Advertisement
ಕೆರೆ ಹೂಳೆತ್ತಲು ಬಜೆಟ್‌ನಲ್ಲಿ 500- 600 ಕೋಟಿ ರೂ. ಹಣ ನಿಗದಿಯಾಗಿದೆಯೆಂದು ಪತ್ರಿಕೆಗಳಲ್ಲಿ ಓದುತ್ತೇವೆ. ಯೋಜನೆಯಂತೆ ಕೆರೆ ಹೂಳೆತ್ತುವ ಕಾರ್ಯ ನೋಡಲು ಹೋದರೆ ಕೆರೆಗೆ ಕಾಲುವೆ ಮಾಡುವುದು, ಕಲ್ಲು ಕಟ್ಟುವುದು, ಕೋಡಿ ದುರಸ್ತಿಯೆಂದು ಮಂಜೂರಿಯಾದ ಹಣದ ಮುಕ್ಕಾಲು ಭಾಗ ಖರ್ಚಾಗುತ್ತದೆ. ಕಾಮಗಾರಿ ಮುಗಿದ ಬಳಿಕ ಕಟ್ಟ ಕಡೆಗೆ ಹೂಳೆತ್ತಲು ಬಳಕೆಯಾದ ಹಣದ ಪ್ರಮಾಣ ನೋಡಿದರೆ ಅಚ್ಚರಿಯಾಗುತ್ತದೆ. ಕೆರೆಯ ಸಂಪೂರ್ಣ ಹೂಳು ತೆಗೆದು ಹೆಚ್ಚು ನೀರು ನಿಲ್ಲುವಂತೆ ಮಾಡುವುದು ಬಿಟ್ಟು, ಹೂಳೆತ್ತುವ ಹೆಸರಿನಲ್ಲಿ ಇನ್ನೇನೋ ನಡೆಯುತ್ತಿದೆಯಲ್ಲ? ಎಂಬ ಪ್ರಶ್ನೆ ಕಾಡುತ್ತದೆ. ಕೆರೆ ಕಾಯಕದ ಇಲಾಖೆಯ ತಾಂತ್ರಿಕ ಪರಿಣತರು “ದಂಡೆ ಶಿಥಿಲವಾಗಿತ್ತು’, “ಕಾಲುವೆ ಹಾಳಾಗಿತ್ತು’, “ತೂಬು ಕುಸಿದಿತ್ತು’, “ಕೋಡಿ ಕೊಚ್ಚಿ ಹೋಗಿತ್ತು’ ಎಂದು ಕಾಂಕ್ರೀಟ್ ಕೆಲಸಕ್ಕೆ ಹಣ ಹಾಕಿದೆವೆಂದು ಎಲ್ಲ ಕೆರೆಗಳ ಹೂಳೆತ್ತುವಿಕೆಯ ಸಂದರ್ಭಗಳಲ್ಲಿ ಹೇಳುತ್ತಾರೆ. ಹೀಗಾಗಿ, ಕಳೆದ 30 ವರ್ಷಗಳಿಂದ ನೀರಿಲ್ಲದ ಕೆರೆಗೆ ಮತ್ತೆ ಮತ್ತೆ ಕೋಡಿ ಕಟ್ಟುವ, ಕಾಲುವೆ, ತೂಬು ಮಾಡುವ ಸರಕಾರಿ ಪರಾಕ್ರಮ ನಡೆಯುತ್ತಲೇ ಇದೆ.
