Advertisement
ಪಾಪ, ಶ್ರೀ ದಿನೇಶ್ ಗುಂಡೂರಾಯರಿಗೆ ಕಾಂಗ್ರೆಸ್ಸಿನ ಪೂರ್ವ ಇತಿಹಾಸದ ಬಗ್ಗೆ ಜಾಣ ಮರೆವು ಇದ್ದಿರಬಹುದು. ಈ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಸರ್ವಾಧಿಕಾರದ ಯುಗವನ್ನು ಪ್ರಾರಂಭಿಸಿದ್ದು ಕಾಂಗ್ರೆಸ್ಸಿನ ಅಧಿನಾಯಕಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರೇ ಹೊರತು, ಬೇರೆ ಪಕ್ಷಗಳಿಂದ ಪ್ರಧಾನಿಗಳಾದ ಮೊರಾರ್ಜಿ ಭಾಯಿ ಅಥವಾ ಅಟಲ್‍ಜೀ ಅವರಲ್ಲ.
Related Articles
Advertisement
ಹಿಂದೆ ಲೋಕಸಭಾ ಚುನಾವಣೆಗಳು ನಡೆದಾಗ ಎರಡೆರಡು ಬಾರಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಪ್ರಜಾಪ್ರಭುತ್ವದ ಪಥದಲ್ಲಿಯೇ ಸರ್ಕಾರ ರಚಿಸಿ, ಮೇಕ್ ಇನ್ ಇಂಡಿಯಾ ದಿಂದ ಹಿಡಿದು ಕಿಸಾನ್ ಸಮ್ಮಾನ್ ತನಕ ನೂರಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ನಿಮ್ಮ ಕಾಮಾಲೆ ಕಣ್ಣಿಗೆ “ಸರ್ವಾಧಿಕಾರಿ ನೀತಿ” ಯಾಗಿ ಕಂಡು ಬಂತೇ?
ನಿಮ್ಮ ಪ್ರಕಾರ ಮೋದಿಜಿ ಸರ್ಕಾರವನ್ನು ಎದುರಿಸಿ ನಿಲ್ಲಲು ಗಾಂಧಿ ಪರಿವಾರದ ನಾಯಕತ್ವವೇ ಅನಿವಾರ್ಯವೆಂದು ತಾವು ಫರ್ಮಾನು ಹೊರಡಿಸಿರುವುದು ಹಾಸ್ಯಾಸ್ಪದ, ಏಕೆಂದರೆ ಒಂದು ವೇಳೆ ಮೋದಿ ಸರ್ಕಾರವನ್ನು ಸಮರ್ಥವಾಗಿ ಎದುರಿಸುವ ತಾಕತ್ತು ನಿಮ್ಮ ಗಾಂಧಿ ಪರಿವಾರಕ್ಕೆ ಇದ್ದಿದ್ದರೆ ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಕಾಂಗ್ರೆಸ್ ಹಿಂದೆಂದೂ ಇಲ್ಲದಂತೆ ಹೀನಾಯ ಸೋಲು ಉಂಡಿದ್ದು ಹೇಗೆ?
ಫುಲ್ವಾಮಾ ಘಟನೆಯಲ್ಲಿ ಬಿಜೆಪಿ ನಡೆಸಿದ ಭಾವನಾತ್ಮಕ ಪ್ರಚಾರವೇ 2019ರಲ್ಲಿ ಕಾಂಗ್ರೆಸ್ ಸೋಲಲು ಕಾರಣ ಎಂದು ತಾವು ಕುಂಟುನೆಪವೊಡ್ಡಿ ನಿಮ್ಮ ಗಾಂಧಿ ಪರಿವಾರದ ಅಸಮರ್ಥತೆಯನ್ನು ಮರೆಮಾಚಲು ಪ್ರಯತ್ನಿಸಿದ್ದೀರಿ. ಹಾಗಿದ್ದರೆ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ತಾವು ಯಾವ ಕಾರಣ ನೀಡುತ್ತಾ “ಮೊಸರಲ್ಲಿ ಕಲ್ಲು ಹುಡುಕುತ್ತೀರಿ”? ಫುಲ್ವಾಮಾದಂತಹ ದೇಶ ರಕ್ಷಣೆ ವಿಚಾರಕ್ಕೂ ಚುನಾವಣಾ ರಾಜಕೀಯಕ್ಕೂ ತಾವು ಥಳಕು ಹಾಕುತ್ತಾ ಗಾಂಧಿ ಪರಿವಾರದ ಕೃಪೆಗೆ ಪಾತ್ರರಾಗಬೇಕೆಂದು ಹವಣಿಸುತ್ತಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ.
ಶ್ರೀ ರಾಹುಲ್ ಗಾಂಧಿಯವರು ಅತ್ಯಂತ ಸಮರ್ಥ ನಾಯಕ ಎಂದು ತಾವು ಪದೇಪದೇ ಬಿಂಬಿಸುತ್ತಿದ್ದರೂ ರಾಹುಲ್ ಅವರ ಸಾಮರ್ಥ್ಯದ ಸಾಲಿನಲ್ಲಿ ನಾವು ಮೋದಿಜಿಯವರಂತಹ ದಿಟ್ಟ ಮುತ್ಸದ್ಧಿತನದ ನಾಯಕನನ್ನು ಹೋಲಿಕೆ ಮಾಡಲು ಹೋಗುವುದಿಲ್ಲ. ಈ ದೇಶದ ಮಹಾಜನತೆಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಬಿಡಿ.
ಇನ್ನು ಕಾಂಗ್ರೆಸ್ಸಿಗೆ ಯಾರು ಅಧಿನಾಯಕರಾಗಬೇಕೆಂಬ ವಿಚಾರಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ ಅದು ನಿಮ್ಮ ಪಕ್ಷದ ಆಂತರಿಕ ವಿಚಾರ, ಅಷ್ಟೇ ಅಲ್ಲ, ತಾವು “ಅನ್ಯಥಾ ಶರಣಂ ನಾಸ್ತಿ” ಎನ್ನುತ್ತಿದ್ದರೂ ತಮ್ಮ ಪಕ್ಷದವರೇ ಆದ 23 ಮಂದಿ ಹಿರಿಯ ನಾಯಕರು ಈ ಬಗ್ಗೆ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ ಬಿಡಿ. ಅವರ ಪ್ರತಿಕ್ರಿಯೆಯಲ್ಲಿ ತಮಗೆ ಸತ್ಯದ ಹೂರಣ ಕಂಡಿಲ್ಲದಿರುವುದು ಆಶ್ಚರ್ಯವೇ ಸರಿ.
ದಿನೇಶ್ ಗುಂಡೂರಾಯರೇ ನೀವು ನಿಮ್ಮ ನಾಯಕರಿಗೆ ಬಹು ಪರಾಕ್ ಹೇಳಲು ನಮ್ಮ ಅಭ್ಯಂತರವೇನಿಲ್ಲ. ಆದರೆ ಈ ಸಂದರ್ಭದಲ್ಲಿ ಸತ್ಯದ ಮೇಲೆ ಸುತ್ತಿಗೆ ಹೊಡೆದಂತೆ ನಮ್ಮ ಬಿಜೆಪಿ ಸರ್ಕಾರದ ಮೇಲೆ ಅನಗತ್ಯವಾಗಿ ಆರೋಪಿಸುವುದು ಎಷ್ಟು ಸರಿ? ಟೀಕೆಗೂ ನೀತಿ ಬೇಡವೇ? ಎಂದು ಕಿಡಿ ಕಾರಿದ್ದಾರೆ