ಯಲಬುರ್ಗಾ: ಕೆರೆ, ಕಟ್ಟೆಗಳು ಜನರ ಜೀವನದ ಜೀವನಾಡಿ ಇದ್ದಂತೆ. ಕಾಲಕಾಲಕ್ಕೆ ಅವುಗಳನ್ನು ಅಭಿವೃದ್ಧಿ ಮಾಡುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ ಎಂದು ಕುಷ್ಟಗಿಯ ಮದ್ದಾನಿ ಹಿರೇಮಠದ ಶ್ರೀಕರಿಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಚಿಕ್ಕಮನ್ನಾಪುರ ಗ್ರಾಮದ ಹೊರ ವಲಯದಲ್ಲಿರುವ ಕೆರೆ ಮಳೆಯಿಂದಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಅರ್ಪಣೆ, ಪೂಜಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕೆರೆ, ಕಟ್ಟೆಗಳನ್ನು ನಿರ್ಮಿಸಿದಾಗ ಮಾತ್ರ ರೈತರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಸಹ ಕೆರೆಗಳ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ತಾಲೂಕಿನಲ್ಲಿ ಈ ಹಿಂದೆ 2008-09ರಲ್ಲಿ ಶಾಸಕರಾಗಿದ್ದ ಈಶಣ್ಣ ಗುಳಗಣ್ಣವರ್ ಅವರ ಪರಿಶ್ರಮದಿಂದ ಈ ಗ್ರಾಮದಲ್ಲಿ ಸುಮಾರು 58 ಎಕರೆ ವಿಸ್ತೀರ್ಣದಲ್ಲಿ ಹೊಸದಾಗಿ ಕೆರೆಯನ್ನು ಕಟ್ಟುವ ಮೂಲಕ ಈ ಭಾಗದ ಗ್ರಾಮೀಣ ಪ್ರದೇಶದ ರೈತರ ಜಮೀನುಗಳಿಗೆ ಅಂತರ್ಜಲ ವೃದ್ಧಿಗೆ ಕಾರಣಿಕರ್ತರಾಗಿದ್ದಾರೆ ಎಂದು ಮಾಜಿ ಶಾಸಕ ಈಶಣ್ಣನವರನ್ನು ಶ್ರೀಗಳು ಸ್ಮರಿಸಿದರು.
ಕೇವಲ ರಸ್ತೆ, ಬಿಲ್ಡಿಂಗ್ ಶಾಲಾ-ಕಾಲೇಜು ಕಟ್ಟಿದರೆ ಅಭಿವೃದ್ಧಿಯಲ್ಲ. ಗ್ರಾಮೀಣ ಪ್ರದೇಶದ ಜನರ ಬದುಕು ಬಂಗಾರವಾಗಲು ಕೆರೆಗಳ ಪುನಶ್ಚೇತನಕ್ಕೆ ಕಾಯಕಲ್ಪ ಮಾಡಬೇಕು. ಆ ನಿಟ್ಟಿನಲ್ಲಿ ಅಂದು ಶಾಸಕರಾಗಿದ್ದ ಈಶಣ್ಣ ಗುಳಗಣ್ಣವರ ಈ ಭಾಗಕ್ಕೆ ದೊಡ್ಡ ಕೆರೆಗಳನ್ನು ನಿರ್ಮಿಸಿದ್ದರಿಂದ ಸುತ್ತಮುತ್ತಲಿನ ಹಳ್ಳಿಗಳಿಗೆ ಅನುಕೂಲವಾಗಿದ್ದು, ಹನಿ ನೀರಾವರಿಗೆ ಸಹಕಾರಿಯಾಗಿದೆ. ಇಂತಹ ಶಾಶ್ವತ ಯೋಜನೆಗಳು ಜನಸಾಮಾನ್ಯರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಈಶಣ್ಣನವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಇಂದಿಗೂ ಜೀವಂತವಾಗಿವೆ ಎನ್ನುವುದು ಈ ಕೆರೆಗಳೇ ಸಾಕ್ಷಿ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ ಗುಳಗಣ್ಣವರ್ ಮಾತನಾಡಿ, ನಮ್ಮ ತಂದೆಯವರು ಶಾಸಕರಾಗಿದ್ದ ವೇಳೆ ಈ ಗ್ರಾಮಕ್ಕೆ ಕೆರೆಯನ್ನು ಮಂಜೂರು ಮಾಡಿಸಿದ್ದಾರೆ. ಪ್ರತಿವರ್ಷ ಮಳೆ ಬಂದಾಗ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡು ವರ್ಷವಿಡಿ ಜನ, ಜಾನುವಾರು, ಜಮೀನುಗಳಿಗೆ ನೀರು ಉಪಯೋಗವಾಗುತ್ತಿರುವುದು ಸಂತಸ ತಂದಿದೆ. ಮುಂದಿನ ವರ್ಷದ ಬೇಸಿಗೆ ವೇಳೆಗೆ ಶ್ರೀಕರಿಬಸವೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ನಮ್ಮ ಕುಟುಂಬ ಮತ್ತು ಅಭಿಮಾನಿಗಳ ವತಿಯಿಂದ ಈ ಕೆರೆಯ ಜೀರ್ಣೋದ್ಧಾರಕ್ಕೆ ಮುಂದಾಗುತ್ತೇವೆ. ಕ್ಷೇತ್ರದ ಜನರಿಗೆ ಸಮಾಜಮುಖೀ ಸೇವೆಗಾಗಿ ನಾವು ಸದಾ ಸಿದ್ಧರಿದ್ದೇವೆ ಎಂದರು.
ಗ್ರಾಪಂ ಅಧ್ಯಕ್ಷೆ ಸಿದ್ಧಮ್ಮ ತಳವಾರ, ಮುಖಂಡರಾದ ಶರಣಯ್ಯ ಹಿರೇಮಠ, ಸೋಮಣ್ಣ ಮೂಲಿ, ಸಂಗನಗೌಡ ಮಾಲಿಪಾಟೀಲ್, ವಿಜಯ ತಾಳಕೇರಿ, ಆದೇಶ ರೊಟ್ಟಿ, ಪ್ರಕಾಶ ಬೋರಣ್ಣನವರ, ಯಮನೂರಪ್ಪ ಬೇವೂರು, ಯಮನೂರಪ್ಪ ನಿಡಶೇಸಿ, ಧರೇಶ ಧೂಳಿ, ಪ್ರಭಾಕರ ನಿಡಶೇಸಿ, ಸೋಮಶೇಖರಗೌಡ ಸೋಂಪುರ, ಹನುಮಂತಪ್ಪ ಮುರಡಿ, ಪರಶುರಾಮ ನಿಡಶೇಸಿ, ಶಿವನಪ್ಪ ಕಬ್ಬಣ್ಣವರ, ನಿಂಗಪ್ಪ ದಳಪತಿ, ಮಾನಯ್ಯ ಕಮ್ಮಾರ, ಯೋಗೇಂದ್ರ ಕಮ್ಮಾರ, ಶರಣಮ್ಮ ಮೆಣೇದಾಳ, ಬಸಮ್ಮ ನಿಡಶೇಸಿ, ಶರಣಮ್ಮ, ಬಾಳಪ್ಪ ಲದ್ದಿ, ಮಾರುತಿ ಕೊಂಗಿ, ಶಂಕ್ರಪ್ಪ ಮೇಟಿ ಇತರರಿದ್ದರು.