ರಾಜ್ಯದಲ್ಲಿ ಹಳ್ಳಿಗರು, ವಿವಿಧ ಸಂಘ ಸಂಸ್ಥೆಗಳು, ಮಠಗಳು, ಉದ್ಯಮಿಗಳು, ಸಿನಿಮಾ ನಟರು ಕೆರೆ ಕಾಯಕ ಮಾಡಿಕೊಂಡಿದ್ದಾರೆ. ಸರಕಾರವು ಸಣ್ಣ ನೀರಾವರಿ ಇಲಾಖೆ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಉದ್ಯೋಗ ಖಾತ್ರಿ, ಜಲಾಮೃತ, ಕೆರೆ ಸಂಜೀವನಿ ಮುಂತಾದ ಯೋಜನೆಗಳ ಮೂಲಕ ಕೆರೆ ಹೂಳೆತ್ತುವ ಕಾರ್ಯ ನಡೆದಿದೆ. ಹೂಳು ತೆಗೆಯುವಾಗಿನ ಸಮಸ್ಯೆ ಒಂದೆರಡಲ್ಲ. ಕೆರೆ ಸಂಪೂರ್ಣ ಒಣಗಿದಾಗ ತೆಗೆಯುವುದು ಸುಲಭ. ಕೆಸರು ಮಣ್ಣು ಎತ್ತುವುದು ಕಷ್ಟ. ಹೂಳು ಹಾಕಲು ಸೂಕ್ತ ಸ್ಥಳ ಬೇಕು. ಸಾಗಾಟಕ್ಕೆ ವಾಹನ ಓಡಾಡುವ ರಸ್ತೆ ಅಗತ್ಯ. ಮಹಾನಗರ, ಸಣ್ಣಪುಟ್ಟ ಪೇಟೆಗಳ ನಡುವಿನ ಕೆರೆಯ ಹೂಳೆತ್ತುವುದೆಂದರೆ ಪೇಟೆಯ ದಾರಿಯಲ್ಲಿ ಹೂಳು ಸಾಗಿಸಬೇಕು. ಮಣ್ಣು ಹೊತ್ತ ಲಾರಿಗಳು ನಗರದ ರಸ್ತೆಯಲ್ಲಿ ಸಂಚರಿಸಿದರೆ ಸುತ್ತಲೂ ಕವಿಯುವ ದೂಳಿಗೆ ಜನ ಶಪಿಸುತ್ತಾರೆ. ಕೆರೆ ಕಾಮಗಾರಿಯ ಭಾಗವಾಗಿ ದಂಡೆಯ ಒಳಪಾರ್ಶ್ವದಲ್ಲಿ ಕಲ್ಲು ಕಟ್ಟಲಾಗುತ್ತದೆ. ದಂಡೆಯಲ್ಲಿ ಆರಾಮದಾಯಕ ಓಡಾಟಕ್ಕೆ ಕಾಂಕ್ರೀಟ್, ಸಿಮೆಂಟ್ ಇಟ್ಟಿಗೆ, ಕಲ್ಲು ಹಾಸಲಾಗುತ್ತದೆ. ಗಿಡಗಳನ್ನು ನೆಟ್ಟು, ಕೂಡಲು ಬೆಂಚುಗಳನ್ನು ನಿರ್ಮಿಸಿ ಮಕ್ಕಳಿಗೆ ಒಂದಷ್ಟು ಆಟಿಕೆ ಇಟ್ಟರೆ ವಾಯುವಿಹಾರಕ್ಕೆ ಬರುವವರಿಗೆ ಅನುಕೂಲವಾಗುತ್ತದೆ. ದನ ಕರು ಬರದಂತೆ, ಅತಿಕ್ರಮಣ ನಡೆಯದಂತೆ ಸುತ್ತ ಕಲ್ಲಿನ ಗೋಡೆ ಕಟ್ಟುವುದು ಕೂಡಾ ಕೆರೆಯ ಕೆಲಸವೇ!
