Advertisement
ಹೌದು, ಕಳೆದ ವಾರದಲ್ಲಿ ಎರಡು ದಿನ ಕ್ರಮವಾಗಿ 120 ಮಿ.ಮೀ. ಹಾಗೂ 94.5 ಮಿ.ಮೀ. ಮಳೆ ಸುರಿದಿದೆ. ಇದು ಪೂರ್ವ ಮುಂಗಾರಿನಲ್ಲಿ ವಾಡಿಕೆಗೂ ಮೀರಿದ ಮಳೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಈ ಪ್ರಮಾಣದ ಮಳೆಯಾಗಿರಲಿಲ್ಲ. ಅಲ್ಪಾವಧಿಯಲ್ಲಾದ ಭಾರಿ ಮಳೆಗೆ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳು, ಅಂಡರ್‌ಪಾಸ್‌ಗಳು, ಫ್ಲೈಓವರ್‌ಗಳು, ತಗ್ಗು ಪ್ರದೇಶ ಗಳು ಜಲಾವೃತಗೊಂಡವು. ಆದರೆ, ಆ ನೀರು ಕೆರೆಗಳಿಗೆ ಹರಿಯಲಿಲ್ಲ. ಈ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.
* ನಗರದ ಬಹುತೇಕ ಕೆರೆಗಳಲ್ಲಿ ಭಾರಿ ಪ್ರಮಾಣದ ಹೂಳು ತುಂಬಿದಿದೆ. ಹೀಗಾಗಿ ನೀರು ಸಂಗ್ರಹವಾಗುತ್ತಿಲ್ಲ.
* ಕೆರೆಗಳಿಗೆ ನೀರು ತರುವ ಬಹುತೇಕ ರಾಜಕಾಲುವೆಗಳು, ನೀರುಗಾಲುವೆಗಳು ಒತ್ತುವರಿಯಾಗಿವೆ, ನಶಿಸಿವೆ.
* ಮಳೆ ನೀರು ಕೆರೆಗಳನ್ನು ಸೇರುವಂತೆ ವೈಜ್ಞಾನಿಕ ಯೋಜನೆ ಅಥವಾ ಕ್ರಮ ಕೈಗೊಳ್ಳದೇ ಇರುವುದು. ಹೀಗಾಗಿ, ಭಾರಿ ಪ್ರಮಾಣದ ಮಳೆ ನೀರು ಚರಂಡಿ, ಮೋರಿಗಳ ಮೂಲಕ ವ್ಯರ್ಥವಾಗಿ ಹೊರ ಹೋಗಿದೆ. ಕೆರೆಗಳಿಗೆ ನೀರು ಬರಲು ಮುಖ್ಯವಾಗಿ ಅದಕ್ಕೆ ಹೊಂದಿಕೊಂಡಂತಿರುವ ಕಾಲುವೆಗಳು, ಕೆರೆ ಕುಂಟೆಗಳಲ್ಲಿ ಮೊದಲು ನೀರು ಸಂಗ್ರಹವಾಗಬೇಕು. ಆದರೆ, ಅವುಗಳೆಲ್ಲವೂ ಒತ್ತುವರಿಯಾಗಿರುವುದರಿಂದ ನಗರದಲ್ಲಿ ಎಷ್ಟೇ ಮಳೆ ಬಂದರೂ ಕೆರೆ ಸೇರುತ್ತಿಲ್ಲ ಎನ್ನುತ್ತಾರೆ ತಜ್ಞರು.
Related Articles
Advertisement
ಬಹುತೇಕ ಕೆರೆಗಳ ರಕ್ಷಣೆಗೆ ಕನಿಷ್ಠ ಕ್ರಮಗಳನ್ನೂ ಇದುವರೆಗೆ ಕೈಗೊಂಡಿಲ್ಲ. ಹೀಗಾಗಿ ನೀರು ಕರೆಗಳಿಗೆ ಸೇರುತ್ತಿಲ್ಲ. ರಾಜಕಾಲುವೆಗಳ ಒತ್ತುವರಿ ತೆರವು ಮಾಡಲು ಬಿಬಿಎಂಪಿ ವರ್ಷದಿಂದ ಕಾರ್ಯಚರಣೆ ನಡೆಸುತ್ತಿದೆ. ಆದರೆ, ಇದುವರೆಗೆ ಯಾವ ಕಾಲುವೆಗಳೂ ಸುಸಜ್ಜಿತಗೊಂಡಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಭಾಗದ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ಆರೋಪಿಸುತ್ತಾರೆ.
ಹಾಗಾದರೆ ನೀರು ಎಲ್ಲಿ ಹೋಯಿತು: ಹೌದು ಭಾರಿ ಪ್ರಮಾಣದ ಮಳೆ ಬಂದರೂ, ಕೆರೆಗಳಲ್ಲಿ ನೀರು ಕಾಣಿಸುತ್ತಿಲ್ಲ. ಹಾಗಾದರೆ ನೀರು ಎಲ್ಲಿ ಹೋಯಿತು? ನಗರದಲ್ಲಿ ಬಿದ್ದ ಮಳೆ ನೀರು ಜನಜೀವನ, ಆಸ್ತಿಪಾಸ್ತಿಗೆ ಹಾನಿ ಮಾಡಿ ಚರಂಡಿ, ಮೋರಿಗಳ ಮೂಲಕ ನಗರದ ಹೊರಗೆ ಹರಿದು ಹೋಗಿದೆ.
