ಡೆಹರಾಡೂನ್ : ಹೃಷೀಕೇಶದಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಐಕಾನಿಕ್ ತೂಗು ಸೇತುವೆ ಲಕ್ಷಣ್ ಝೂಲಾ ವನ್ನು ಇಂದು ಶುಕ್ರವಾರ ವಾಹನ ಸಂಚಾರಕ್ಕೆ ಮುಚ್ಚಲಾಗಿದೆ.
ಸೇತುವೆಯು ಹೆಚ್ಚಿನ ಭಾರವನ್ನು ತಾಳಿಕೊಳ್ಳದೆಂದು ಪರಿಣತರು ಹೇಳಿರುವ ಪ್ರಕಾರ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಲಕ್ಷ್ಮಣ್ ಝೂಲಾದ ಬಹು ಭಾಗ ದುರ್ಬಲವಾಗಿದ್ದು ಕುಸಿಯುವ ಭೀತಿ ಎದುರಾಗಿದೆ ಎಂದು ಪರಿಣತರು ಹೇಳಿದ್ದಾರೆ ಎಂದು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಓಂ ಪ್ರಕಾಶ್ ಹೇಳಿದ್ದಾರೆ.
ಪರಿಣತರ ಅಭಿಪ್ರಾಯವನ್ನು ಮನ್ನಿಸಿ ಸೇತುವೆಯನ್ನು ವಾಹನ ಸಂಚಾರಕ್ಕೆ ಮಾತ್ರವಲ್ಲದೆ ಪಾದಚಾರಿಗಳ ಸಂಚಾರಕ್ಕೂ ಮುಚ್ಚಲಾಗಿದೆ ಎಂದವರು ಹೇಳಿದರು.
ಈಚಿನ ವರ್ಷಗಳಲ್ಲಿ ಲಕ್ಷ್ಮಣ್ ಝೂಲಾ ದಲ್ಲಿ ವಾಹನ ಮತ್ತು ಜನ ಸಂಚಾರ ಅಭೂತಪೂರ್ವವಾಗಿ ಹೆಚ್ಚಿದೆ. ಪರಿಣಾಮವಾಗಿ ಝೂಲಾದ ಟವರ್ ಗಳು ಒಂದು ಕಡೆಗೆ ವಾಲಿದಂತೆ ಕಂಡು ಬರುತ್ತಿವೆ ಎಂದು ಓಂ ಪ್ರಕಾಶ್ ಹೇಳಿದರು.
ಯೋಗ ಮತ್ತು ಧ್ಯಾನದ ಪ್ರಖ್ಯಾತ ಕೇಂದ್ರವಾಗಿರುವ ಹೃಷೀಕೇಶದಲ್ಲಿ 1923ರಲ್ಲಿ ಗಂಗಾ ನದಿಗೆ ಅಡ್ಡಲಾಗಿ ಲಕ್ಷ್ಮಣ್ ಝೂಲಾ ವನ್ನು ನಿರ್ಮಿಸಲಾಗಿದ್ದು ಇದು ಉತ್ತರಾಖಂಡ ನಗರದ ಪ್ರಸಿದ್ಧ ಲ್ಯಾಂಡ್ ಮ್ಯಾರ್ಕ್ ಎನಿಸಿಕೊಂಡಿದೆ.