Advertisement

ಗ್ರಾಹಕರಿಗೆ ಮೋಸವಾದರೆ ದೂರು ನೀಡಿ

11:29 AM Mar 16, 2019 | |

ಲಕ್ಷ್ಮೇಶ್ವರ: ಗ್ರಾಹಕರು ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುವಿನ ಗುಣಮಟ್ಟ, ದರದಲ್ಲಿ ಆಗುವ ನಷ್ಟ, ಅನ್ಯಾಯ, ಮೋಸ, ವಂಚನೆಗಳನ್ನು ತಪ್ಪಿಸುವಲ್ಲಿ ಜಾಗೃತಿ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಆಗಿರುವ ಮೋಸಕ್ಕೆ ನ್ಯಾಯ ದೊರಕಿಸುವ ಮತ್ತು ಕಾನೂನಿನ ಅರಿವು ಮೂಡಿಸುವುದು ಗ್ರಾಹಕರ ದಿನಾಚರಣೆ ಉದ್ದೇಶವಾಗಿದೆ ಎಂದು ದಿವಾಣಿ ನ್ಯಾಯಾಧೀಶರಾದ ಎಚ್‌.ಐ. ಯಾದವಾಡ ಹೇಳಿದರು. ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಹಕರ ಹಕ್ಕುಗಳ ದಿನದ ಅಂಗವಾಗಿ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಗ್ರಾಹಕರಿಗಾಗಿ ಕಾನೂನು ಜಾರಿಗೆ ತಂದಿದ್ದು, ನ್ಯಾಯಾಲಯದ ಮೂಲಕ ಗ್ರಾಹಕರ ಹಕ್ಕುಗಳ ವೇದಿಕೆಗೆ ದೂರು ಸಲ್ಲಿಸಿದರೆ ಗ್ರಾಹಕರು ತಮಗಾದ ನಷ್ಟವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಉಪನ್ಯಾಸ ನೀಡಿದ ನ್ಯಾಯವಾದಿ ಮಹೇಶ ಹಾರೋಗೇರಿ, ಗ್ರಾಹಕರು ವಸ್ತುಗಳ ಖರೀದಿ ಬಳಿಕ ಪಾವತಿ ಪಡೆದುಕೊಳ್ಳುವುದು ಅವಶ್ಯ. ಇದರಿಂದ ವಸ್ತುಗಳಿಂದ ನಷ್ಟ ಉಂಟಾದ ಸಮಯದಲ್ಲಿ ಗ್ರಾಹಕರ ವೇದಿಕೆಗೆ ಅರ್ಜಿ ಸಲ್ಲಿಸಲು ಬೇಕಾಗುತ್ತದೆ. ಗ್ರಾಹಕರ ಕಾನೂನಿನ ಬಗ್ಗೆ ಸಾಮಾನ್ಯ ತಿಳಿವಳಿಕೆ ಹೊಂದಿ ಆಗುವ ಅನ್ಯಾಯ, ಮೋಸ ತಡೆಗಟ್ಟಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ವಿ.ಎಲ್‌ .ಪೂಜಾರ ವಹಿಸಿದ್ದರು. ಸಿಡಿಪಿಒ ಅವಿನಾಶ ಗೋಟಕಿಂಡಿ, ವಿಠ್ಠಲ್‌ ನಾಯಕ್‌, ಪುರಸಭೆಯ ಎಂ.ಎಸ್‌. ಬೆಂತೂರ, ಪಿಎಸ್‌ಐ ವಿಶ್ವನಾಥ ಚೌಗಲೆ ಹಾಗೂ ನ್ಯಾಯವಾದಿಗಳು ಇದ್ದರು. ನ್ಯಾಯವಾದಿ ವಿ.ಎಸ್‌. ಪಶುಪತಿಹಾಳ ಸ್ವಾಗತಿಸಿ, ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next