Advertisement

ಆಪರೇಷನ್‌ ಮಾಡಾಳು ಬಾಕ್ಸ್‌ಗಳಲ್ಲಿ ಹಣ..ಹಣ..

11:23 PM Mar 03, 2023 | Team Udayavani |

ಬೆಂಗಳೂರು: ಐಷಾರಾಮಿ ಬಂಗಲೆಯ ತುಂಬಾ ಮೂಟೆಯಲ್ಲಿ ಕಟ್ಟಿಟ್ಟಿದ್ದ 500ರ ಮುಖ ಬೆಲೆಯೆ ಕಂತೆ-ಕಂತೆ ನೋಟುಗಳು, ಕಪಾಟಿನ ಬಾಗಿಲು ತೆಗೆಯುತ್ತಿದ್ದಂತೆ ಬ್ಯಾಗ್‌ಗಳಲ್ಲಿ ತುಂಬಿ ತುಳುಕುತ್ತಿದ್ದ ಕುರುಡು ಕಾಂಚಾಣ, ಒಟ್ಟಾರೆ 8.12 ಕೋಟಿ ರೂ. ನಗದು, ಕೆ.ಜಿ.ಗಟ್ಟಲೆ ಚಿನ್ನ, ಬೆಳ್ಳಿ……ಇದು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಇವರ ಪುತ್ರ ಪ್ರಶಾಂತ್‌ ಮಾಡಾಳುಗೆ ಸೇರಿದ ಅಕ್ರಮ ಸಂಪತ್ತು.

Advertisement

ಇದುವರೆಗೆ ಒಟ್ಟು 8.12 ಕೋಟಿ ರೂ. ನಗದು ಹಾಗೂ ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆ ಪತ್ತೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಸುವುದಾಗಿ ಲೋಕಾ ಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಎಲ್ಲೆಲ್ಲಿ ದಾಳಿ, ಎಷ್ಟೆಷ್ಟು ದುಡ್ಡು, ಚಿನ್ನ ಪತ್ತೆ ?
ಲೋಕಾಯುಕ್ತ ಡಿವೈಎಸ್‌ಪಿಗಳಾದ ಬಸವರಾಜ ಮುಗªಮ್‌, ಎಂ.ಎಚ್‌.ಸತೀಶ್‌, ಪ್ರಕಾಶ್‌ ರೆಡ್ಡಿ ನೇತೃತ್ವದ ವಿಶೇಷ ತಂಡವು ಗುರುವಾರ ಸಂಜೆ 6-45ಕ್ಕೆ ಕ್ರೆಸೆಂಟ್‌ ರಸ್ತೆಯಲ್ಲಿರುವ ಪ್ರಶಾಂತ್‌ ಖಾಸಗಿ ಕಚೇರಿ, ಸಂಜಯ್‌ ನಗರದಲ್ಲಿರುವ ಶಾಸಕರ ಮನೆಯಲ್ಲಿ ಶುಕ್ರವಾರ ಮುಂಜಾನೆ 4 ಗಂಟೆವರೆಗೆ ತಪಾಸಣೆ ನಡೆಸಿದ್ದರು. ತಪಾಸಣೆ ವೇಳೆ ಪ್ರಶಾಂತ್‌ ಮಾಡಾಳು ಖಾಸಗಿ ಕಚೇರಿಯಲ್ಲಿ 2.2 ಕೋಟಿ ರೂ. ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಗುರುವಾರ ತಡರಾತ್ರಿ ಶಾಸಕ ವಿರೂಪಾಕ್ಷಪ್ಪ ಅವರ ಸಂಜಯನಗರದ ಮನೆಯಲ್ಲಿ ಬರೊಬ್ಬರಿ 6,10,30,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಿದ ದುಡ್ಡನ್ನು ಚೀಲದಲ್ಲಿ ತುಂಬಿ ಲೋಕಾಯುಕ್ತ ಕಚೇರಿಯ ಲಾಕರ್‌ಗಳಲ್ಲಿ ಇಡಲಾಗಿದೆ. ಇದರ ಜೊತೆಗೆ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಸಿಕ್ಕಿದ್ದು, ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

1.20 ಕೋಟಿ ರೂ.ಗೆ ಬೇಡಿಕೆ
ಕೆಮಿಕಲ್‌ ಆಯಿಲ್‌ ಪೂರೈಕೆಗೆ ಮಂಜೂರು ಮಾಡಿರುವ ಟೆಂಡರ್‌ ಮತ್ತು ಈ ಸಂಬಂಧ ನೀಡಿರುವ ಖರೀದಿ ಆದೇಶಕ್ಕಾಗಿ (ಪರ್ಚೇಸ್‌ ಆರ್ಡರ್‌) ಹಾಗೂ ಸರಬರಾಜು ಮಾಡಿದ ರಾಸಾಯನಿಕ ಸರಕಿಗೆ ಯಾವುದೇ ಅಡಚಣೆಯಿಲ್ಲದೇ ಬೆಂಗಳೂರಿನ ಕೆಮಿಕ್ಸಿಲ್‌ ಕಾರ್ಪೊರೇಷನ್‌ ಮತ್ತು ಎಂ.ಎಸ್‌. ಡೆಲಿಸಿಯಾ ಕೆಮಿಕಲ್‌ ಕಂಪನಿಗೆ ಬಿಲ್‌ ಮೊತ್ತ ಬಿಡುಗಡೆ ಮಾಡಿಸಿಕೊಡಲು ತಂದೆಯ ಪರ ಪ್ರಶಾಂತ್‌ 1.20 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದರು.ಅಂತಿಮವಾಗಿ 81 ಲಕ್ಷಕ್ಕೆ ಮಾತುಕತೆ ನಡೆದಿತ್ತು. ಲಂಚ ನೀಡಲು ಇಚ್ಛಿಸದ ಕೆಮಿಕ್ಸಿಲ್‌ ಕಾರ್ಪೊರೇಷನ್‌ ಕಂಪನಿ ಪಾಲುದಾರ ಶ್ರೇಯಸ್‌ ಕಶ್ಯಪ್‌ ಗುರುವಾರ ಬೆಳಗ್ಗೆ ಲೊಕಾಯುಕ್ತ ಪೊಲೀಸರಿಗೆ ದಾಖಲೆ ಸಮೇತ ಈ ಬಗ್ಗೆ ದೂರು ಕೊಟ್ಟಿದ್ದರು.

