Advertisement

Udupi; ಯಕ್ಷರಂಗಕ್ಕೆ ಜೀವ ತುಂಬುವ ಮಟ್ಟು ಲಕ್ಷ್ಮಣ ಶೆಟ್ಟಿಗಾರರ ಕೈಮಗ್ಗದ ಸೀರೆ

05:12 PM May 24, 2024 | Team Udayavani |

ಕಟಪಾಡಿ: ಮಟ್ಟು ಲಕ್ಷ್ಮಣ ಶೆಟ್ಟಿಗಾರ್ ಕೈಮಗ್ಗದಲ್ಲಿ ಪಡಿಮೂಡಿದ ವರ್ಣ ರಂಜಿತ, ಅಚ್ಚುಕಟ್ಟಾದ ಉಡುಪಿ ಸೀರೆ ಬಡಗು ತಿಟ್ಟಿನ ವೇಷಧಾರಿಗಳನ್ನು ಯಕ್ಷರಂಗದಲ್ಲಿ ಮಿಂಚುವಂತೆ ಮಾಡುತ್ತಿದೆ.

Advertisement

ನಿರಂತರ ಆರೂವರೆ ದಶಕಗಳಿಗೂ ಹೆಚ್ಚಿನ ಕಾಲ ಕೈ ಮಗ್ಗದಲ್ಲಿ ಪರಿಣಿತಿ ಹೊಂದಿರುವ ಲಕ್ಷ್ಮಣ ಶೆಟ್ಟಿಗಾರ್ ಅವರು ತನ್ನ 82ರ ಇಳಿವಯಸ್ಸಿನಲ್ಲಿಯೂ ಪತ್ನಿ ಸಾವಿತ್ರಿ ಶೆಟ್ಟಿಗಾರ್ ಅವರ ಆರೈಕೆ, ಸಹಕಾರದಿಂದ ಯುವ ಜನಾಂಗ ನಾಚುವಂತೆ ಹಸನ್ಮುಖಿಯಾಗಿ ಅತ್ಯಂತ ಉತ್ಸಾಹದಿಂದ ಕೈಮಗ್ಗದ ಮೂಲಕ ಗಂಜಿಯುಳ್ಳ ಸೀರೆ ನೇಯ್ದು ಸಿದ್ಧಪಡಿಸುವಲ್ಲಿ ಮಿಂಚುತ್ತಿದ್ದಾರೆ.

ಅವರ ಕೈಯಿಂದ ಸಿದ್ಧಗೊಳ್ಳುತ್ತಿರುವ ಕೈಮಗ್ಗದ ಸೀರೆ ಸುಮಾರು ಎಂಟೂಕಾಲು ಮೀಟರ್ ಉದ್ದವಿದ್ದು, ನೈಪುಣ್ಯತೆಯ ಬಣ್ಣಗಳ ಹೊಂದಾಣಿಕೆಯು ಯಕ್ಷಗಾನದ ವೇಷಧಾರಿಗಳಿಗೆ ಕಷೆ ವಸ್ತ್ರವಾಗಿ ರಂಗು ನೀಡುತ್ತಿದೆ. ಆ ಮೂಲಕ ಪಾತ್ರಧಾರಿಗಳಿಗೆ ಜೀವ ತುಂಬುವ ಮಟ್ಟು ಲಕ್ಷ್ಮಣ ಶೆಟ್ಟಿಗಾರ್ ಅವರ ಈ ಕೈ ಮಗ್ಗದ ಸೀರೆಗೆ ಎಲ್ಲಿಲ್ಲದ ಬೇಡಿಕೆ ಇದೆ. ಉಡುಪಿ ಜಿಲ್ಲೆ ಮತ್ತು ಉತ್ತರ ಕನ್ನಡ ಭಾಗದಲ್ಲಿನ ಹೆಚ್ಚಿನ ಮೇಳಗಳಲ್ಲಿ ಇದೇ ಕೈ ಮಗ್ಗದ ಸೀರೆ ಬಳಕೆಯಾಗುತ್ತಿದೆ.

