ಹೊಸಪೇಟೆ: ತುಂಗಭದ್ರಾ ಜಲಾಶಯ ಒಳ ಹರಿವು ಸೋಮವಾರವೂ ಮುಂದುವರಿದಿದ್ದು, 30 ಕ್ರಸ್ಟ್ ಗೇಟ್‌ಗಳ ಮೂಲಕ 1,15,888 ಕ್ಯೂಸೆಕ್ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗಿದೆ. ಮಲೆನಾಡಿನಲ್ಲಿ ಮಳೆ ಆರ್ಭಟ ಮುಂದುವರಿದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವು ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ.
ಇದರಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗಿದೆ. ಇದು ನದಿಪಾತ್ರದ ಪ್ರದೇಶದ ಜನರಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಹರಿಸುತ್ತಿರುವುದರಿಂದ ಹಂಪಿ ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ನದಿ ತಟದಲ್ಲಿರುವ ವೈದಿಕ ಮಂಟಪ, ಸ್ನಾನಘಟ್ಟ ಜಲಾವೃತವಾದರೆ, ಪುರಂದದಾಸರ ಮಂಟಪ, ಕೋಟಿಲಿಂಗ ಸ್ಮಾರಕಗಳು ಸಂಪೂರ್ಣ ಮುಳಗಡೆಯಾಗಿವೆ. ನದಿಯಲ್ಲಿ ಬೋಟ್ ಸಂಚಾರ ಸ್ಥಗಿತಗೊಂಡಿದೆ. ರಾಮಲಕ್ಷ್ಮಣ ದೇವಾಲಯಕ್ಕೆ ತೆರಳುವ ಪ್ರವಾಸಿಗರ ಕಾಲು ಮಾರ್ಗ (ಓನಕೆ ಕಿಂಡಿ)ದಲ್ಲಿ ನದಿ ನೀರು ಹೊಕ್ಕು ಮಾರ್ಗ ಸ್ಥಗಿತವಾಗಿದೆ. ಪ್ರವಾಸಿಗರು ಬದಲಿ ಮಾರ್ಗದ ಮೂಲಕ ಸಂಚರಿಸುತ್ತಿದ್ದಾರೆ.
ಇದರಿಂದ ಆನೆಗುಂದಿ ಹಾಗೂ ವಿರೂಪಾಪುರಗಡ್ಡೆ ಪ್ರದೇಶಕ್ಕೆ ತೆರಳುವ ಜನರು, ಸುತ್ತುವರೆದು ಬುಕ್ಕಸಾಗರ ಕಡೆ ಬಾಗಿಲು ರಸ್ತೆ ಮೂಲಕ ಸಂಚಾರ ಮಾಡುತ್ತಿದ್ದಾರೆ. ನದಿತೀರದಲ್ಲಿ ತೀವ್ರ ಎಚ್ಚರವಹಿಸಲಾಗಿದೆ. ನದಿ ನೀರಿಗೆ ಇಳಿಯದಂತೆ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿ ನಿಗಾವಹಿಸಿದ್ದಾರೆ.
ಇದರ ನಡುವೆಯೂ ಪ್ರವಾಸಿಗರು ಹಂಪಿ ಕಡೆ ಪ್ರವಾಸಿಗರು ಮುಖಮಾಡಿದ್ದಾರೆ. ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.