ಮಲೇಬೆನ್ನೂರು: ಕೆರೆಯಲ್ಲಿ ನೀರು ತುಂಬುವುದರಿಂದ ಆ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ ಎಂದು ಹರಿಹರ ಶಾಸಕ ಎಸ್. ರಾಮಪ್ಪ ಹೇಳಿದರು. ಸಮೀಪದ ಜಿ.ಟಿ. ಕಟ್ಟೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ “ನಮ್ಮೂರು-ನಮ್ಮ ಕೆರೆ’ ಯೋಜನೆಯಡಿ ಪುನಃ ಶ್ಚೇತನಗೊಳಿಸಲಾಗಿರುವ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಗ್ರಾಮಕ್ಕೂ ಕೆರೆಯ ಅವಶ್ಯಕತೆಯಿದೆ. ಧರ್ಮಸ್ಥಳ ಸಂಘದವರು ಕೆರೆಯ ಹೂಳು ತೆಗೆದು ಸ್ವಚ್ಛ ಗೊಳಿಸಿಕೊಟ್ಟಿದ್ದಾರೆ. ಗ್ರಾಮಸ್ಥರು ಕೆರೆ ಒತ್ತುವರಿ ಮಾಡಬಾರದು. ಅಲ್ಲದೆ ಕೆರೆಯ ಸುತ್ತ ಗಲೀಜು ಮಾಡದೆ ಸ್ವಚ್ಛ ವಾಗಿಟ್ಟುಕೊಳ್ಳಬೇಕು. ಕೆರೆ ಅಭಿವೃದ್ಧಿ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಕರ್ತವ್ಯ ಎಂದರು.
ಡಾ| ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದ ಮತ್ತು ಆರ್ಥಿಕ ನೆರವಿನಿಂದ ಧರ್ಮಸ್ಥಳ ಸಂಘ ಬಡವರಿಗೆ ಆಶಾಕಿರಣವಾಗಿದೆ. ಸಂಘದಿಂದ ತೆಗೆದುಕೊಳ್ಳುವ ಸಾಲವನ್ನು ಸದುಪಯೋಗಪಡಿಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಕೊಮಾರನಹಳ್ಳಿ ಕೆರೆ ಅಭಿವೃದ್ಧಿಗೆ ಮಂಜೂರಾಗಿದ್ದ 17 ಕೋಟಿ ರೂ. ಅನುದಾನವನ್ನು ಕಾರಣಾಂತರದಿಂದ ತಡೆ ಹಿಡಿಯಲಾಗಿದೆ. ಕೊಳದ ಮಲ್ಲೇಶ್ವರ ದೇವಸ್ಥಾನದ ರಸ್ತೆ 40 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಪಾಳ್ಯದಿಂದ ಮೂಗಿನಗೊಂದಿ ರಸ್ತೆ ಸುಧಾರಣೆಗೆ 10 ಕೋಟಿ ರೂ. ಅನುದಾನ ಬಂದಿದ್ದು ಆದಷ್ಟು ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಕಲ ಜೀವ ಸಂಕುಲಕ್ಕೆ ಜೀವ ಜಲ ಒದಗಿಸುವ ಉದ್ದೇಶದಿಂದ ಪುನಶ್ಚೇತನಗೊಳಿಸಿದ 346ನೇ ಹಾಗೂ ತಾಲೂಕಿನಲ್ಲಿ 15ನೇ ಕೆರೆಯಾಗಿರುವ ಶ್ರೀ ಆಂಜನೇಯ ಕೆರೆಯನ್ನು ಹಸ್ತಾಂತರಿಸಲು ನಮಗೆ ಸಂತಸವಾಗುತ್ತಿದೆ. ಇನ್ನೂ 10ರಿಂದ 15 ಕೆರೆ ಪುನಶ್ಚೇತನಗೊಳಿಸುವ ಗುರಿ ಹೊಂದಿದ್ದೇವೆ. ಈಗಾಗಲೇ ಹೊನ್ನಾಳಿ, ಚನ್ನಗಿರಿ ತಾಲೂಕಿನಲ್ಲೂ ಕೆರೆ ಅಭಿವೃದ್ಧಿ ಪಡಿಸಿದ್ದೇವೆ ಎಂದರು.
ಕೆರೆ ಅಭಿವೃದ್ಧಿಗೊಳಿಸಿಕೊಟ್ಟಿದ್ದೇವೆ, ಕಾಪಾಡಿಕೊಳ್ಳುವ ಜವಾಬ್ದಾರಿ ಗ್ರಾಮಸ್ಥರ ಮೇಲಿದೆ. ಕೆರೆಯ ಸುತ್ತಮುತ್ತ ಸಗಣಿ ಗೊಬ್ಬರ ಹಾಕಬೇಡಿ. ಗಲೀಜು ಮಾಡಬೇಡಿ. ಕೆರೆಯ ಸುತ್ತ ಗಿಡ-ಮರಗಿಡಗಳನ್ನು ಬೆಳಸಬೇಕು. ಪ್ರತಿಯೊಬ್ಬರೂ ನನ್ನ ಕೆರೆ ಎಂಬ ಭಾವನೆ ತಾಳಿದಲ್ಲಿ ನಮ್ಮ ಶ್ರಮ ಸಾರ್ಥಕವಾಗಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಒ.ಬಿ. ನಿಂಗನಗೌಡ ಮಾತನಾಡಿ, ಸರ್ಕಾರದಿಂದ ಬರುವ ಅನುದಾನವನ್ನುಗ್ರಾಮದ ಅಭಿವೃದ್ಧಿ ಹಾಗೂ ಕೆರೆಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದರು. ಮಲೇಬೆನ್ನೂರು ವಲಯದ ಯೋಜನಾಧಿಕಾರಿ ವಸಂತ ದೇವಾಡಿಗ, ಜಿ.ಟಿ. ಕಟ್ಟೆ ಕೆರೆ ಸಮಿತಿ ಅಧ್ಯಕ್ಷ ಜಿ.ಪಿ. ನಾಗರಾಜಪ್ಪ, ಟಿ. ರಾಮಪ್ಪ, ಸಿದ್ದಪ್ಪ, ಬೀರಪ್ಪ, ದೇವಪ್ಪ, ಟಿ. ರಾಮಪ್ಪ, ಪಿಡಿಒ ನಾಗರಾಜ ಸಾರಥಿ, ವಲಯ ಮೇಲ್ವಿಚಾರಕಿ ಶಾರದಾ, ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.