Advertisement

ಸುಪ್ರೀಂಗೆ ಲಖೀಂಪುರ; ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌

12:31 AM Oct 07, 2021 | Team Udayavani |

ಲಕ್ನೋ/ಹೊಸದಿಲ್ಲಿ: ನಾಲ್ವರು ರೈತರು ಸೇರಿದಂತೆ 8 ಮಂದಿಯ ಸಾವಿಗೆ ಕಾರಣವಾದ ಉತ್ತರಪ್ರದೇಶದ ಲಖೀಂಪುರದ ಘರ್ಷಣೆ ಪ್ರಕರಣ ಈಗ ಸುಪ್ರೀಂ ಕೋರ್ಟ್‌ ಅಂಗಳ ಪ್ರವೇಶಿಸಿದೆ.

Advertisement

ಉತ್ತರಪ್ರದೇಶ ಸರಕಾರವು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಅದರಂತೆ, ಗುರುವಾರವೇ ಸಿಜೆಐ ಎನ್‌.ವಿ. ರಮಣ ನೇತೃತ್ವದ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ.

ರಾಹುಲ್‌ ಭೇಟಿ: ಇದೇ ವೇಳೆ ಲಖೀಂಪುರ ಖೇರಿಗೆ ರಾಜಕೀಯ ವ್ಯಕ್ತಿಗಳ ಪ್ರವೇಶಕ್ಕೆ ಕೊನೆಗೂ ಅವಕಾಶ ಸಿಕ್ಕಿದೆ. ಬುಧವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಿಯಾಂಕಾ, ಪಂಜಾಬ್‌ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ಘಟನ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ಬುಧವಾರ ಬೆಳಗ್ಗೆ ರಾಹುಲ್‌ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ್ದ ಉತ್ತರಪ್ರದೇಶ ಸರಕಾರ, ನಂತರ ಅವಕಾಶ ಕಲ್ಪಿಸಿತು. ಅದರಂತೆ, ರಾಹುಲ್‌ ಅವರು ಲಕ್ನೋ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಆದರೆ ಪೊಲೀಸರು ಅವರನ್ನು ತಡೆದು, ಪೊಲೀಸ್‌ ಜೀಪಿನಲ್ಲಷ್ಟೇ ಲಖೀಂಪುರಕ್ಕೆ ಹೋಗಬೇಕು ಎಂದು ಸೂಚಿಸಿದರು. ಇದರಿಂದ ಕೆಂಡಾಮಂಡಲರಾದ ರಾಹುಲ್‌ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಜತೆಗೆ ನನ್ನ ಕಾರಿನಲ್ಲಷ್ಟೇ ಹೋಗುತ್ತೇನೆ ಎಂದು ಧರಣಿ ಕುಳಿತರು. ಕೊನೆಗೆ ಅವರದೇ ಕಾರಿನಲ್ಲಿ ತೆರಳಲು ಅನುಮತಿ ನೀಡಲಾಯಿತು.

ಪ್ರಿಯಾಂಕಾ ಭೇಟಿ: ಮೊದಲು ಪ್ರಿಯಾಂಕಾರನ್ನು ಬಂಧಿಸಿಟ್ಟಿರುವ ಅತಿಥಿಗೃಹಕ್ಕೆ ತೆರಳಿದ ರಾಹುಲ್‌, ಅಲ್ಲಿಂದ ಲಖೀಂಪುರಕ್ಕೆ ಪ್ರಯಾಣ ಬೆಳೆಸಿದರು.

Advertisement

50 ಲಕ್ಷ ಪರಿಹಾರ: ಲಖೀಂಪುರದ ಘಟನೆಯಲ್ಲಿ ಅಸುನೀಗಿದ ರೈತರ ಕುಟುಂಬಗಳಿಗೆ ಪಂಜಾಬ್‌ ಮತ್ತು ಛತ್ತೀಸ್‌ಗಢದ ಕಾಂಗ್ರೆಸ್‌ ಸರಕಾರಗಳು ತಲಾ 50 ಲಕ್ಷ ರೂ. ಪರಿಹಾರ ಘೋಷಿಸಿವೆ.

ಇದನ್ನೂ ಓದಿ:“ನೀಟ್‌ ಸೂಪರ್‌ ಸ್ಪೆಷಾಲಿಟಿ’ಗೆ ಸುಪ್ರೀಂ ಅಸ್ತು

ರಾಜಕೀಯ ಮೈಲೇಜ್‌ಗಾಗಿ ಈ ತಂತ್ರ: ಲಖೀಂಪುರದ ದುರ್ಘ‌ಟನೆಯನ್ನು ಗಾಂಧಿ ಕುಟುಂಬವು ರಾಜಕೀಯ ಮೈಲೇಜ್‌ನ ಅವಕಾಶವೆಂದು ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, “ಬೇಜವಾಬ್ದಾರಿತನ ಎನ್ನುವುದು ರಾಹುಲ್‌ರ ಮತ್ತೂಂದು ಹೆಸರು. ಕಾಂಗ್ರೆಸ್‌ ಪಕ್ಷವು ಜನರಿಗೆ ಹಿಂಸಾಚಾರ ನಡೆಸಲು ಪ್ರಚೋದನೆ ನೀಡುತ್ತಿದೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮತ ಗಳಿಸುವುದು ಕಾಂಗ್ರೆಸ್‌ನ ತಂತ್ರ’ ಎಂದು ಕಿಡಿಕಾರಿದ್ದಾರೆ.