Related Articles
ಕೆರೆಗಳಲ್ಲಿ ಹೂಳು ಎಷ್ಟು ಭರ್ತಿಯಾಗುತ್ತದೆಂದರೆ, ತೂಬುಗಳು ಮುಚ್ಚಿ ಹೋಗಿ ದಂಡೆಯ ಎತ್ತರಕ್ಕೂ ತುಂಬಿರುತ್ತದೆ. ಎಷ್ಟು ಆಳಕ್ಕೆ ಹೂಳು ತೆಗೆಯಬೇಕೆಂದು ಕೇಳಿದಾಗೆಲ್ಲ ತಾಯಿ ಪದರ (ಮದರ್ ಲೇಯರ್)ಕ್ಕೆ ತೊಂದರೆಯಾಗದಂತೆ ಹೂಳು ತೆಗೆಯಬೇಕೆಂಬ ಸಲಹೆ ಎಲ್ಲರದು. ಕೆರೆಯ ತಳ ಭಾಗದ ಪದರವಿದು. ನೀರು ನಿಧಾನ ಇಂಗುವುದಕ್ಕೆ, ಸೋಸಿ ಹೋಗದಂತೆ ತಡೆದು ಬೇಸಿಗೆಯಲ್ಲೂ ನೀರುಳಿಯುವುದಕ್ಕೆ ಸಹಾಯವಾಗುತ್ತದೆ. ಹೂಳೆತ್ತಲು ಜೆ.ಸಿ.ಬಿ, ಹಿಟ್ಯಾಚಿಗಳನ್ನು ಬಳಸುವಾಗ ಯಂತ್ರದ ಅಬ್ಬರದ ಕೆಲಸದಲ್ಲಿ ಸೂಕ್ಷ್ಮವಾದ ಕೆಲಸ ಕಷ್ಟ, ಹೆಚ್ಚು ಹಾನಿಯಾಗದಂತೆ ಕೆಲಸ ನಿರ್ವಹಿಸುವುದು ಮುಖ್ಯ.
Advertisement
ಹೂಳಿಗೆ ಬದಲು ಕಾಂಕ್ರೀಟ್ ಕಾಮಗಾರಿಕೆರೆಯಲ್ಲಿ ಎಷ್ಟೇ ಹೂಳು ತುಂಬಿದ್ದರೂ ಸಣ್ಣ ನೀರಾವರಿ ಇಲಾಖೆ ಒಂದು ಮೀಟರ್ ಆಳದ ಹೂಳು ಮಾತ್ರ ತೆಗೆಯಲು ಹೇಳುತ್ತದೆ. ಕ್ರಿ.ಶ. 1985ರ ಈಚೆಗೆ ರಾಜ್ಯದಲ್ಲಿ ಹೂಳೆತ್ತಿದ ಎಲ್ಲ ಕೆರೆಗಳಲ್ಲಿ ಇಲಾಖೆ ಅನುಸರಿಸಿದ ನಿಯಮವಿದು. ಒಟ್ಟು ಯೋಜನಾ ವೆಚ್ಚದಲ್ಲಿ ಶೇಕಡಾ 10- 15ಕ್ಕಿಂತ ಹೆಚ್ಚು ಹಣವನ್ನು ಇಂದಿಗೂ ಹೂಳೆತ್ತಲು ಬಳಸುವಂತಿಲ್ಲ! ಅಂದರೆ ಕೆರೆ ಹೂಳು ತೆಗೆಯಲು ಒಂದು ಕೋಟಿ ರೂಪಾಯಿ ಮಂಜೂರಿಯಾದರೆ ಅದರಲ್ಲಿ 10-15 ಲಕ್ಷ ರೂಪಾಯಿ ಮಾತ್ರ ಹೂಳು ತೆಗೆಯಲು ಬಳಕೆಯಾಗುತ್ತದೆ. ಇನ್ನುಳಿದ ಹಣ ಆಗಲೇ ಹೇಳಿದಂತೆ ತೂಬು ದುರಸ್ತಿ, ಕಲ್ಲು ಕಟ್ಟುವುದು, ಕಾಲುವೆ ದುರಸ್ತಿ, ಕೆರೆ ಕೋಡಿಯ ಕಾಂಕ್ರೀಟ್ ಕೆಲಸಗಳಿಗೆ ವ್ಯಯವಾಗುತ್ತದೆ. ಕೆರೆ ಸಂಪೂರ್ಣ ಹೂಳು ತೆಗೆಯುವುದು ಅಗತ್ಯವೆಂದು