Advertisement

ತಾಪಮಾನ ಹೆಚ್ಚಳ: ಹುಲ್ಲು-ನೀರಿಗಾಗಿ ಬಾಯ್ಬಿಡುವ ಸ್ಥಿತಿ

05:10 PM May 30, 2019 | Naveen |

ಲಕ್ಷ್ಮೇಶ್ವರ: ಬೇಸಿಗೆ ಕಾಲ ಮುಗಿದು ಮಳೆಗಾಲ ಪ್ರಾರಂಭವಾಗಿದ್ದರೂ ಸಹ ಇದುವರೆಗೂ ಮಳೆಯಾಗದ್ದರಿಂದ ತಾಪಮಾನ ಒಂದಿಷ್ಟೂ ಕಡಿಮೆಯಾಗದಿರುವುದು ಆತಂಕಕಾರಿ ಸಂಗತಿಯಾಗಿದೆ. ಸತತ ಬರಗಾಲದಿಂದ ತಾಲೂಕಿನಲ್ಲಿನ ಕೆರೆ, ಹಳ್ಳಗಳು ಸಂಪೂರ್ಣ ಬತ್ತಿದ್ದು ಬೋರ್‌ವೆಲ್ಗಳ ಅಂತರ್ಜಲಮಟ್ಟ ಪಾತಾಳ ಕಂಡಿದೆ. ಇದರಿಂದ ಇದೀಗ ಮುಂಗಾರಿನ ಕೃಷಿ ಚಟುವಟಿಕೆ ಹಿನ್ನಡೆಯಾಗಿದ್ದರೆ ಜಾನುವಾರು, ಕುರಿ-ಮೇಕೆಗಳು, ಪ್ರಾಣಿ-ಪಕ್ಷಿ ಸಂಕುಲಗಳು ಹಸಿರು ಹುಲ್ಲು ಮತ್ತು ನೀರಿಗಾಗಿ ಬಾಯಿ ಬಿಡುವ ಪರಿಸ್ಥಿತಿ ತಲೆದೋರಿದೆ.

