Advertisement

ಸಾವಿರ ರೂ.ಗಳಲ್ಲಿ ಕೆರೆ ದುರಸ್ತಿ 

04:08 PM Dec 01, 2017 | Team Udayavani |

ಬೆಳ್ತಂಗಡಿ: ಬೆಳಾಲು ಗ್ರಾಮದಲ್ಲಿ ಇದ್ದ ಸಾರ್ವಜನಿಕ ಕೆರೆಯೊಂದಕ್ಕೆ ನಾಗರಿಕರೊಬ್ಬರ ಪ್ರಯತ್ನದಿಂದ ಮರು ಜೀವ ಬಂದಿದೆ. ಉಜಿರೆಯಿಂದ ಬೆಳಾಲಿಗೆ ಸಾಗುವಾಗ ಬೆಳಾಲು ಪೇಟೆಗಿಂತ ಮೊದಲೇ ರಸ್ತೆ ಬದಿಯಲ್ಲಿ ಬಲ ಬದಿಗೆ ಇದೆ ಕೂಡೊಲ್‌ಕೆರೆ. ಈ ಕೆರೆ ಗಿಡಗಂಟಿಗಳಿಂದ ತುಂಬಿತಲ್ಲದೇ ಹೂಳು ತುಂಬಿಕೊಂಡಿತ್ತು. ಈ ಕೆರೆ ಪುರಾತನ ಕೆರೆಯಾಗಿದ್ದು, ಪುನರುಜ್ಜೀವನಗೊಳಿಸಿದರೆ ಸಾಕಷ್ಟು ಮಂದಿಯ ನೀರಿನ ಬೇಡಿಕೆ ಪೂರೈಸಲು ಸಾಧ್ಯವಿತ್ತು.

Advertisement

ಕಾಯಕಲ್ಪ
ಸ್ಥಳೀಯ ಆಡಳಿತ ಜಿ.ಪಂ. ಮೂಲಕ ಕೆರೆಗೆ ಕಾಯಕಲ್ಪ ನೀಡಲು 5 ಲ.ರೂ. ಅನುದಾನ ತರಿಸಿತು. ಯಂತ್ರಗಳು ಬಂದು ಒಂದು ವಾರ ದುಡಿದವು. ಕೆರೆಯ ಹೂಳು ಸನಿಹದಲ್ಲಿ ಇದ್ದವರ ತೋಟ ಸೇರಿತು. ಜತೆಗೆ ನೀರು ಸಂಗ್ರಹವಾಗಲು ಹತ್ತಿರದಲ್ಲೇ ಇದ್ದ ಕಲ್ಲು ಒಡೆದು ಚೆಕ್‌ ಡ್ಯಾಂ ಮಾದರಿಯಲ್ಲಿ ಸಣ್ಣ ಅಣೆಕಟ್ಟು ಕಟ್ಟಲಾಯಿತು. ಇದನ್ನು ಕಂಡ ಊರಿನವರು ಇನ್ನು ನೀರಿನ ಬವಣೆ ತಪ್ಪಿತು ಎಂದುಕೊಂಡರು. ಆದರೆ ಅಸಮರ್ಪಕ ಕಾಮಗಾರಿಯ ಪರಿಣಾಮವೋ ಅಥವಾ ಬೇರಾವುದೋ ಕಾರಣಕ್ಕೊಒಂದು ಹನಿ ನೀರೂ ಸಹ ಕೆರೆಯಲ್ಲಿ ಉಳಿಯಲಿಲ್ಲ. ಕೆರೆ ತನ್ನಷ್ಟಕ್ಕೆ ಒಣಗಿಕೊಂಡೇ ಇತ್ತು.

ಸಹೃದಯನ ಸ್ಪಂದನ
ಇದನ್ನು ಕಂಡ ನಾಗರಿಕರೊಬ್ಬರು ಕೆರೆಯ ಅಭಿವೃದ್ಧಿಗೆ ಕಾರ್ಯೋನ್ಮುಖರಾದರು. ಮರು ದುರಸ್ತಿಗೆಂದು ಯಂತ್ರಗಳನ್ನು ತರಿಸಿದರು. ಸುಮಾರು ಒಂದೂ ಕಾಲು ಗಂಟೆ ಕಾಮಗಾರಿ ನಡೆಸಲಾಯಿತು. ಇದರ ಪರಿಣಾಮ ಕೆರೆಗೊಂದು ಸೂಕ್ತ ಕಟ್ಟೆ ನಿರ್ಮಾಣವಾಯಿತು.ಇನ್ನು ನೀರು ನಿಲ್ಲಬಹುದು ಎಂದುಕೊಂಡರು.

ತುಂಬಿದ ಕೆರೆ
ಕಾಮಗಾರಿ ನಡೆದ ಒಂದೇ ವಾರದಲ್ಲಿ ಕೆರೆ ತುಂಬಿತು. ಈಗ ಕೆರೆಯಲ್ಲಿ ಸಾಕಷ್ಟು ನೀರಿದೆ. ಇದಕ್ಕಾಗಿ ಇವರು ಖರ್ಚು ಮಾಡಿದ್ದು ಕೇವಲ 1,150 ರೂ. ಅಂದರೆ ಒಂದೂ ಕಾಲು ಗಂಟೆಯ ಯಂತ್ರದ ಬಾಡಿಗೆ ಮಾತ್ರ. ಈಗ ಈ ಕೆರೆಯಲ್ಲಿ ನೀರಿದ್ದು, ಸ್ಥಳೀಯಾಡಳಿತ ಇದರ ಸಮರ್ಪಕ ಬಳಕೆ ಹಾಗೂ ಇನ್ನಷ್ಟು ನೀರು ನಿಲ್ಲಲು ಹೂಳು ತೆಗೆಸಿ ಸರಿಯಾದ ವ್ಯವಸ್ಥೆ ಮಾಡಿದರೆ ಸುಮಾರು 100 ಮನೆಗಳ ನೀರಿನ ಬೇಡಿಕೆ ಈಡೇರಿಸಬಹುದು. 

ವಿಶೇಷ ವರದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next