ಎಲ್ಲರೂ ಹೇಳುತ್ತಾರೆ. ಅಧಿಕಾರಿಗಳಿಗೆ ಹೂಳು ತೆಗೆದಿದ್ದಕ್ಕೆ ದಾಖಲೆ ತೋರಿಸುವುದು, ಎಷ್ಟು ಕ್ಯುಬಿಕ್ ಮೀಟರ್ ಹೂಳು ತೆಗೆಯಲಾಗಿದೆಯೆಂಬ ಸರಣಿ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ. ಈ ತಾಪತ್ರಯಗಳೇ ಬೇಡವೆಂದು ಹೂಳೆತ್ತುವ ಹಣ ಕಾಂಕ್ರೀಟ್ ಕಾಮಗಾರಿಯತ್ತ ತಿರುಗಿಸುವ ಲಾಭದಾಯಕ ವ್ಯವಹಾರ ನಮ್ಮಲ್ಲಿ ಬಳಕೆಯಲ್ಲಿದೆ. ಇದನ್ನು ಅಂದಾಜು ಪಟ್ಟಿ ಹಿಡಿದು, ಕಾಂಕ್ರೀಟ್ ಕಾಮಗಾರಿ ಅಳೆದು ಎಲ್ಲರೂ ನೋಡಬಹುದು. ಬೇರೆಯ ಅರ್ಥವೂ ಇದೆ
ಸ್ವಾರಸ್ಯಕರ ಸಂಗತಿಯೆಂದರೆ ಹೂಳು ತೆಗೆಯುವುದು ಎಂಬ ಪದಕ್ಕೆ ಇಲಾಖೆ ಮಟ್ಟದಲ್ಲಿ ಇರುವ ಗೂಢಾರ್ಥವೇ ಬೇರೆ! ಹೂಳಿನ ಹಣದ ಮೇಲೆ ಕಣ್ಣಿಡುವ ಅಧಿಕಾರಿ, ಜನಪ್ರತಿನಿಧಿ ಪರಂಪರೆಯಿಂದ 10 ಲಕ್ಷ ರೂಪಾಯಿ ಹೂಳೆತ್ತಲು ಮಂಜೂರಿಯಾದರೆ, ಅದರ ಅರ್ಧ ಭಾಗ ಹಂಚುವುದಕ್ಕೆ ಖಾಲಿಯಾಗುತ್ತದೆ. ಸರಕಾರಿ ಯೋಜನೆಯ ಹೂಳೆತ್ತುವ ಬಹುತೇಕ ಯಾವ ಕೆರೆ ಕಾರ್ಯವೂ ಇದೇ ಹಿನ್ನಲೆಯಲ್ಲಿ ಯಶಸ್ವಿಯಾಗುತ್ತಿಲ್ಲ. ಸಂಘ ಸಂಸ್ಥೆ, ವ್ಯಕ್ತಿ, ಉದ್ಯಮಿಗಳು, ಮಠಗಳು ಕೆರೆ ಹೂಳೆತ್ತಲು ಹೊರಟಾಗ ಸಂಪೂರ್ಣ ಹೂಳು ತೆಗೆಯಲು ಗಮನ ನೀಡುವುದರಿಂದ ಉತ್ತಮ ಮಾದರಿಗಳಾಗಿ ನಿಲ್ಲುತ್ತವೆ. ಯಾವುದೇ ಕೆರೆಯಲ್ಲಿ ಕೇವಲ ಹೂಳು ಮಾತ್ರ ತೆಗೆಯುವುದೆಂದರೆ ಗುತ್ತಿಗೆದಾರರಿಗಾಗಲಿ, ಅಧಿಕಾರಿಗಳಿಗಾಗಲಿ ಸ್ವಲ್ಪವೂ ಇಷ್ಟವಿಲ್ಲ. ತೂಬು, ಕಾಲುವೆ, ಕೋಡಿ ದುರಸ್ತಿಯೆಂದರೆ ಮಾತ್ರ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಕೆರೆ ಸಂಜೀವಿನಿ ಯೋಜನೆಯ ಆಮೆ ಗತಿಗೆ ಇದು ಮುಖ್ಯ ಕಾರಣ. – ಶಿವಾನಂದ ಕಳವೆ