Advertisement

ಹಸಿ ಹುಲ್ಲಿನ ಬರ: ಗ್ರಾಮೀಣ ಪ್ರದೇಶಗಳಲ್ಲಿ ರೈತರು ಕೃಷಿಯೊಂದಿಗೆ ಜಾನುವಾರುಗಳ ಸಾಕಾಣಿಕೆ ಮಾಡುತ್ತಾರೆ. ಹೈನುಗಾರಿಕೆಯಿಂದ ಬರುವ ಸಣ್ಣ ಆದಾಯವೇ ಕುಟುಂಬ ನಿರ್ವಹಣೆಗೆ ಸಣ್ಣ ಆದಾಯವಾಗಿರುತ್ತದೆ. ಈ ರೀತಿ ಜೋಪಾನ ಮಾಡಿದ ಹಸು-ಎಮ್ಮೆಗಳನ್ನು ನಿತ್ಯವೂ ಊರ ಹೊರವಲಯದ ಬದುವು-ಗೋಮಾಳ, ರಸ್ತೆಯ ಬದಿ, ಗುಡ್ಡ ಮತ್ತು ಸಾಗುವಳಿಯಾಗದ ಪ್ರದೇಶದಲ್ಲಿ ಮೇಯಿಸುತ್ತಾರೆ. ಕೆರೆ, ಹಳ್ಳ-ಕೊಳ್ಳ ಮತ್ತು ತೋಟದ ತೊಟ್ಟೆಯಲ್ಲಿ ಬಿಟ್ಟಿರುವ ನೀರನ್ನು ಕುಡಿಸಿಕೊಂಡು ಮನೆಗೆ ಬರುವುದು ಕಾಯಕ. ಇದರಿಂದ ಜಾನುವಾರುಗಳು ಆರೋಗ್ಯವಾಗಿದ್ದು ಹೈನುಗಾರಿಕೆಗೆ ಸಹಕರಿಸುತ್ತವೆ. ಆದರೆ ಇದೀಗ ಜಾನುವಾರುಗಳಿಗೆ ಹಸಿ ಮೇವು, ಹುಲ್ಲಿನ ಕೊರತೆಯಿಂದ ಹೈನುಗಾರಿಕೆಯಲ್ಲಿ ಕುಂಠಿತವಾಗಿದ್ದು ಜಾನುವಾರುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿವೆ ಎಂಬುದು ವಾಸ್ತವ. ಆದರೆ ಸತತ ಬರಗಾಲದಿಂದ ಭೂಮಿ ಬರಡಾಗಿದ್ದು ಎಲ್ಲೂ ದನಕರುಗಳಿಗೆ ಮೇಯಲು ಹಸಿರಲ್ಲ, ಮೇಯಲು ಬರುವ ದನಕರುಗಳು ರಸ್ತೆ ಬದಿ ಇರುವ ಮುಳ್ಳು ಕಂಟಿಗಳ ಒಣ ಎಲೆಗಳನ್ನು, ಹೊಲಕ್ಕೆ ಹಾಕಿರುವ ತಿಪ್ಪೆ ಗೊಬ್ಬರದಲ್ಲಿನ ಒಣ ದಂಟುಗಳನ್ನು, ಬೇವಿನ ಗಿಡದ ಎಲೆಗಳನ್ನು ತಿನ್ನುತ್ತವೆ. ಆದರೆ ಕುಡಿಯಲು ಎಲ್ಲೂ ಹನಿ ನೀರು ಇಲ್ಲದಂತಾಗಿದೆ. ನೆತ್ತಿ ಸುಡುವ ಬಿಸಿಲಿಂದ ಮನುಷ್ಯ ಹೇಗೂ ತನ್ನ ನೀರಿನ ದಾಹವನ್ನು ತಣಿಸಿಕೊಳ್ಳುತ್ತಾನೆ. ಆದರೆ ಪ್ರಾಣಿಗಳ ಗೋಳು ಅರಣ್ಯ ರೋದನವಾಗಿದೆ. ಬಿಸಿಲನ್ನು ಲೆಕ್ಕಿಸದೇ ಹತ್ತಾರು ಹರದಾರಿ ದನಕರುಗಳನ್ನು ಸುತ್ತಾಡಿಸಿಕೊಂಡು ಮನೆಗೆ ಬಂದು ನೀರು-ಮೇವು ಹಾಕಿ ನೀರು ಕುಡಿಸಿ ಜೋಪಾನ ಮಾಡುವಲ್ಲಿ ರೈತ ಹೆಣಗಾಡುತ್ತಿದ್ದಾರೆ. ನಿತ್ಯ 39 ರಿಂದ 40 ಡಿಗ್ರಿ ಸೆಲ್ಸಿಯಸ್‌ ಪ್ರಮಾಣದ ಬಿಸಿಲು ಜಾನುವಾರು ಮತ್ತು ರಕ್ಷಕರನ್ನು ಹೈರಾಣಾಗಿಸಿದ್ದು ಮರಗಳ ನೆರಳಿಗೆ ಮೊರೆ ಹೋಗುವುದು ಮಳೆಗಾಲ ಬಂದರೂ ತಪ್ಪದಂತಾಗಿದೆ. ಲಕ್ಷ್ಮೇಶ್ವರ ಸೇರಿ ತಾಲೂಕಿನ ದೊಡ್ಡೂರ, ಸೂರಣಗಿ, ಯಲ್ಲಾಪುರ, ಬಾಲೇಹೊಸೂರ, ಆದ್ರಳ್ಳಿ, ಬಟ್ಟೂರ, ಬಡ್ನಿ, ಅಮರಾಪುರ, ಅಡರಕಟ್ಟಿ, ಗೊಜನೂರ, ಯಳವತ್ತಿ, ಮಾಡಳ್ಳಿ ಭಾಗದ ರೈತ ಕುಟುಂಬಗಳು ಜಾನುವಾರು ಸಾಕಾಣಿಕೆಯನ್ನು ಜೀವನಾಧಾರವಾಗಿಸಿಕೊಂಡಿದ್ದಾರೆ. ಕುರಿಗಾರರು ಕುರಿ ಸಾಕಾಣಿಕೆಯನ್ನೇ ಜೀವನಾಧಾರವಾಗಿಸಿಕೊಂಡಿದ್ದು ಅವರ ಬದುಕೀಗ ದಿಕ್ಕುತೋಚದಂತಾಗಿದೆ. ಪ್ರತಿವರ್ಷ ಬೇಸಿಗೆ ದಿನಗಳಲ್ಲಿ ಮಹಾರಾಷ್ಟ್ರ, ಸೊಲ್ಲಾಪುರ, ಬಿಜಾಪುರ, ಬಳ್ಳಾರಿಗಳಿಂದ ಇಲ್ಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಬಂದು ಕುರಿಸಾಕಾಣಿಕೆಯ ಜೊತೆಗೆ ಜೀವನೋಪಾಯ ಮಾಡುವ ಕುರಿಗಾರರು ಈ ವರ್ಷ ಸಂಕಷ್ಟ ಅನುಭವಿಸುತ್ತಿದ್ದಾರೆ. ಎಲ್ಲದಕ್ಕೂ ಮಳೆರಾಯನ ಕೃಪೆಯೊಂದೆ ಪರಿಹಾರವಾಗಿದೆ ಎಂಬುದು ಸ್ಪಷ್ಟ. ಈ ಕುರಿತು ದನಗಾಯಿ ಖಾನಪ್ಪ ಲಮಾಣಿ ಎಂಬ ಹಿರಿಯಜ್ಜ, ನಮಗ ಬುದ್ದಿ ಬಂದಾಗಿಂದ ಇಂತಾ ಬರಗಾಲ ನೋಡಿಲ್ಲ ಬಿಡ್ರಿ, ದನಕರಕ ಕೂಳು ನೀರು ಕಾಣದಂತಾ ಪರಿಸ್ಥಿತಿ ಬಂದಿಲ್ರಿಲ್ಲ, ಬಿಸ್ಲಿಗೆ ಹೆದ್ರಿ ದನಕರ ಮೇಸಾಕ ಹೊರಗ ಹೊಡಕೊಂಡ ಬರಾಕ್‌ ಹೆದರಕೀ ಬರಾಕತೈತಿ. ನೀರಿಗಾಗಿ ದನಕರ ಬಾಯಿ ಬಾಯಿ ಬಿಡತಾವ್ರೀ ಯಪ್ಪಾ ಮಳಿದೇವ ಲಗೋನ ಕಣ್ಣ ಬಿಡಲಿಲ್ಲಂದ್ರ ನಾವ್‌ ಬದಕೋದ ಕಷ್ಟೈತ್ರೀ ಎಂದು ಅಸಹಾಯಕತೆಯಿಂದ ನುಡಿಯುತ್ತಾನೆ.

Advertisement

Udayavani is now on Telegram. Click here to join our channel and stay updated with the latest news.

Next