ಪಿರಿಯಾಪಟ್ಟಣ: ಕೆರೆಕಟ್ಟೆಗಳು ರೈತರ ಮತ್ತು ಜೀವಜಲಗಳ ಜೀವನಾಡಿಯಾಗಿದ್ದು ಅವುಗಳನ್ನು ಉಳಿಸಿ ಬೆಳಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನ ಮೇಲಿದೆ ಎಂದು ತಾಪಂ ಇಒ ಸಿ.ಆರ್.ಕೃಷ್ಣಕುಮಾರ್ ತಿಳಿಸಿದರು.
ತಾಲ್ಲೂಕಿನ ರಾಮನಾಥ ತುಂಗಾ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ ಮತ್ತು ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಸುಗಂಧ ಕೆರೆ ಅಭಿವೃದ್ದಿ ಪಡಿಸಿ ಗ್ರಾಮಸ್ಥರಿಗೆ ಹಸ್ತಾಂತರಿಸಿ ಮಾತನಾಡಿದರು.
ರಾಜ್ಯದಲ್ಲಿ ಅತಿಹೆಚ್ಚು ಕೆರೆಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಿರಿಯಾಪಟ್ಟಣ ಪಾತ್ರವಾಗಿದ್ದು, ತಾಲ್ಲೂಕಿನಲ್ಲಿ 600 ಕೆರೆಗಳು 200 ಕಟ್ಟೆಗಳಿವೆ. ಕರಡಿಲಕ್ಕನ ಕೆರೆ ಹೊರತು ಪಡಿಸಿ ತಾಲ್ಲೂಕಿಗೆ ಯಾವುದೇ ನೀರಿನ ಮೂಲಗಳಿಲ್ಲ ಆದರೂ ಮಳೆಯಾಶ್ರಯದಲ್ಲೇ ತಾಲ್ಲೂಕಿನ ಶೇ. 90 ರಷ್ಟು ಕೆರೆಗಳು ಭರ್ತಿಯಾಗುತ್ತಿರುವುದು ಸಂತಸದ ವಿಷಯ. ಹಿಂದೆ ರಾಜ ಮಾಹಾರಾಜರು ರೈತರಿಗೆ, ಜಮೀನಿಗೆ, ಜಾನುವಾರುಗಳಿಗೆ, ಜಲಚರಗಳಿಗೆ, ಪ್ರಾಣಿ ಸಂಕೂಲಕ್ಕೆ ಕಲ್ಪಿಸುವ ನಿಟ್ಟಿನಲ್ಲಿ ನೀರಿನ ಸಂರಕ್ಷಣೆಯ ಅಗತ್ಯತೆಯನ್ನು ಅರಿತು ಕೆರೆಕಟ್ಟೆಗಳನ್ನು ನಿರ್ಮಿಸಿದ್ದರ ಫಲವಾಗಿ ಇಂದು ಅಂತರ್ಜಲ ಹೆಚ್ಚಾಗಿದೆ. ಈ ಬಾರಿ ನರೇಗಾ ವತಿಯಿಂದ 200 ಕೆರೆಗಳ ಹೂಳೆತ್ತಲಾಗಿ, 78 ಎಕರೆ ಕೆರೆ ಭೂಮಿಯನ್ನು ತೆರವುಗೊಳಿಸಲಾಗಿದೆ ಕೆರೆಗಳನ್ನು ಸಂರಕ್ಷಿಸದಿದ್ದರೆ ಅವುಗಳು ಉಳ್ಳವರ ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಆದ್ದರಿಂದ ಕೆರೆಗಳನ್ನು ಉಳಿಸಿ ಕಾಪಾಡಲು ಗ್ರಾಮಸ್ಥರು ಮುಂದಾಗಬೆಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೀಶ್ ಮಾತನಾಡಿ ಹೆಗ್ಗಡೆಯವರು ಜನ ಮತ್ತು ಜಾನುವಾರುಗಳಿಗೆ ಅನುಕೂಲವಾಗಲಿ ಎಂದು ಕೆರೆಗಳನ್ನು ಹೂಳೆತ್ತಿ ಆ ಮೂಲಕ ಕೆರೆಗಳ ಪುನಶ್ಚೇತನಕ್ಕೆ ರಾಜ್ಯದಾಧ್ಯಂತ 226 ಕೆರೆಗಳನ್ನು ನಮ್ಮ ಊರು ನಮ್ಮ ಕೆರೆ ಯೋನಜೆಯಡಿ ಹೂಳೆತ್ತಲಾಗಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ಪ್ರಥಮವಾಗಿ ರಾಮನಾಥ ತುಂಗ ಗ್ರಾಮದ ಸುಗಂಧರಾಜ ಕೆರೆಯನ್ನು ಹೂಳೆತ್ತಲು 14 ಲಕ್ಷ ಅನುದಾನ ನೀಡಲಾಗಿದೆ. ಗ್ರಾಮಸ್ಥರು ಪಡೆಯುವ ಪ್ರತಿ ಟ್ರಾಕ್ಟರ್ ಮಣ್ಣಿಗೆ (ಗೋಡು) ಹಣ ನೀಡಿ ರೈತರಿಂದ ಪಡೆದ 19 ಲಕ್ಷ ಹಣ ಸೇರಿ ಒಟ್ಟು 33 ಲಕ್ಷ ಹಣದಲ್ಲಿ ಕೆರೆ ಅಭಿವೃದ್ದಿ ಮಾಡಲಾಗಿದೆ ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ 6 ಕೆರೆಗಳನ್ನು ಪುನಶ್ಚೇತನಗೊಳಿಸಲು ಆಯ್ಕೆ ಮಾಡಿ ಕೊಳ್ಳಲಾಗಿದೆ. ಈ ಅಭಿವೃದ್ದಿ ಕೆಲಸಕ್ಕೆ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ಬಂದಿದೆ ಎಂದರು.
