ಕೊಪ್ಪಳ: ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿಯಿಲ್ಲ. ನಮ್ಮ ಸರ್ಕಾರವು ಕೋವಿಡ್ ನಿಯಂತ್ರಣದಲ್ಲಿ ಹೆಚ್ಚು ನಿಗಾ ವಹಿಸಿದೆ. ಯಾರೋ ಸುಮ್ಮನೆ ಸಿಎಂ ಬದಲಾಗುತ್ತಾರೆ ಎಂದು ಕಾಗೆ ಹಾರಿಸುತ್ತಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಅವರು ಹೇಳಿದರು.
ಕೊಪ್ಪಳದಲ್ಲಿ5 ಬೆಡ್‌ಗಳ ತುರ್ತು ಆಕ್ಸಿಜನ್ ಬಸ್‌ಗೆ ಚಾಲನೆ ನೀಡಿ ಸುದ್ದಿಗಾರರ ಜೊತೆ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆಯೇ ಇಲ್ಲ. ಕೋವಿಡ್ ನಿರ್ವಹಣೆಯು ನಮ್ಮ ಮುಖ್ಯ ಉದ್ದೇಶವಾಗಿದೆ. ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಎಂಬ ವಿಚಾರವೂ ಇಲ್ಲ. ಸುಮ್ಮನೆ ಯಾರೋ ಕಾಗೆ ಹಾರಿಸುವ ಕೆಲಸದಲ್ಲಿದ್ದಾರೆ ಎಂದರು.
ರಾಜ್ಯದಲ್ಲಿ ಕೊರೊನಾ ಸೋಂಕು ಹತೋಟಗೆ ಬರುತ್ತಿದೆ. ಮುಂದಿನ ದಿನದಲ್ಲೂ ಸೋಂಕು ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ. ಇನ್ನೂ ರಾಜ್ಯದಲ್ಲಿ ೫೦೦ ಬ್ಲಾಕ್ ಪಂಗಸ್ ಸೋಂಕಿತರು ಪತ್ತೆಯಾಗಿದ್ದಾರೆ. ಮೊದಲು ನಾಲ್ಕು ಆಸ್ಪತ್ರೆಗಳಲ್ಲಿ ಇದಕ್ಕೆ ಚಿಕಿತ್ಸೆ ನೀಡಬೇಕೆಂದು ನಿರ್ಧರಿಸಿದ್ದೇವು. ಆದರೆ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲೇ ಪಂಗಸ್‌ಗೆ ಚಿಕಿತ್ಸೆ ಕೊಡಲು ಸರ್ಕಾರ ನಿರ್ಧರಿಸಿದೆ. ಬ್ಲಾಕ್ ಪಂಗಸ್‌ಗೆ ಔಷಧಿಯ ಕೊರತೆಯಿರುವುದು ನಿಜ. ಇದಕ್ಕೆ ಒಬ್ಬ ಸೋಂಕಿತನಿಗೆ ಕನಿಷ್ಟ 40-45 ಇಂಜೆಕ್ಸನ್ ಬೇಕಾಗುತ್ತದೆ. ಒಮ್ಮೆ ಈ ಸೋಂಕಿತ ಆಸ್ಪತ್ರೆಗೆ ದಾಖಲಾದರೆ ಆತ ಕನಿಷ್ಟ 40-50 ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಸಿಎಂ ಅವರಿಗೆ ಈ ಬಗ್ಗೆ ಗಮನಕ್ಕೆ ತಂದಿದ್ದು, ಬ್ಲಾಕ್ ಪಂಗಸ್‌ಗೆ ಸರ್ಕಾರ ಉಚಿತ ಚಿಕಿತ್ಸೆ ನೀಡಲಿದೆ ಎಂದರು.
10 ಲಕ್ಷಕ್ಕಿಂತ ಹೆಚ್ಚು ಕಿಮೀ ಸಂಚರಿಸಿದ ಸರ್ಕಾರಿ ಸಾರಿಗೆ ನಿಗಮದ ಬಸ್‌ಗಳನ್ನು ಗುಜಿರಿಗೆ ಹಾಕಿದ್ದರೆ 1.5 ಲಕ್ಷಕ್ಕೆ ಅವರು ಹೋಗುತ್ತಿದ್ದವು.