ಹಾಹಾಕಾರ ನೀಗಿಸಬಹುದು: ನಗರದ ಕೆರೆಗಳಲ್ಲಿ ನೀರು ಸಂಗ್ರಹವಾದರೆ, ಪ್ರತಿ ಬೇಸಿಗೆಯಲ್ಲಿ ಉಂಟಾಗುವ ನೀರಿನ ಹಾಹಾಕಾರ ತಪ್ಪಿಸಲು ಸಾಧ್ಯವಿದೆ. ಕೆರೆಗಳಲ್ಲಿ ನೀರಿದ್ದರೆ ಅಂತರ್ಜಲ ಪ್ರಮಾಣ ಉತ್ತಮವಾಗಿರುತ್ತದೆ. ನಗರದ ಬಹುತೇಕ ಭಾಗ ಬೋರ್‌ವೆಲ್‌ಗಳನ್ನೇ ನೆಚ್ಚಿಕೊಂಡಿರುವುದರಿಂದ ಅಂತರ್ಜಲ ವೃದ್ಧಿಯಾದರೆ ನೀರಿನ ಕೊರತೆ ನೀಗಲಿದೆ.
ನಗರದ ಅರ್ಧ ಭಾಗ ನೀರು ಸಂಗ್ರಹಿಸಿದರೆ ಸಾಕು: ತಜ್ಞರ ಪ್ರಕಾರ 800 ಚದರ ಕಿ.ಮೀ. ವ್ಯಾಪ್ತಿ ಹೊಂದಿರುವ ಬೆಂಗಳೂರಿನಲ್ಲಿ ವಾರ್ಷಿಕ ಅಂದಾಜು 830 ಮಿ.ಮೀ. ವಾಡಿಕೆ ಮಳೆ ಆಗುತ್ತದೆ. ಇದರಲ್ಲಿ 600 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕಟ್ಟಡ, ರಸ್ತೆ ವ್ಯಾಪಿಸಿದೆ. ಈ ಪ್ರದೇಶದಲ್ಲಿ ವಾರ್ಷಿಕ 398.4 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಹರಿದುಹೋಗುತ್ತಿದೆ.
ಉಳಿದ 200 ಚದರ ಕಿ.ಮೀ. ಬಯಲು ಪ್ರದೇಶವಾಗಿದ್ದು, ಇಲ್ಲಿ 66 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಹರಿಯುತ್ತದೆ. ಈ ಪ್ರದೇಶಗಳಲ್ಲಿ ಹರಿಯುವ ನೀರಿನಲ್ಲಿ ಅರ್ಧದಷ್ಟನ್ನು ಸಂಗ್ರಹಿಸಿದರೂ, ಅದು ನಗರದ ಕಾಲುಭಾಗದ ನೀರಿನ ಬೇಡಿಕೆ ಈಡೇರಿಸಲಿದೆ. ಆದರೆ, ಈ ನಿಟ್ಟಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೆಲಸ ಆಗಬೇಕಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಶೇ. 208ರಷ್ಟು ಹೆಚ್ಚು ಮಳೆಬೆಂಗಳೂರು ನಗರ ಜಿಲ್ಲೆಯಲ್ಲಿ ಕಳೆದ ಒಂದು ವಾರ (ಮೇ 15ರಿಂದ 21)ದ ವಾಡಿಕೆ ಮಳೆ 26.5 ಮಿ.ಮೀ. ಬಿದ್ದ ಮಳೆ 81.6 ಮಿ.ಮೀ. ಅಂದರೆ ವಾಡಿಕೆಗಿಂತ ಶೇ. 208ರಷ್ಟು ಹೆಚ್ಚುವರಿ ಮಳೆಯಾ ಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ. ಕೆರೆಗಳು ತುಂಬಲು ಇನ್ನೂ ಒಂದೆರಡು ಮಳೆ ಆಗಬೇಕಾಗುತ್ತದೆ. ಆದರೂ ಕಳೆದ ಒಂದು ವಾರದಲ್ಲಿ ಸುರಿದ ಮಳೆಯಿಂದ ಕೆರೆಗಳಿಗೆ ಸ್ವಲ್ಪ ನೀರು ಬಂದಿದೆ. ಕೆರೆಗಳಿಗೆ ನೀರು ಹರಿದುಹೋಗಲು ಹಲವು ಕ್ರಮಗಳನ್ನೂ ಕೈಗೊಳ್ಳಲಾಗಿದೆ.
-ಎನ್. ಮಂಜುನಾಥ ಪ್ರಸಾದ್, ಆಯುಕ್ತರು, ಬಿಬಿಎಂಪಿ. ಐಐಎಸ್ಸಿಯಲ್ಲಿ ಎರಡು ಹೆಕ್ಟೇರ್ ವಿಸ್ತೀರ್ಣದ ಕೆರೆ ಇದೆ. ನಾಲ್ಕೈದು ದಿನಗಳಲ್ಲಿ ಬಿದ್ದ ಮಳೆಗೆ ಆ ಕೆರೆ ಭರ್ತಿಯಾಗಿದೆ. ಯಾಕೆಂದರೆ, ಕೆರೆಗಳಿಗೆ ಹರಿದುಬರುವ ನೀರುಗಾಲುವೆಗಳು ವ್ಯವಸ್ಥಿತವಾಗಿವೆ.
-ಡಾ.ಟಿ.ವಿ. ರಾಮಚಂದ್ರ, ವಿಜ್ಞಾನಿ, ಐಐಎಸ್ಸಿ * ವಿಜಯಕುಮಾರ್ ಚಂದರಗಿ