Advertisement

ಉಡುಪಿಯಲ್ಲಿ ಸಂಭ್ರಮದ ಲಕ್ಷದೀಪೋತ್ಸವ

12:05 AM Nov 10, 2019 | Lakshmi GovindaRaju |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶನಿವಾರ ಉತ್ಥಾನ ದ್ವಾದಶಿಯಂದು ಬೆಳಗ್ಗೆ ತುಳಸಿ ಪೂಜೆ, ಸಂಜೆ ಕ್ಷೀರಾಬ್ದಿ ಪೂಜೆ ನಡೆದ ಬಳಿಕ ತೆಪ್ಪೋತ್ಸವ ಸಹಿತ ಲಕ್ಷದೀಪೋತ್ಸವ, ವಾರ್ಷಿಕ ರಥೋತ್ಸವ ಆರಂಭಗೊಂಡಿತು. ಸಂಜೆ ಮಧ್ವಸರೋವರದ ಮಧ್ಯದ ಮಂಟಪದಲ್ಲಿ ಕ್ಷೀರಾಬ್ಧಿ ಅಘವನ್ನು ನೀಡಲಾಯಿತು.

Advertisement

ಪೂಜೆಯಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕಿರಿಯರು, ಪೇಜಾವರ ಮಠದ ಹಿರಿಯ, ಕಿರಿಯ, ಕೃಷ್ಣಾಪುರ, ಅದಮಾರು, ಕಾಣಿಯೂರು ಮಠಾಧೀಶರು ಪಾಲ್ಗೊಂಡರು. ಇದೇ ಸಂದರ್ಭ ಪ್ರಭೋದೋತ್ಸವದ ಅಂಗವಾಗಿ ವೇದ-ದಾಸ-ಗಾನ ಉತ್ಸವ ನಡೆಯಿತು. ಕರಾವಳಿಯ ಭಜನಾ ಮಂಡಳಿಗಳ ಸದಸ್ಯರು ಗೋಷ್ಠಿ ಗಾನದಲ್ಲಿ ದಾಸರ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಅಪರಾಹ್ನ ರಥಬೀದಿಯಲ್ಲಿ ಅಳವಡಿಸಿದ ದಳಿಗಳ ಮೇಲೆ ಗೋಮಯ್ಯವನ್ನು ಇರಿಸಿ, ಅದರ ಮೇಲೆ ಹಣತೆ ಇಡುವ ಮುಹೂರ್ತವನ್ನು ಪರ್ಯಾಯ ಪಲಿಮಾರು ಹಿರಿಯ, ಕಿರಿಯ, ಪೇಜಾವರ ಕಿರಿಯ, ಕಾಣಿಯೂರು ಸ್ವಾಮೀಜಿ ನಡೆಸಿದರು. ರಾತ್ರಿ ಆಕರ್ಷಕ ತೆಪ್ಪೋತ್ಸವ ನಡೆಯಿತು. ಇದೇ ವೇಳೆ, ರಥಬೀದಿ, ಮಧ್ವಸರೋವರದಲ್ಲಿ ಸಾವಿರಾರು ಹಣತೆಗಳ ದೀಪಗಳು ಕಂಗೊಳಿಸಿದವು.

ತೆಪ್ಪೋತ್ಸವದ ಬಳಿಕ ರಥೋತ್ಸವ ನಡೆಯಿತು. ಚಾತುರ್ಮಾಸ್ಯ ಮುಗಿದ ಬಳಿಕ ಇದೇ ಮೊದಲ ಉತ್ಸವವಾಗಿದ್ದು, ಉತ್ಸವ ಮೂರ್ತಿಗಳನ್ನು ರಥದಲ್ಲಿರಿಸಿ ರಥೋತ್ಸವ ನಡೆಸಲಾಯಿತು. ಬೆಳಗ್ಗೆ ಪಲಿಮಾರು ಸ್ವಾಮೀಜಿಯವರು ಮಹಾಪೂಜೆ ಬಳಿಕ ತುಳಸಿ ಪೂಜೆಯನ್ನು ನಡೆಸಿದರು. ನ.13ರ ವರೆಗೆ ನಿತ್ಯ ಲಕ್ಷದೀಪೋತ್ಸವ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next