Advertisement

ಮಳೆಗಾಲದಲ್ಲಿ ತೋಡು, ಬೇಸಗೆಯಲ್ಲಿ ರೋಡು

07:13 AM May 09, 2019 | Team Udayavani |

ಸವಣೂರು: ಮಳೆಗಾಲದಲ್ಲಿ ತೋಡು, ಬೇಸಗೆಯಲ್ಲಿ ರೋಡು ಇದು ಬೆಳಂದೂರು ಜಿ.ಪಂ. ವ್ಯಾಪ್ತಿಯ ಸವಣೂರು ಗ್ರಾ.ಪಂ.ಗೆ ಒಳಪಟ್ಟ ಪಾಲ್ತಾಡಿ ಗ್ರಾಮದ ಪರಣೆಯಿಂದ ಬಂಬಿಲಬೈಲು ಪ್ರದೇಶಕ್ಕೆ ತೆರಳುವ ರಸ್ತೆಯ ಸ್ಥಿತಿ.

Advertisement

ಕಳೆದ ವರ್ಷ ಈ ರಸ್ತೆಯೂ ಮಳೆಗಾಲದಲ್ಲಿ 20 ದಿನಗಳಿಗಿಂತಲೂ ಹೆಚ್ಚು ಬಾರಿ ಮುಳುಗಡೆಯಾಗಿತ್ತು. ಅನಂತರದ ಬೆಳವಣಿಗೆಯಲ್ಲಿ ಇಲ್ಲಿನ ಜನತೆಯ ಮನವಿಯಂತೆ ತಹಶೀಲ್ದಾರ್‌, ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಜಿ.ಪಂ. ಎಂಜಿನಿಯರ್‌ ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದರಿಂದಾಗಿ ಈ ಬಾರಿ ಮಳೆಗಾಲಕ್ಕೂ ಮುನ್ನ ಈ ಸಮಸ್ಯೆ ಬಗೆಹರಿಯುವ ವಿಶ್ವಾಸ ಇಲ್ಲಿನ ಜನರದ್ದು.

50ಕ್ಕೂ ಅಧಿಕ ಮನೆಗಳು
ಪರಣೆಯಿಂದ ಮೀನಕೊಳೆಂಜಿ, ಜಾರಿಗೆತ್ತಡಿ, ಚಾಕೋಟೆತ್ತಡಿ ಸೇರಿದಂತೆ ಬಂಬಿಲಬೈಲು ಪ್ರದೇಶಗಳಿಗೆ ಹೋಗುವ ಜನರ ಹಲವು ದಶಕಗಳ ಸಮಸ್ಯೆ. ಈ ರಸ್ತೆಯ ಮೂಲಕ ಸುಮಾರು 50ಕ್ಕೂ ಅಧಿಕ ಕುಟುಂಬಗಳಿಗೆ ಸಂಪರ್ಕವಿದ್ದು, ಮಳೆಗಾಲದಲ್ಲಿ ಮನೆ ತಲುಪಲು ಹರಸಾಹಸ ಪಡಬೇಕಾದ ಸ್ಥಿತಿ ಇಲ್ಲಿದೆ. ಈ ರಸ್ತೆಯನ್ನು ದಾಟಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳುತ್ತಿದ್ದು, ಸಣ್ಣ ಮಕ್ಕಳನ್ನು ಹೆತ್ತವರು ಭಯದಲ್ಲೇ ಕಳುಹಿಸಬೇಕಾದ ಸ್ಥಿತಿ ಇದೆ.

ಹೆಚ್ಚು ಕೃಷಿಕರಿದ್ದಾರೆ
ಈ ಭಾಗದಲ್ಲಿ ಹೆಚ್ಚು ಮಂದಿ ತರಕಾರಿ, ಅಡಿಕೆ, ತೆಂಗು ಕೃಷಿಕರಿದ್ದಾರೆ. ಕೃಷಿಕರು ಹೆಚ್ಚಾಗಿ ಇದೇ ರಸ್ತೆಯನ್ನು ಬಳಸುತ್ತಿದ್ದು, ಮಳೆಗಾಲದಲ್ಲಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಾಟ ಮಾಡಬೇಕಾದರೆ ಕಷ್ಟ ಪಡಬೇಕಾಗಿದೆ. ಇಲ್ಲಿ ಒಂದು ಸೇತುವೆ ನಿರ್ಮಾಣದ ಅಗತ್ಯವಿದೆ. ಸರಿಯಾದ ಚರಂಡಿ ಹಾಗೂ ಮೋರಿ ನಿರ್ಮಾಣದ ಕಾರ್ಯವಾದಲ್ಲಿ ಸಮಸ್ಯೆಗೆ ಅಲ್ಪಮಟ್ಟಿಗೆ ಮುಕ್ತಿ ಸಿಗಬಹುದು.

ಕಿರು ಸೇತುವೆ ಅಗತ್ಯ
ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ತುಂಬಿ ಹರಿಯುತ್ತದೆ. ರಸ್ತೆಯ ತಳ ಗೋಚರವಾಗದೇ ಇರುವುದರಿಂದ ಜತೆಗೆ ಕೆಸರು ತುಂಬಿರುವುದರಿಂದ ಅಪಾಯಕಾರಿ ಸ್ಥಿತಿಯನ್ನು ತಂದೊಡ್ಡುತ್ತದೆ. ಇಲ್ಲಿ ಕಿರು ಸೇತುವೆಯ ನಿರ್ಮಾಣ ತೀರಾ ಅಗತ್ಯವಾಗಿದೆ. – ವಸಂತ ಗೌಡ ಚಾಕೋಟೆತ್ತಡಿ, ಸ್ಥಳೀಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next