ಜಿ.ಐ. ಮಾನ್ಯತೆಯ ಉಡುಪಿ ಸೀರೆ: ಜಿ.ಐ. ಟ್ಯಾಗ್ ಮಾನ್ಯತೆಯನ್ನು ಪಡೆದಿರುವ ಉಡುಪಿ ಸೀರೆಯು ಪ್ಯೂರ್ ಕಾಟನ್ ಕೈ ಮಗ್ಗದ ಸೀರೆಯೇ ಆಗಿದ್ದು, ಸಾಮಾನ್ಯ ಸೀರೆ ಐದೂವರೆ ಮೀಟರ್ ಉದ್ದವಾಗಿದೆ. ಆದರೆ ಬಳಕೆಗೆ ತಕ್ಕಂತೆ ಬೇಡಿಕೆಯ ಎಂಟೂ ಕಾಲು ಮೀಟರ್ ಉದ್ದದ ಅಚ್ಚುಕಟ್ಟಾಗಿ ಸಿದ್ಧಪಡಿಸಿದ ಉಡುಪಿ ಸೀರೆಗೆ ಯಕ್ಷರಂಗದಲ್ಲಿ ಬೇಡಿಕೆ ಹೆಚ್ಚಿದೆ. ತನ್ನ ಇಳಿ ವಯಸ್ಸಿನಲ್ಲಿಯೂ ಇಷ್ಟೊಂದು ಉದ್ದದ ಎರಡು ಸೀರೆಗಳನ್ನು ವಾರದಲ್ಲಿ ಕೈಮಗ್ಗದಲ್ಲಿ ನೇಯುತ್ತಿದ್ದೇನೆ ಎಂದು ಅತ್ಯಂತ ಹೆಮ್ಮೆಯಿಂದ ಹೇಳುತ್ತಾರೆ ಮಟ್ಟು ಲಕ್ಷ್ಮಣ ಶೆಟ್ಟಿಗಾರ್ ಅವರು.

Advertisement

ಕೈಮಗ್ಗದಿಂದಲೇ ಸುಮಧುರ ಬದುಕಿನ ಮಗ್ಗುಲಿಗೆ-ಜೀವನದ ಯಶೋಗಾಥೆ: 17ನೇ ವಯಸ್ಸಿನಲ್ಲಿ ಚಿಕ್ಕಮ್ಮ ಗುಲಾಬಿ ಶೆಟ್ಟಿಗಾರ್ತಿ (ಪರ್ಕಳ) ಅವರ ಕೈ ಮಗ್ಗದಲ್ಲಿ ಕಲಿತು ತಾನೂ ಬೆಳೆದು ವಾರಕ್ಕೆ 10 ಸೀರೆಗಳನ್ನು ಸಿದ್ಧಪಡಿಸುತ್ತಾ ಬದುಕಿನ ಬಂಡಿಯನ್ನು ಸಾಗಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿ, ತನ್ನ ಮೂವರು ಪುತ್ರಿಯರು, ಇಬ್ಬರು ಪುತ್ರರನ್ನು ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡುವ ಮಟ್ಟಕ್ಕೆ ಇದೇ ನಾನು ನೇಯ್ದ ಕೈಮಗ್ಗದ ನೇಯ್ಗೆಯ ಸೀರೆಗಳು ನನ್ನನ್ನು ಬೆಳೆಸಿದೆ ಎಂದು ಹೆಮ್ಮೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂದು ಮೂರು ಕೈ ಮಗ್ಗವನ್ನು ಹೊಂದಿದ್ದು, ಇದೀಗ ಕೇವಲ ಒಂದು ಕೈಮಗ್ಗ ಉಳಿದುಕೊಂಡಿದ್ದು ಇಂದಿಗೂ ಕೈ ಮಗ್ಗದಲ್ಲಿ ಕುಳಿತು ನನ್ನ ಜೀವನಕ್ಕೆ ಮತ್ತಷ್ಟು ಉತ್ಸಾಹವನ್ನು ನಾನೇ ತುಂಬಿಕೊಳ್ಳುತ್ತಿದ್ದು, ಆರೋಗ್ಯವಂತನಾಗಿದ್ದೇನೆ ಎಂದು ಸಂತಸವನ್ನು ವ್ಯಕ್ತಪಡಿಸುತ್ತಾರೆ.