ಸ್ಮಾರ್ಟ್‌ ವಾಚ್‌ ಸಾಕ್ಷ್ಯ
ಮಾಡಾಳು ವಿರೂಪಾಕ್ಷಪ್ಪ ಅವರನ್ನು ನಿಗಮದ ಕಚೇರಿಯಲ್ಲಿ ದೂರುದಾರರು ಭೇಟಿ ಮಾಡಿ ಟೆಂಡರ್‌ ಬಗ್ಗೆ ಪ್ರಸ್ತಾವಿಸಿದಾಗ, ಕಮಿಷನ್‌ ಹಣದ ವಿಚಾರದಲ್ಲಿ ನನ್ನ ಪುತ್ರನ ಬಳಿ ಮಾತನಾಡಿ ಕಮಿಷನ್‌ ಅಂತಿಮಗೊಳಿಸಲು ಶಾಸಕರು ತಿಳಿಸಿದ್ದರು. ಜ.12ರಂದು ಮಾಡಾಳು ಪ್ರಶಾಂತ್‌ರನ್ನು ಭೇಟಿ ಮಾಡಿದಾಗ ಕೆಮಿಕ್ಸಿಲ್‌ ಕಾರ್ಪೊರೇಷನ್‌ನಿಂದ 33 ಲಕ್ಷ ರೂ. ಮತ್ತು ಎಂ.ಎಸ್‌.ಡೆಲಿಸಿಯಾ ಕೆಮಿಕಲ್ಸ…ನಿಂದ 48 ಲಕ್ಷ ರೂ. ಸೇರಿ ಒಟ್ಟು 81 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಫೆ.8ರಂದು ದೂರುದಾರರು ಮತ್ತೆ ಪ್ರಶಾಂತ್‌ರನ್ನು ಭೇಟಿ ಮಾಡಿ ಈ ಕುರಿತು ನಡೆಸಿದ ಸಂಭಾಷಣೆಯನ್ನು ಶ್ರೇಯಸ್‌ ಕಶ್ಯಪ್‌ ಸ್ಮಾರ್ಟ್‌ ವಾಚ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದರು. ಇದನ್ನು ದೂರುದಾರರು ಲೋಕಾಯುಕ್ತಕ್ಕೆ ಸಾಕ್ಷ್ಯವಾಗಿ ನೀಡಿದ್ದಾರೆ. ಇದೀಗ ಸ್ಮಾರ್ಟ್‌ವಾಚ್‌ನಲ್ಲಿ ಪ್ರಶಾಂತ್‌ ಲಂಚಾವತಾರದ ಮಾಹಿತಿ ಇದೆ ಎಂದು ತಿಳಿದು ಬಂದಿದೆ.

Advertisement

ವಿರೂಪಾಕ್ಷಪ್ಪ ಮೊದಲ ಆರೋಪಿ
ಬೆಂಗಳೂರಿನ ಕೆಮಿಕ್ಸಿಲ್‌ ಕಾರ್ಪೊರೇಷನ್‌ ಪಾಲುದಾರ ಸಂಸ್ಥೆ ನೀಡಿರುವ ದೂರಿನ ಆಧಾರದ ಮೇರೆಗೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಮಾಡಾಳು ವಿರೂಪಾಕ್ಷಪ್ಪ ಮೊದಲನೇ ಆರೋಪಿಯಾದರೆ, ಇವರ ಪುತ್ರ ಪ್ರಶಾಂತ್‌ ಎರಡನೇ ಆರೋಪಿಯಾಗಿದ್ದಾರೆ. ಪ್ರಶಾಂತ್‌ ಕಚೇರಿಯಲ್ಲಿ ಅಕೌಂಟೆಂಟ್‌ ಆಗಿರುವ ಚಾಮರಾಜಪೇಟೆಯ ನಿವಾಸಿ ಸುರೇಂದ್ರ (32) ಮೂರನೇ ಆರೋಪಿಯಾಗಿದ್ದಾರೆ. ಇನ್ನು ಪ್ರಶಾಂತ್‌ ಸಂಬಂಧಿಯಾಗಿರುವ ಸಿದ್ದೇಶ್‌ ಅಲಿಯಾಸ್‌ ಅನಿಲ್‌ (28) 4ನೇ ಆರೋಪಿ, ಚಿತ್ರದುರ್ಗದ ಫೀಲ್ಡ್‌ ವರ್ಕರ್‌ ಅಲ್ಬರ್ಟ್‌ ನಿಕೋಲಾ (51) 5ನೇ ಆರೋಪಿ ಹಾಗೂ ಹಳೆಗಡ್ಡದ ಹಳ್ಳಿಯ ನಿವಾಸಿ ಫೀಲ್ಡ್‌ವರ್ಕರ್‌ ಗಂಗಾಧರ್‌ (45) ಪ್ರಕರಣದ 6ನೇ ಆರೋಪಿಯಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next