ದೊಡ್ಡಬಳ್ಳಾಪುರ: ಕೆರೆ ಒತ್ತುವರಿ ಹಾಗೂ ಸಾರ್ವಜನಿಕರ ಸಹಕಾರದಿಂದ ನಡೆಯುತ್ತಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಈ ಕುರಿತು ಲೋಕಾಯುಕ್ತ ನ್ಯಾಯ ಮೂರ್ತಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ನವೀನ್ ಕುಮಾರ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಾರ್ವ ಜನಿಕರ ಸಹಕಾರದಿಂದ ನಡೆಯುತ್ತಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆಯುವ ಹಿನ್ನೆಲೆಯಲ್ಲಿ ತಾಲೂಕಿನ ಬಾಶೆಟ್ಟಿಹಳ್ಳಿ ಕೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಪ್ರತಿ ಕೆರೆಯ ಪರಿಶೀಲನೆ: ಕೆರೆಗಳ ಭೇಟಿ ಉದ್ದೇಶದ ಕುರಿತು ಮಾಹಿತಿ ನೀಡಿದ ಅವರು, ಗ್ರಾಮಾಂತರ ಜಿಲ್ಲೆಯಲ್ಲಿ ಕೆರೆಗಳನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳು ಹೆಚ್ಚಾಗಿವೆ. ಈ ಬಗ್ಗೆ ಲೋಕಾಯುಕ್ತ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಪ್ರತಿ ಕೆರೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರದ ನೆರವಿಲ್ಲದೇ ಕೆರೆ ಅಭಿವೃದ್ಧಿ: ಆರು ತಿಂಗಳ ಹಿಂದಷ್ಟೇ ನಗರದ ಮುತ್ತೂರು ಕೆರೆ ಕಾಮಗಾರಿ ಪರಿಶೀಲನೆಗೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರು ಭೇಟಿ ನೀಡಿದ್ದರು. ಈಗ ಕೆರೆಗಳ ಅಭಿವೃದ್ಧಿ ಕಾಮಗಾರಿ ಹೇಗೆ ನಡೆಯುತ್ತಿದೆ, ಯಾವ ಹಂತದಲ್ಲಿದೆ ಎನ್ನುವ ಬಗ್ಗೆ ಖುದ್ದು ಭೇಟಿ ನೀಡಿ ಮಾಹಿತಿ ಸಂಗ್ರಹಿಸುವಂತೆ ತಿಳಿಸಿದ್ದರು. ಆರು ತಿಂಗಳಲ್ಲಿ ಕೆರೆಗಳ ಸ್ವರೂಪವೇ ಬದಲಾಗುವಷ್ಟು ಅಭಿವೃದ್ಧಿ ಕೆಲಸ ನಡೆದಿವೆ. ಸರ್ಕಾರದ ನೆರವಿಲ್ಲದೆಯೂ ಕೆರೆಗಳ ಅಭಿವೃದ್ಧಿಯನ್ನು ಮಾಡಲು ಸಾಧ್ಯವಿದೆ ಎಂಬುದು ಜಿಲ್ಲೆಯಲ್ಲಿ ನಡೆದಿರುವ 24 ಕೆರೆಗಳನ್ನು ನೋಡಿದರೆ ತಿಳಿಯುತ್ತದೆ ಎಂದು ಹೇಳಿದರು.
ಡೀಸಿ ಕಾರ್ಯ ಶ್ಲಾಘನೀಯ: ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಜನರ ಸಹಕಾರ ಸದಾ ದೊರೆಯಲಿದೆ. ಇದಕ್ಕೆ ಸಾಕ್ಷಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕೆರೆಗಳ ಅಭಿವೃದ್ಧಿ ಕಾರ್ಯಗಳು ಕಣ್ಣ ಮುಂದೆ ಇವೆ. ತೀವ್ರವಾಗಿ ಕುಸಿಯುತ್ತಿರುವ ಅಂತರ್ಜಲವನ್ನು ಮತ್ತೆ ಮೇಲೆ ಬರುವಂತೆ ಮಾಡಲು ಕೆರೆಗಳನ್ನು ಉಳಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ಸರ್ಕಾರದ ಮೇಲಷ್ಟೇ ಅಲ್ಲ, ಸಾರ್ವಜನಿಕರ ಮೇಲೂ ಇದೆ. ಇದನ್ನು ಅರ್ಥ ಮಾಡಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಲೋಕಾಯುಕ್ತ ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟೇಶ್, ಲೋಕಾಯುಕ್ತ ಸಿಬ್ಬಂದಿ ಸದಾಶಿವಯ್ಯ, ಸುಧಾಕರ್, ಗ್ರಾಮ ಲೆಕ್ಕಾ ಧಿಕಾರಿ ಮಹೇಶ್, ಭೂ ಮಾಪನ ಇಲಾಖೆಯ ಪರಮೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದು ಜಿಲ್ಲಾ ಲೋಕಾಯುಕ್ತ ಡಿವೈ ಎಸ್‌ಪಿ ನವೀನ್‌ಕುಮಾರ್ ಅವರಿಗೆ ಮಾಹಿತಿ ನೀಡಿದರು.