ಅಂತಹ ಬಸ್‌ಗಳನ್ನೇ ಕೋವಿಡ್ ಸೊಂಕಿತರ ತುರ್ತು ಆಕ್ಸಿಜನ್ ಪೂರೈಕೆಗಾಗಿ ಬಳಸಲು ನಿರ್ಧರಿಸಿದ್ದೇವೆ. ಸೋಂಕಿತರು ಆಟೋ, ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ಬಂದಾಗ ಅಲ್ಲಿ ಅವರಿಗೆ ಆಕ್ಸಿಜನ್ ಬೆಡ್ ಸಿಗದೇ ಇದ್ದಾಗ ಅವರಿಗೆ ತುರ್ತು ಆಕ್ಸಿಜನ್ ವ್ಯವಸ್ಥೆ ಪೂರೈಸುವ ಉದ್ದೇಶದಿಂದ ಗುಜರಿಯ ಬಸ್‌ಗಳನ್ನೇ ಆಕ್ಸಿಜನ್ ಬೆಡ್‌ಗಳನ್ನಾಗಿ ಪರಿವರ್ತಿಸಿ ಮೊಬೈಲ್ ಬಸ್‌ಗಳನ್ನಾಗಿ ಮಾಡಿದ್ದೇವೆ. ಇದರಲ್ಲಿ ಐದು ಆಕ್ಸಿಜನ್ ಬೆಡ್, ಒಂದು ವೆಂಟಿಲೇಟರ್ ಬೆಡ್ ಇರಲಿದೆ. ಈ ಬಸ್‌ನಲ್ಲಿ ಒಬ್ಬ ಸಿಸ್ಟರ್, ಒಬ್ಬ ಅಟೆಂಡರ್ ನೇಮಿಸಬೇಕೆಂಬ ನಾವು ಚಿಂತಿಸಿದ್ದೇವೆ ಎಂದರು.
ಈಗಾಗಲೆ ಬೆಂಗಳೂರಿನಲ್ಲಿ ಆಕ್ಸಿಜನ್ ಬಸ್ ಆರಂಭಿಸಿದ್ದು, ಕೊಪ್ಪಳ, ಯಲಬುರ್ಗಾದಲ್ಲೂ ಇದನ್ನು ಆರಂಭಿಸಿದ್ದೇವೆ. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗುವ ವರೆಗೂ ಈ ಮೊಬೈಲ್ ಬಸ್‌ನಲ್ಲಿ ಸೋಂಕಿತರಿಗೆ ಪ್ರಥಮ ಚಿಕಿತ್ಸೆ ಕೊಡುವ ವ್ಯವಸ್ಥೆಗೆ ನಾವು ಹೊಸ ಆಯಾಮ ಆರಂಭಿಸಿದ್ದೇವೆ. ನಮ್ಮ ಯೋಜನೆಯಂತೆ ಅನ್ಯ ರಾಜ್ಯಗಳಲ್ಲಿಯೂ ಇಂತಹ ಬಸ್‌ಗಳನ್ನ ಆರಂಭ ಮಾಡಬೇಕೆಂದು ರಾಜ್ಯದಿಂದ ಮಾಹಿತಿ ಪಡೆದಿದ್ದಾರೆ. ಈಗಾಗಲೆ 10 ಮೊಬೈಲ್ ಬಸ್ ಆರಂಭಿಸಿದ್ದು, ೧೦೦ ಬಸ್‌ಗಳನ್ನು ಆರಂಭಿಸುವ ಸಿದ್ದತೆಯಲ್ಲಿದ್ದೇವೆ. ಜಿಲ್ಲಾ ಕೇಂದ್ರದ ಆಸ್ಪತ್ರೆ ಹಾಗೂ ದೊಡ್ಡ ದೊಡ್ಡ ತಾಲೂಕುಗಳಲ್ಲಿಯೂ ಈ ಬಸ್‌ಗಳನ್ನ ಸರ್ಕಾರಿ ಆಸ್ಪತ್ರೆಗಳ ಮುಂದೆ ನಿಲ್ಲಿಸಲಿದ್ದೇವೆ ಎಂದರು.