ಚೇಳೂರು: 20 ವರ್ಷ ನಂತರ ಎಡಬಿಡದೆ ಸುರಿದ ಮಳೆಯಿಂದ ಬಾಗೇಪಲ್ಲಿ ತಾಲೂಕಿನ ಚೇಳೂರು – ಪಾತ ಪಾಳ್ಯ ಹೋಬಳಿ ವ್ಯಾಪ್ತಿಯ ನೂರಾರು ಎಕರೆ ಯಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದ್ದು, ಕೂಡಲೇ ಅಧಿಕಾ ರಿಗಳು ನಷ್ಟದ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕಿದೆ.
ಗ್ರಾಮ ಸಮೀಪದ ಷೇರ್‌ಖಾನ್ ಕೋಟೆ ಕೆರೆ ಕೋಡಿ ಹರಿದ ಪರಿಣಾಮ ರಾಜಕಾಲುವೆ ಒತ್ತುವರಿ ಮಾಡಿದ್ದರಿಂದ ನೀರು ಹಲವು ಮನೆಗೆ ನುಗ್ಗಿದೆ. ಜೊತೆಗೆ ಕೆರೆಯ ಆಸುಪಾಸಿನ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಬೆಳೆ ನಷ್ಟವಾಗಿದೆ.
ಇನ್ನು ಗ್ರಾಮದ ಹಲವು ಕಡೆ ಕೆರೆ ಕುಂಟೆಗಳಲ್ಲಿ ಮನೆಗಳು ಕಟ್ಟಿಕೊಂಡಿದ್ದು, ಇದೀಗ ನೀರು ತುಂಬಿಕೊಂಡು ಜನರ ನಿದ್ದೆ ಗೆಡಿಸಿದೆ. ರಾಜಕಾಲುವೆ ಒತ್ತುವರಿ ಮಾಡಿದ ಪರಿಣಾಮ ಕೋಡಿ ನೀರು ಜಮೀನು, ವಸತಿ ಪ್ರದೇಶದತ್ತ ನುಗ್ಗುತ್ತಿದೆ. ಪುಲಗಲ್ ಗ್ರಾಪಂ ವ್ಯಾಪ್ತಿಯ ಬೆಲ್ಲಾಲಂಪಲ್ಲಿ ಗ್ರಾಮದಲ್ಲಿ ಮುಸುಕಿನ ಜೋಳ, ತರಕಾರಿ ಇತ್ಯಾದಿ ಬೆಳೆ ನಷ್ಟವಾಗಿದೆ.
ಜೋಳ ಜಲಾವೃತ: ಹೋಬಳಿಯ ಬೆಲ್ಲಾಲಂಪಲ್ಲಿ ಗ್ರಾಮದ ಪ್ರಗತಿಪರ ರೈತ ಬಿ.ಜಿ.ಪಾಲು ವೆಂಕಟರಾಯಪ್ಪ ಎಂಬುವರು ಮುಸುಕಿನ ಜೋಳದ ಬೆಳೆ ಜಲಾವೃತವಾಗಿದೆ. ಕೊಯ್ಲು ಮಾಡುವ ವೇಳೆಗೆ ಬಂದ ಧಾರಾಕಾರ ಮಳೆಯಿಂದ ಮುಸುಕಿನ ಜೋಳ ನಾಶವಾಗಿದೆ. ಹೋಬಳಿಯ ಇದ್ದಿಲವಾರಪಲ್ಲಿ ಗ್ರಾಮದ ರೈತ ಭತ್ತಿನಿ ರಾಮಚಂದ್ರಪ್ಪ ಅವರು ಸಾಲ ಮಾಡಿ ಮುಸುಕಿನ ಜೋಳ ಬೆಳೆದಿದ್ದರೂ ಕೈಗೆ ಸಿಗಲಿಲ್ಲ. ಇನ್ನು ವರ್ಷದ ಬೆಳೆ ಶೇಂಗಾವೂ ಭೂಮಿಯಲ್ಲೇ ಮೊಳಕೆ ಬಂದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಅಧಿಕಾರಿಗಳು ಭೇಟಿ ನೀಡಿಲ್ಲ: ಬಾಗೇಪಲ್ಲಿ ತಾಲೂಕಾದ್ಯಂತ ಶೇಂಗಾ, ಭತ್ತದ ಬೆಳೆ ಸೇರಿ ಅನೇಕ ತರಕಾರಿ ಸೇರಿದಂತೆ ರೈತರು ಬೆಳೆದಂತಹ ಬೆಳೆ ನಷ್ಟವಾಗಿದೆ. ಗ್ರಾಮೀಣ ಭಾಗಗಳಿಗೆ ಶಾಸಕರು, ಅಧಿಕಾರಿಗಳು ಭೇಟಿ ನೀಡಿಲ್ಲ. ಭೇಟಿ ನೀಡದೆ ತಪಾಸಣೆ ಮಾಡದೆ ಇರುವ ಬಗ್ಗೆ ರೈತರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಪರಿಹಾರ ಒದಗಿಸಿ: ವಿಪರೀತ ಮಳೆ ಬಿದ್ದು ಅಪಾರ ಬೆಳೆ ನಷ್ಟವಾಗಿದೆ. ಲಕ್ಷಾಂತರ ರೂ. ರೈತರಿಗೆ ನಷ್ಟವಾಗಿದ್ದು, ಬೆಳೆ ನಷ್ಟ ಅಥವಾ ಬೆಳೆ ವಿಮೆ ಹಣ ತಕ್ಷಣ ಬಿಡುಗಡೆಗೊಳಿಸಲು ಕ್ರಮ ವಹಿಸಲು ಸರ್ಕಾರ ಮುಂದಾಗಬೇಕೆಂದು ಚೇಳೂರು ಹೋಬಳಿಯ ಯುವ ರೈತ ಮುಖಂಡ ಬತ್ತಲವಾರಪಲ್ಲಿ ಬಿ.ಟಿ.ಹರೀಶ್ ತಿಮ್ಮಣ್ಣ ಒತ್ತಾಯಿಸಿದ್ದಾರೆ.
“ಧಾರಾಕಾರ ಮಳೆಯಿಂದ ಭತ್ತ, ರಾಗಿ, ಶೇಂಗಾ ಇತರೆ ಬೆಳೆ ನಾಶವಾಗಿ, ರೈತರ ಕಣ್ಣಲ್ಲಿ ನೀರು ಬರುವಂತಾಗಿದೆ. ಕೈಗೆ ಬಂದ ವರ್ಷದ ಬೆಳೆ ಮಣ್ಣು ಪಾಲಾಗಿದೆ. ಶೀಘ್ರವೇ ಬೆಳೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸುವ ಮೂಲಕ ರೈತರ ನೆರವಿಗೆ ಸರ್ಕಾರ ದಾವಿಸಬೇಕಿದೆ.”
– ಎನ್.ವಿ.ಬಯ್ಯಪ್ಪ, ರೈತ, ಎಂ.ನಲ್ಲಗುಟ್ಲಪಲ್ಲಿ ಗ್ರಾಮ.