ಚರಕದಲ್ಲಿ ನೂಲು ಸಿದ್ಧತೆ: ಆದಿ ಉಡುಪಿಯ ನೇಕಾರರ ಸಂಘದಿಂದ ಖರೀದಿಸಿದ ನೂಲನ್ನು ಸ್ವತಃ ಚರಕದ ಮೂಲಕ ಸಿದ್ಧಪಡಿಸಿ ಕೈಮಗ್ಗದಲ್ಲಿ ಸೂಕ್ತವಾಗಿ ಜೋಡಿಸುವ ಮೂಲಕ ಗಂಜಿಯನ್ನು ಬಳಸಿಯೇ ಸೀರೆಯನ್ನು ಸಿದ್ಧಪಡಿಸುವಲ್ಲಿ ನೇಯಲು ಮುಂದಾಗುವಾಗ ಮತ್ತೆ ಪಡೆದುಕೊಳ್ಳುವ ಯೌವನದ ಉತ್ಸಾಹ ಎಂತವರನ್ನೂ ನಾಚಿಸುವಂತಿದೆ.

ಇಂದಿಗೂ ನನ್ನ ದೇಹ ಕಳೆಗುಂದಿಲ್ಲ. ನಾನು ಸಿದ್ಧಪಡಿಸಿದ ಗಂಜಿ ಅಳವಡಿಸಿ ಸಿದ್ಧ ಪಡಿಸಿದ ಕೈಮಗ್ಗದ ಸೀರೆಗಳು ಯಕ್ಷರಂಗಕ್ಕೆ ಬಳಕೆಯಾಗುವುದು ನನ್ನ ಹೆಮ್ಮೆ. ನಿರಂತರ ಕೈಮಗ್ಗದ ಕಸುಬು ಮೂಲಕ ಇಂದಿಗೂ ಗಟ್ಟಿಮುಟ್ಟಾಗಿ ಆರೋಗ್ಯದಿಂದಿದ್ದೇನೆ. ಶಿವಳ್ಳಿ ನೇಕಾರರ ಸಂಘದ ಸಹಕಾರಕ್ಕೆ ಋಣಿಯಾಗಿದ್ದೇನೆ ಎನ್ನುತ್ತಾರೆ ಮಟ್ಟು ಲಕ್ಷ್ಮಣ ಶೆಟ್ಟಿಗಾರ್.

ಮಗ್ಗದಲ್ಲಿಯೇ ಗಂಜಿ ಹಾಕುವುದು ಉಡುಪಿ ಸೀರೆಯ ವಿಶೇಷತೆಯಾಗಿದೆ. ಸೆರಗಿಗೆ ಕೂಡಾ ಗಂಜಿ ಹಾಕಲಾಗುತ್ತದೆ. ಜಿಐ ಟ್ಯಾಗ್ 224 ಹೊಂದಿದ್ದು, ಉಡುಪಿ ಜಿಲ್ಲೆಯಲ್ಲಿ 12 ಜನ ಕೈ ಮಗ್ಗದ ನೇಯ್ಗೆಗಾರರಿದ್ದು ಯಕ್ಷಗಾನಕ್ಕೆ ಸೀರೆ ಸಿದ್ಧಪಡಿಸುವಲ್ಲಿ ಪರಿಣಿತರಲ್ಲಿ ಮಟ್ಟು ಲಕ್ಷ್ಮಣ ಶೆಟ್ಟಿಗಾರ್ ಒಬ್ಬರು. ವಾತಾವರಣಕ್ಕೆ ಹೊಂದಿಕೆ ಆಗುವಂತೆ ಪ್ಯೂರ್ ಕಾಟನ್ ಆದುದರಿಂದ ಬೇಡಿಕೆ ಹೆಚ್ಚು ಎನ್ನುತ್ತಾರೆ ಆದಿಉಡುಪಿ ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕ ಶಶಿಕಾಂತ್.

ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next