ಕನಕಗಿರಿ: ತಾಲೂಕಿನ ಕೆ. ಕಾಟಾಪುರ ಗ್ರಾಮದ ಕೆರೆಯಿಂದ ಶಿರವಾರ, ಕರಡೋಣಾ ಕೆರೆಗಳಿಗೆ ಮತ್ತು ರಾಂಪುರ ಗ್ರಾಮದ ಕೆರೆಯಿಂದ ರಾಮದುರ್ಗಾ ಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷ ಕಳೆಯುತ್ತಿದ್ದರೂ ಕೆರೆಗಳಿಗೆ ಒಂದು ಹನಿ ನೀರು ಹರಿದಿಲ್ಲ.
ಒಣ ಬೇಸಾಯ ಪ್ರದೇಶವಾದ ಕನಕಗಿರಿ ಭಾಗದಲ್ಲಿ ಕೆರೆ ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸಿ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶಾಸಕ ಬಸವರಾಜ ದಢೇಸುಗೂರು ಅವರು ನೀರಾವರಿ ಇಲಾಖೆಯಿಂದ ಎರಡನೇ ಹಂತದಲ್ಲಿ ಮೂರು ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದ್ದರು. ಆದರೆ ಕಾಮಗಾರಿಗೆ ನೀಡಿದ ಸಮಯ ಮುಗಿಯುತ್ತಿದ್ದರೂ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷದಿಂದ ಕಾಮಗಾರಿ ನನೆಗುದ್ದಿಗೆ ಬಿದ್ದಿದೆ.
ಈಗಾಗಲೇ ಕೆರೆಗಳಿಗೆ ಪೈಪ್‌ಲೈನ್ ಮಾಡಲಾಗಿದ್ದು,ಯಂತ್ರಗಳನ್ನು ಅಳಡಿಸಲಾಗಿದೆ. ಈಗಾಗಲೇ ವಿದ್ಯುತ್ ಪರಿಕರಗಳನ್ನು ಅಳವಡಿಸಿದ್ದು, ವಿದ್ಯುತ್ ಸಂಪರ್ಕ ಮಾಡುವ ಕಾರ್ಯ ಬಾಕಿ ಇದೆ. ಉಳಿದ ಕಾಮಗಾರಿಯನ್ನು ನಿಧಾನಗತಿಯಲ್ಲಿ ಗುತ್ತಿಗೆದಾರರು ಮಾಡುತ್ತಿದ್ದಾರೆ. ಇದರಿಂದ ಶಿರವಾರ, ಕರಡೋಣಾ, ರಾಮದುರ್ಗಾ ಗ್ರಾಮಗಳ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಬೇಸಿಗೆ ಕಾಲದ ಮುನ್ನವೇ ಕುಡಿಯುವ ನೀರಿನ ಅಭಾವವಾಗುತ್ತಿದೆ.
ಇದನ್ನೂ ಓದಿ :ಸಿಎಂಗೆ ಯಾವ ಸಮಾಜಕ್ಕೂ ನ್ಯಾಯ ಕೊಡಿಸಲಾಗದು
ಯೋಜನೆ ಬಗ್ಗೆ ಮೆಚ್ಚುಗೆ: ತಾಲೂಕಿನ ಕೆರೆ ತುಂಬಿಸುವ ಯೋಜನೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಭಾಗದಲ್ಲಿ ಮಳೆ ಬಂದರೆ ಮಾತ್ರ ಬೆಳೆ ಎನ್ನುವಂತಹ ದಿನಗಳಿದ್ದವು. ಆದರೆ ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸಿದ ಪರಿಣಾಮ ಕೊಳವೆಬಾವಿಯಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇದರಿಂದ ರೈತರು ಗುಳೆ ಹೋಗುವುದು ನಿಯಂತ್ರಣದಲ್ಲಿದೆ. ಆದ್ದರಿಂದ ಎರಡನೇ ಹಂತ ಕೆರೆ ತುಂಬಿಸುವ ಯೋಜನೆಯನ್ನು ಶೀಘ್ರವೇ ಚಾಲನೆ ನೀಡಿದರೆ ಇನ್ನಷ್ಟು ರೈತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಶಿರವಾರ, ಕರಡೋಣಾ, ರಾಮದುರ್ಗಾ ಗ್ರಾಮದ ರೈತರು.