ನವದೆಹಲಿ : ಎಂಟು ಜನರ ಮೃತ್ಯುವಿಗೆ ಕಾರಣವಾದ 2021 ರ ಲಖಿಂಪುರ ಖೇರಿ ಕೇಸ್ ನಲ್ಲಿ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್‌ಗೆ ಸುಪ್ರೀಂ ಕೋರ್ಟ್ ಬುಧವಾರ ಎಂಟು ವಾರಗಳ ಮಧ್ಯಂತರ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ.ಕೆ. ಮಹೇಶ್ವರಿ ಅವರ ಪೀಠವು ಮಧ್ಯಂತರ ಜಾಮೀನು ಅವಧಿಯಲ್ಲಿ ಆಶಿಶ್ ಉತ್ತರ ಪ್ರದೇಶದಲ್ಲಿ ಅಥವಾ ದೆಹಲಿಯಲ್ಲಿ ಉಳಿಯಬಾರದು ಎಂದು ನಿರ್ದೇಶಿಸಿದೆ.
ಅಕ್ಟೋಬರ್ 3, 2021 ರಂದು, ಅಂದಿನ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾದಲ್ಲಿ ಎಂಟು ಜನರು ಬಲಿಯಾಗಿದ್ದರು.
ಉತ್ತರ ಪ್ರದೇಶ ಪೊಲೀಸ್ ಎಫ್‌ಐಆರ್ ಪ್ರಕಾರ, ಆಶಿಶ್ ಕುಳಿತಿದ್ದ ಎಸ್‌ಯುವಿಯಿಂದ ನಾಲ್ವರು ರೈತರು ಜೀವ ಕಳೆದುಕೊಂಡಿದ್ದು. ಘಟನೆಯ ನಂತರ, ಸಿಟ್ಟಿಗೆದ್ದ ರೈತರು ಎಸ್‌ಯುವಿ ಚಾಲಕ ಮತ್ತು ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹೊಡೆದಿದ್ದಾರೆ. ಹಿಂಸಾಚಾರದಲ್ಲಿ ಒಬ್ಬ ಪತ್ರಕರ್ತನೂ ಕೊನೆಯುಸಿರೆಳೆದಿದ್ದರು.
ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಕಳೆದ ವರ್ಷ ಜುಲೈ 26 ರಂದು ಆಶಿಶ್ ಮಿಶ್ರಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹೈಕೋರ್ಟ್‌ನ ಆದೇಶವನ್ನು ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.