ರಾವಂದೂರು ಮುರುಘಾ ಮಠದ ಮೋಕ್ಷಾಪತಿ ಸ್ವಾಮಿಜಿ ಮಾತನಾಡಿ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಮೂಲಕ ಹೆಗ್ಗಡೆಯವರು ಸಾವಿರಾರು ಜನಪರ ಕಾರ್ಯಕ್ರಮಗಳನ್ನು ಕೈಗೊಂಡು ಬಡ ಹಾಗೂ ಅಸಹಾಯಕರಿಗೆ ನೆರವು ಮತ್ತು ಸಹಕಾರ ನೀಡುತ್ತಿದ್ದು, ಈಗ ಜನ ಮತ್ತು ಜಾನುವಾರಗಳ ರಕ್ಷಣೆಗಾಗಿ ಕೆರೆ ಅಭಿವೃದ್ದಿ ಕಾರ್ಯ ಕೈಗೊಂಡಿರುವುದು ಹೆಮ್ಮಯ ಸಂಗತಿ ಇಂಥ ಜನಪರ ಕಾಳಜಿಯುಳ್ಳ ಶ್ರೀಗಳ ಕೆಲಸಕ್ಕೆ ಎಲ್ಲರೂ ಸಹಕಾರ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಮತ್ತಷ್ಟು ಕೆರೆಗಳನ್ನು ಆಯ್ಕೆಮಾಡಿ ಹೂಳು ತೆಗೆದು ಪುನಶ್ಚೇತನಗೊಳಿಸಲು ಸಹಾಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಯೋಜನಾಧಿಕಾರಿ ಸುರೇಶ್ ಶೆಟ್ಟಿ ಮಾತನಾಡಿ ಕೆರೆಗಳ ಹೂಳೆತ್ತುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಇದರಿಂದ ಕೃಷಿಕರಿಗೆ ಹೆಚ್ಚು ಅನುಕೂಲವಾಗುತ್ತದೆ ಹಾಗೂ ಕೆರೆಯಲ್ಲಿ ಕೆರೆಯ ಸುತ್ತ ಕಲ್ಲು ಕಟ್ಟುವುದು ಬೇಲಿ ನಿರ್ಮಿಸುವುದು ಪುಟ್ಬಾತ್ ವ್ಯವಸ್ಥೆ ಮಾಡಿಸುವುದು ಗಿಡಗಳನ್ನು ನಾಟಿ ಮಾಡುವುದು ನೀರಿನ ತೊಟ್ಟಿ ನಿರ್ಮಾಣ ಮಾಡುವುದು ಹೀಗೆ ವಿವಿಧ ರೀತಿಯ ಕೆಲಸಗಳನ್ನು ಮಾಡಿ ಈ ಕೆರೆಯನ್ನು ಮಾದರಿ ಕೆರೆಯಾಗಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿ ಉಮೇಶ್, ಕೆರೆ ಸಮಿತಿ ಅಧ್ಯಕ್ಷ ಪ್ರಹ್ಲಾದ್, ಗ್ರಾಪಂ ಸದಸ್ಯರಾದ ತುಂಗಾಹರೀಶ್, ಲಕ್ಷ್ಮಮ್ಮ, ಮಂಜಪ್ಪ, ರಾಮನಾಯ್ಕ, ಮುಖಂಡರಾದ ಕೃಷ್ಣೇಗೌಡ, ಸ್ವಾಮಿ, ಸಂಘದ ಮೇಲ್ವಿಚಾರಕಿ ಪ್ರೇಮಾ, ಗಾಯತ್ರಿ, ರಾಮನಾಯ್ಕ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.
03ಪಿವೈಪಿ02 ಪಿರಿಯಾಪಟ್ಟಣ ತಾಲ್ಲೂಕಿನ ಆರ್.ತುಂಗಾ ಗ್ರಾಮದ ಸುಗಂಧರಾಜ ಕೆರೆಯನ್ನು ಅಭಿವೃದ್ದಿ ಪಡಿಸಿ ರಾವಂದೂರು ಮುರುಘಾ ಮಠದ ಮೋಕ್ಷಾಪತಿ ಸ್ವಾಮಿಜಿ ಹಾಗೂ ತಾಪಂ ಇಒ ಕೃಷ್ಣಕುಮಾರ್ ಗ್ರಾಮಸ್ಥರಿಗೆ ಹಸ್ತಾಂತರಿಸಿದರು.