Advertisement

ಮಳೆ, ಬಿಗಿ ಭದ್ರತೆಯ ನಡುವೆ ವಿಶ್ವ ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ

05:09 PM Jul 14, 2018 | udayavani editorial |

ಪುರಿ : ಒಡಿಶಾದ ಈ ಪುಣ್ಯ ಕ್ಷೇತ್ರದಲ್ಲಿಂದು ವಿಶ್ವ  ಪ್ರಸಿದ್ಧ ಜಗನ್ನಾಥ ರಥ ಯಾತ್ರೆ ಅತ್ಯಂತ ಬಿಗಿ ಭದ್ರತೆಯ ನಡುವೆ, ಸಕಲ ವೈಭವ, ಧಾರ್ಮಿಕ ವಿಧಿ ವಿಧಾನ, ಶ್ರದ್ಧಾ ಭಕ್ತಿಭಾವಗಳೊಂದಿಗೆ ನಡೆಯಿತು. ಪುರಿ ಗೋವರ್ಧನ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ  ಅವರು ತಮ್ಮ ಅನುಯಾಯಿಗಳೊಂದಿಗೆ ರಥದಲ್ಲಿ ವಿಜೃಂಭಿಸಿರುವ ದೇವರುಗಳ ದರ್ಶನ ಪಡೆದರು. 

Advertisement

ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ದೇಶಾದ್ಯಂತದಿಂದ ಬಂದಿರುವ ಲಕ್ಷಾಂತರ ಜನ ಭಕ್ತರು ಪಾಲ್ಗೊಂಡು ಒಂಭತ್ತು ದಿನಗಳ ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರೆಯ ರಥಯಾತ್ರೆಯನ್ನು ಕಂಡು ಕೃತಾರ್ಥರಾದರು. ಈ ರಥಯಾತ್ರೆಯು ಗುಂಡೀಚ ದೇವಸ್ಥಾನಕ್ಕೆ ಸಾಗಿ ಅಲ್ಲಿಂದ ಮರಳಿ ಬರಲಿದೆ. 

12ನೇ ಶತಮಾನದ ಪುರಿಯ ಜಗನ್ನಾಥ ದೇವರ ಈ ಮಹಾ ರಥೋತ್ಸವವು 141ನೇಯದ್ದಾಗಿದೆ. ವರ್ಷಂಪ್ರತಿ ಈ ರಥೋತ್ಸವವು ಆಷಾಢ ಮಾಸದ ಎರಡನೇ ದಿನ ನಡೆಯುತ್ತದೆ. ಇಲ್ಲಿನ ಮೂರು ಭವ್ಯ ರಥಗಳಲ್ಲಿ ಜಗನ್ನಾಥ, ಆತನ ಸಹೋದರ ಬಲರಾಮ ಮತ್ತು ತಂಗಿ ಸುಭದ್ರೆ ಆಸೀನರಾಗಿತ್ತಾರೆ. ಈ ರಥ ಯಾತ್ರೆಯಲ್ಲಿ 18 ಅಲಂಕೃತ ಆನೆಗಳಿರುತ್ತವೆ; 101 ಟ್ಯಾಬ್ಲೋಗಳು ಇರುತ್ತವೆ ಮತ್ತು 18 ಭಜನ ತಂಡಗಳು ಇರುತ್ತವೆ. 

ಜಗನ್ನಾಥ ರಥಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ, ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ಟನಾಯಕ್‌, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಮತ್ತು ಇತರ ಅನೇಕ ಗಣ್ಯರು ಶುಭಕೋರಿದ್ದಾರೆ. 

ಜಗನ್ನಾಥ ದೇವಳದ ಆಡಳಿತೆಯು ರಥ ಯಾತ್ರೆಯ ಸಂದರ್ಭದಲ್ಲಿ ಯಾರೇ ಆಗಲಿ ರಥ ಏರುವುದಾಗಲೀ, ದೇವರ ವಿಗ್ರಹಗಳನ್ನು ಮುಟ್ಟುವುದಾಗಲೀ ಮಾಡಬಾರದೆಂದು ಕಟ್ಟಪ್ಪಣೆ ಹೊರಡಿಸಿ ಈ ಕೃತ್ಯಗಳನ್ನು ನಿಷೇಧಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next