ಅಮಿತ್‌ ಶಾ ಭೇಟಿ ಆದ ಅಜಯ್‌ ಮಿಶ್ರಾ
ತಮ್ಮ ಪುತ್ರನ ವಿರುದ್ಧ ಕೊಲೆ ಕೇಸು ದಾಖಲಾದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್‌ ಮಿಶ್ರಾ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿಯಾಗಿದ್ದಾರೆ. ದೆಹಲಿಯ ನಾರ್ತ್‌ಬ್ಲಾಕ್‌ನಲ್ಲಿರುವ ಕಚೇರಿಗೆ ಬುಧವಾರ ಬೆಳಗ್ಗೆ ಬಂದ ಮಿಶ್ರಾ, ಅರ್ಧ ಗಂಟೆ ಕಾಲ ಕಚೇರಿಯಲ್ಲಿದ್ದು ನಂತರ ನೇರವಾಗಿ ಶಾ ಅವರ ನಿವಾಸಕ್ಕೆ ತೆರಳಿದರು. ಸುಮಾರು 30 ನಿಮಿಷಗಳ ಕಾಲ ಇಬ್ಬರೂ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ನನ್ನ ಮತ್ತು ಮಗನ ವಿರುದ್ಧದ ಆರೋಪವು ವಿಪಕ್ಷಗಳು ಮಾಡಿರುವ ಸಂಚು. ಲಖೀಂಪುರ ಘಟನೆ ಕುರಿತ ತನಿಖೆಯು ನ್ಯಾಯೋಚಿತವಾಗಿ ನಡೆಯುತ್ತಿದೆ. ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ.
-ಅಜಯ್‌ ಮಿಶ್ರಾ, ಕೇಂದ್ರ ಸಚಿವ

ಲಖೀಂಪುರ ಪ್ರಕರಣದ ಎಲ್ಲ ಆರೋಪಿಗಳನ್ನೂ ಬಂಧಿಸಬೇಕು, ಕೇಂದ್ರ ಸಚಿವ ಮಿಶ್ರಾರಿಂದ ರಾಜೀನಾಮೆ ಪಡೆಯಬೇಕು. ರೈತರಿಗೆ ಅಧಿಕಾರಿಗಳು ನೀಡಿರುವ ವಾಗ್ಧಾನವನ್ನು ವಾರದೊಳಗೆ ಪೂರೈಸದಿದ್ದರೆ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗುವುದು.
-ರಾಕೇಶ್‌ ಟಿಕಾಯತ್‌, ಬಿಕೆಯು ನಾಯಕ

ದುರ್ಗಾ ಪೆಂಡಾಲ್‌ನಲ್ಲೂ “ಲಖೀಂಪುರ ಪ್ರತಿಭಟನೆ’
ಪಶ್ಚಿಮ ಬಂಗಾಲದ ಕೋಲ್ಕತಾದ ಪ್ರಮುಖ ದುರ್ಗಾಪೂಜೆ ಪೆಂಡಾಲ್‌ನಲ್ಲಿ ಈ ಬಾರಿ “ರೈತರ ಪ್ರತಿಭಟನೆ’ ಹಾಗೂ “ಲಖೀಂಪುರ ದುರ್ಘ‌ಟನೆ’ಯೂ ಸ್ಥಾನ ಪಡೆದಿದೆ. ಬೃಹತ್‌ ಟ್ರ್ಯಾಕ್ಟರ್‌ವೊಂದರ ಪ್ರತಿಕೃತಿಯನ್ನು ಪೆಂಡಾಲ್‌ನಲ್ಲಿ ಅಳವಡಿಸಲಾಗಿದ್ದು, ಅಕ್ಕಪಕ್ಕದಲ್ಲಿ ರೈತರ ಮೇಲೆ ಕಾರು ಹರಿದುಹೋಗುತ್ತಿರುವ ಚಿತ್ರವನ್ನೂ ಬಿಡಿಸಲಾಗಿದೆ. “ನಾವು ಅನ್ನದಾತರು, ಭಯೋತ್ಪಾದಕರಲ್ಲ. ರೈತರು ಅನ್ನ ನೀಡುವ ಯೋಧರು’ ಎಂಬ ಫ‌ಲಕವನ್ನೂ ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next