ಲಕ್ಷ್ಮೇಶ್ವರ: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಬೆಂಬಲ ಬೆಲೆ ಕಡಲೆ ಖರೀದಿ ಪ್ರಕ್ರಿಯೆಯನ್ನು ಏ. 6ರಿಂದ ಮತ್ತೆ ಪ್ರಾರಂಭಿಸುವಂತೆ ಸರ್ಕಾರ ಆದೇಶಿಸಿ 4 ದಿನ ಕಳೆದರೂ ಇದುವರೆಗೂ ತಾಲೂಕಿನ ಯಾವುದೇ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ರೈತ ಸಮುದಾಯದ ಒಕ್ಕೂರಲಿನ ಆಗ್ರಹದಿಂದ ಕಡಲೆಯನ್ನು 4875 ರೂ. ಬೆಂಬಲ ಬೆಲೆಯಡಿ ಖರೀದಿಸಲು ಮಾರ್ಚ್ 2ನೇ ವಾರದಲ್ಲಿ ಸೂಚಿಸಿತ್ತು. ಈ ಪ್ರಕ್ರಿಯೆ ಪ್ರಾರಂಭವಾಗುವ ಮೊದಲೇ ಕೊರೊನಾ ಎಂಬ ಹೆಮ್ಮಾರಿ ಭೀತಿಯಿಂದ ಸರ್ಕಾರ ಖರೀದಿ ಪ್ರಕ್ರಿಯೆಗೆ ಏ. 5ರವರೆಗೆ ತಾತ್ಕಾಲಿಕ ತಡೆ ನೀಡಿತ್ತು. ಈಗ ಮತ್ತೆ ಏ. 6ರಿಂದ ನೋಂದಣಿಗೆ ಮತ್ತು ಖರೀದಿಗೆ ಆದೇಶಿಸಿದ್ದರೂ ಈ ಆದೇಶ ಪಾಲನೆಯಾಗಿಲ್ಲ.
ಫೆಬ್ರುವರಿಯಲ್ಲೇ ಪೂರ್ಣ ಪ್ರಮಾಣದಲ್ಲಿ ಕಡಲೆ ಒಕ್ಕಲಿ ಮುಗಿದಿದ್ದು, 2 ತಿಂಗಳಿಂದ ಮನೆಯಲ್ಲಿ ಇಲಿ, ಹೆಗ್ಗಣ, ನುಸಿಪೀಡೆ (ಬುರಬುರಿ) ಯಿಂದ ಸಂರಕ್ಷಿಸಲಾಗದೇ ಕಡಲೆ ಹಾಳಾಗುತ್ತದೆಯೋ, ಇದೇ ಕಾರಣದಿಂದ ಕಡಲೆ ಖರೀದಿಸಲು ಹಿಂದೇಟು ಹಾಕುತ್ತಾರೋ ಎಂಬ ಆತಂಕದಲ್ಲಿ ರೈತರು ಕಾಲ ಕಳೆಯುತ್ತಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಕಡಲೆ ಬೆಲೆ ಕೇವಲ 3500 ರಿಂದ 3800 ರೂ. ಇದೆ. 15 ದಿನಗಳಿಂದ ಎಪಿಎಂಸಿಯಲ್ಲಿ ಖರೀದಿ ಪ್ರಕ್ರಿಯೇ ಸ್ಥಗಿತಗೊಳಿಸಲಾಗಿದೆ. ಮಾರಾಟ ಮಾಹಾ ಮಂಡಳದವರು ನಿಗದಿಪಡಿಸಿದ ಖರೀದಿ ಕೇಂದ್ರದವರನ್ನು ಕೇಳಿದರೆ ನಮಗೆ ಖಾಲಿ ಚೀಲ ಬಂದಿಲ್ಲ, ಈಗ ಪಡಿತರ ವಿತರಿಸುತ್ತಿದ್ದೇವೆ ಅದು ಮುಗಿದ ಮೇಲೆ ಪ್ರಾರಂಭಿಸುತ್ತೇವೆ. ಸಿದ್ಧತೆ ಮಾಡಿಕೊಳ್ಳಬೇಕು, ಸ್ಥಳಾವಕಾಶದ ಕೊರತೆ ಇದೆ, ಇನ್ನಷ್ಟು ದಿನ ಕಾಯಬೇಕು, ದಿನಕ್ಕೆ ಇಷ್ಟೇ ರೈತರ ಕಡಲೆ ಖರೀದಿಸುತ್ತೇವೆ ಎಂದು ದಿನ ದೂಡುತ್ತಿದ್ದಾರೆಯೇ ಹೊರತು ಖರೀದಿ ಪ್ರಕ್ರಿಯೆ ನಡೆಯದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಸ್ಥಗಿತಗೊಂಡಿದ್ದ ಕಡಲೆ ಖರೀದಿ ಪ್ರಕ್ರಿಯೆಯನ್ನು ಸರ್ಕಾರದ ಆದೇಶದಂತೆ ಏ. 6ರಿಂದ ಮತ್ತೇ ಪ್ರಾರಂಭಿಸಲು ಆದೇಶಿಸಲಾಗಿದೆ. ಈ ಆದೇಶ ಪಾಲಿಸದಿರುವ
ಕೇಂದ್ರದವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಕೂಡಲೇ ಪ್ರಾರಂಭಿಸುವಂತೆ ಕ್ರಮ ಕೈಗೊಳ್ಳಲಾಗುವುದು.
ಡಿ.ಬಿ. ಡೊಕ್ಕಣ್ಣವರ,
ಜಿಲ್ಲಾ ಮಾರಾಟ ಮಾಹಾ ಮಂಡಳದ ವ್ಯವಸ್ಥಾಪಕ