್ಮೇಶ್ವರ: ಸಾಮೂಹಿಕ ವಿವಾಹ ಎಂದರೆ ಅದು ಕೇವಲ ಬಡ ಜನರ ಮದುವೆ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು. ಪವಿತ್ರವಾದ ಧಾರ್ಮಿಕ ಕ್ಷೇತ್ರ, ಸಹಸ್ರಾರು ಭಕ್ತರ ಮತ್ತು ಮಠಾಧೀಶರ ಆಶೀರ್ವಾದದೊಂದಿಗೆ ಸಾಮೂಹಿಕ ವಿವಾಹ ಬಂಧನಕ್ಕೊಳಗಾಗುವ ಭಾಗ್ಯ ಜೀವನದ ಸಾರ್ಥಕತೆಯ ಕ್ಷಣವಾಗಿದೆ ಎಂದು ಬಾಲೇಹೊಸೂರಿನ ಶ್ರೀ ಕುಮಾರ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.

Advertisement

ಸಮೀಪದ ಹೂವಿನಶಿಗ್ಲಿ ವಿರಕ್ತಮಠದ ಜಾತ್ರಾಮಹೋತ್ಸವ ಹಾಗೂ ಲಿಂ| ನಿರಂಜನ ಸ್ವಾಮಿಗಳ 9ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಿವಾಹ ಮಹೋತ್ಸವದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ದುಡಿಯದ ದರಿದ್ರ, ರೋಗಿ, ವೈರಾಗಿ, ಚಟಗಾರ ಈ ನಾಲ್ವರನ್ನು ಸಂಸಾರಿಕ ಜೀವನದಿಂದ ದೂರ ಇಡಬೇಕು. ವಿವಾಹ ಬಂಧನವೆಂದರೆ ಎರಡು ಮನಸ್ಸು, ಜೀವಗಳು ಒಂದಾಗಿ ಪರಸ್ಪರರು ಹಾಲುಜೇನಿನಂತೆ ಅನ್ಯೋನ್ಯತೆಯಿಂದ ಜೀವನ ಸಾಗಿಸುವ ಪವಿತ್ರ ಬಂಧವಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳು ಪರಸ್ಪರ ಪ್ರೀತಿ, ವಿಶ್ವಾಸದಿಂದ ತಂದೆ-ತಾಯಿ, ಅತ್ತೆ-ಮಾವ, ಗುರು ಹಿರಿಯರಲ್ಲಿ ವಿಧೇಯತೆ, ತಾಳ್ಮೆಯಿಂದ ಆದರ್ಶಮಯ ಜೀವನಕ್ಕೆ ಅಣಿಯಾಗಬೇಕು. ಸಂಸಾರದ ಗುಟ್ಟು ಬಿಟ್ಟು ಕೊಡದೇ ಪ್ರೀತಿ ತುಂಬಿದ ಸಂಸಾರದ ಜೋಡೆತ್ತಿನ ಬಂಡಿ ಸರಾಗವಾಗಿ ಸಾಗಿದಾಗ ಮಾತ್ರ ಆ ಮನೆ ಸ್ವರ್ಗವಾಗುತ್ತದೆ. ಸಂಪ್ರದಾಯ, ಸಂಸ್ಕೃತಿ, ಧರ್ಮ ಮಾರ್ಗ ಮತ್ತು ಮಠಮಾನ್ಯಗಳ ಸತ್ಸಂಗದೊಂದಿಗೆ ಸಾತ್ವಿಕ ಜೀವನಕ್ಕೆ ಒಗ್ಗಿಕೊಳ್ಳಬೇಕು ಎಂದರು.

ನೇತೃತ್ವವಹಿಸಿದ್ದ ಹುಬ್ಬಳ್ಳಿ ರುದ್ರಾಕ್ಷಿಮಠ ಮತ್ತು ನವಲಗುಂದ ಗವಿಮಠದ ಬಸವಲಿಂಗ ಸ್ವಾಮಿಗಳು, ಸದಾಶಿವಪೇಟೆಯ ಗದಿಗೇಶ್ವರ ಸ್ವಾಮಿಗಳು ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮಿಗಳು ಮಾತನಾಡಿ, ಸಾಮೂಹಿಕ ವಿವಾಹಗಳಿಂದ ಬಡವರು ಮತ್ತು ಅಸಹಾಯಕರಿಗೆ ಆರ್ಥಿಕ ಹೊರೆ ತಪ್ಪಿಸಿದಂತಾಗುತ್ತದೆ. ಅನಾವಶ್ಯಕ ದುಂದು ವೆಚ್ಚ, ಆಡಂಬರ, ವರದಕ್ಷಣೆ ತಡೆದು ಸಾಮೂಹಿಕ ವಿವಾಹದ ಮಹತ್ವ ಸಾರುವ ಉದ್ದೇಶ ಶ್ರೀಮಠದ್ದಾಗಿದೆ. ಲಿಂ| ನಿರಂಜನ ಶ್ರೀಗಳು ಹಾಕಿಕೊಟ್ಟ ಧರ್ಮ ಮಾರ್ಗದಲ್ಲಿ ಭಕ್ತರ ಸಹಕಾರದಿಂದ ಸಮಾಜಮುಖೀ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಹೇಳಿದರು.

ಒಂಬತ್ತು ಜೋಡಿಗಳು ವಿವಾಹ ಬಂಧನಕ್ಕೊಳಗಾದರು. ಸದಾನಂದ ಶಾಸ್ತ್ರಿಗಳು ಮತ್ತು ಮಹದೇವಪ್ಪ ಬಿಷ್ಟಣ್ಣವರ, ಪಿ.ಎಚ್. ಪಾಟೀಲ ನಿರ್ವಹಿಸಿದರು. ಸಂಜೆ 4ಕ್ಕೆ ಗುರುಕುಲ ಶಾಲಾ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ, ಸಂಜೆ 5ಕ್ಕೆ ವಿಜೃಂಭಣೆಯ ಕಡುಬಿನ ಕಾಳಗ, ಬಳಿಕ ಮಹಾತ್ಮರ ಬದುಕು-ಬೆಳಕು ಚಿಂತನಗೋಷ್ಠಿಯ ಧರ್ಮಸಭೆ ಹೊಸರಿತ್ತಿಯ ಗುದ್ಧಲೀಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿತು. ವಿವಿಧ ಮಠಾಧೀಶರು, ಗ್ರಾಮದ ಹಿರಿಯರು, ಜನಪ್ರತಿನಿಧಿಗಳು ಹಾಗೂ ಸದ್ಬಕ್ತಮಂಡಳಿಯವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next